ಟನಲ್ ರಸ್ತೆ ಯೋಜನೆಗೆ ಐಐಎಸ್ಸಿ ಆಕ್ಷೇಪ, ರಾಜ್ಯಪಾಲರಿಗೆ ವರದಿ ಸಲ್ಲಿಕೆ: ಮೆಟ್ರೋವೇ ಟ್ರಾಫಿಕ್‌ಗೆ ಪರಿಣಾಮಕಾರಿ ಎಂದ ತಜ್ಞರು
ಬೆಂಗಳೂರಿನ ಹೆಬ್ಬಾಳ ಟನಲ್ ರಸ್ತೆ ಯೋಜನೆಗೆ ಐಐಎಸ್ಸಿ ತಜ್ಞರ ತಂಡ ಆಕ್ಷೇಪ ವ್ಯಕ್ತಪಡಿಸಿದೆ. ಟನಲ್‌ನಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ರಾಜ್ಯಪಾಲರಿಗೆ ವರದಿ ನೀಡಿದ್ದು, ದೀರ್ಘಾವಧಿಗೆ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಬಲಪಡಿಸಲು ಶಿಫಾರಸು ಮಾಡಿದೆ. ಇದರೊಂದಿಗೆ, ಸುರಂಗ ರಸ್ತೆ ವಿಚಾರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಮುಖ್ಯಾಂಶಗಳು
- ಹೆಬ್ಬಾಳ ಟನಲ್ ಯೋಜನೆಗೆ IISc ಆಕ್ಷೇಪ
- ಟನಲ್‌ನಿಂದ ಟ್ರಾಫಿಕ್ ಹೆಚ್ಚಾಗುವ ಆತಂಕ
- ಮೆಟ್ರೋ ವಿಸ್ತರಣೆಗೆ ತಜ್ಞರ ಶಿಫಾರಸು
ಬೆಂಗಳೂರು, ಸೆಪ್ಟೆಂಬರ್ 3: ಸಿಲಿಕಾನ್ ಸಿಟಿಯ ಹೆಬ್ಬಾಳ ಜಂಕ್ಷನ್ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಟನಲ್ ರಸ್ತೆ ನಿರ್ಮಿಸಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವರದಿ ಆಘಾತ ನೀಡಿದೆ. ಹೆಬ್ಬಾಳ ಟನಲ್ ರಸ್ತೆ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಹೆಚ್ಚಾಗಲಿದೆ ಎಂದು ಐಐಎಸ್ಸಿ ತಜ್ಞರ ತಂಡ ರಾಜ್ಯಪಾಲರಿಗೆ ವರದಿ ನೀಡಿದೆ.
ಸುರಂಗ ಮಾರ್ಗದಿಂದ ಸ್ಥಳೀಯವಾಗಿ ಮಾತ್ರ ತಾತ್ಕಾಲಿಕ ರಿಲೀಫ್
ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಟ್ರಾಫಿಕ್‌ಗೆ 2.28 ಕಿಲೋಮೀಟರ್‌ನ ಈ ಶಾರ್ಟ್ ಟನಲ್ ರಸ್ತೆ ಯಾವುದೇ ಶಾಶ್ವತ ಪರಿಹಾರವಲ್ಲ ಎಂದು ಐಐಎಸ್ಸಿ ಸಂಶೋಧನಾ ತಂಡ ಸ್ಪಷ್ಟಪಡಿಸಿದೆ. ಈ ಸುರಂಗ ಮಾರ್ಗದಿಂದ ಸ್ಥಳೀಯವಾಗಿ ಮಾತ್ರ ತಾತ್ಕಾಲಿಕ ರಿಲೀಫ್ ಸಿಗಬಹುದಷ್ಟೇ. ಆದರೆ ಸುರಂಗದ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಭೀಕರ ಟ್ರಾಫಿಕ್ ಜಾಮ್ ಮುಂದುವರಿಯಲಿದೆ.
ಸುರಂಗ ರಸ್ತೆಯೊಳಗೇ ಉಂಟಾಗಲಿದೆ ಟ್ರಾಫಿಕ್ ಜಾಮ್!
ವಿಶೇಷವಾಗಿ ವೆಟರ್ನರಿ ಆಸ್ಪತ್ರೆ ಹಾಗೂ ಎಸ್ಟೀಮ್ ಮಾಲ್ ಬಳಿ ಹೊಸ ಚೋಕ್‌ಪಾಯಿಂಟ್‌ಗಳು ಸೃಷ್ಟಿಯಾಗಲಿದ್ದು, ವಾಹನಗಳು ಸುರಂಗದೊಳಗೇ ಸಾಲುಗಟ್ಟಿ ನಿಲ್ಲುವ ಭೀತಿ ವ್ಯಕ್ತವಾಗಿದೆ. 2040ಕ್ಕೆ ಈ ಯೋಜನೆ ಪೂರ್ಣಗೊಂಡರೂ ಹೆಬ್ಬಾಳದಿಂದ ಮೇಕ್ರಿ ಸರ್ಕಲ್‌ವರೆಗೆ ಟ್ರಾಫಿಕ್ ದಟ್ಟಣೆ ಕಡಿಮೆಯಾಗುವುದಿಲ್ಲ ಎಂದು ಐಐಎಸ್ಸಿ ತಜ್ಞರು ಕರ್ನಾಟಕ ರಾಜ್ಯಪಾಲರಿಗೆ ವರದಿ ನೀಡಿದ್ದಾರೆ.
ಭಾರಿ ಮಳೆಯಾದರೆ ಟನಲ್ ರಸ್ತೆಯೊಳಗೆ ಪ್ರವಾಹ ಭೀತಿ
ಹೆಬ್ಬಾಳ ಟನಲ್ ರಸ್ತೆ ವಿಚಾರದಲ್ಲಿ ರಸ್ತೆಯ ಸಾಮರ್ಥ್ಯವನ್ನು ತೀರಾ ಕಡಿಮೆ ಅಂದಾಜಿಸಲಾಗಿದ್ದು, ಶೇಕಡ 50ರಿಂದ 80ರಷ್ಟು ಟ್ರಾಫಿಕ್ ಡೈವರ್ಷನ್ ಆಗುತ್ತದೆ ಎಂಬ ಲೆಕ್ಕಾಚಾರ ಸಂಪೂರ್ಣ ಅವೈಜ್ಞಾನಿಕವಾಗಿದೆ. ಎಸ್ಟೀಮ್ ಮಾಲ್ ಬಳಿಯ 60 ಮೀಟರ್ ತಿರುವು ವಾಹನಗಳ ವೇಗ ತಗ್ಗಿಸಿ, ಸಾಮರ್ಥ್ಯ ಕುಸಿತಕ್ಕೆ ಕಾರಣವಾಗಲಿದೆ. ಇದಲ್ಲದೆ, ಹೆಬ್ಬಾಳ ಕೆರೆಯ ಕ್ಯಾಚ್‌ಮೆಂಟ್ ಪ್ರದೇಶದಲ್ಲೇ ಸುರಂಗ ನಿರ್ಮಿಸುವುದರಿಂದ ಭಾರಿ ಮಳೆಯಾದಾಗ ಟನಲ್ ಒಳಗಡೆ ಪ್ರವಾಹ ಸೃಷ್ಟಿಯಾಗುವ ಅಪಾಯವಿದೆ. ಇದು ಹೆಬ್ಬಾಳ ಕೆರೆ, ಪಾರ್ಕ್ ಹಾಗೂ ಹಾಲಿ ಇರುವ ಫ್ಲೈಓವರ್ ಪಿಲ್ಲರ್‌ಗಳ ಅಡಿಪಾಯಕ್ಕೂ ಅಪಾಯ ತಂದೊಡ್ಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯಲ್ಲಿ ಪ್ರಾರಂಭಿಕ ಅಂದಾಜಿಗಿಂತ ಸುಮಾರು ಆರು ಪಟ್ಟು ವೆಚ್ಚ ಹೆಚ್ಚಾಗಲಿದ್ದು, ಟೋಲ್ ದರವೂ ಹೆಚ್ಚಳವಾಗಲಿದೆ. ಇದು ಸಾಮಾನ್ಯ ಜನರ ಓಡಾಟಕ್ಕೆ ಅನುಕೂಲವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಸರ್ಕಾರ ಟೆಂಡರ್ ಕರೆದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ತಜ್ಞರ ತಂಡ, ತಕ್ಷಣ ಕಾಮಗಾರಿ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ.
ಈ ಬಗ್ಗೆ ಮಾತನಾಡಿದ ವಾಹನ ಸವಾರರು, ಟನಲ್ ರೋಡ್‌ನಲ್ಲಿ ಕಾರುಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದರಿಂದ ಯಾವುದೇ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವುದಿಲ್ಲ. ಮೆಟ್ರೋ ಮಾರ್ಗಗಳನ್ನು ವಿಸ್ತರಣೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಎಲ್ಲರೂ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಾಲು ಸಾಲು ವಿರೋಧದ ಮಧ್ಯೆ ಬೆಂಗಳೂರಿನಲ್ಲಿ ಟನಲ್ ರಸ್ತೆ ಗುದ್ದಲಿ ಪೂಜೆಗೆ ಮುಹೂರ್ತ ಫಿಕ್ಸ್
ಒಟ್ಟಿನಲ್ಲಿ ದೀರ್ಘಾವಧಿ ಪರಿಹಾರಕ್ಕೆ ರಸ್ತೆ ವಿಸ್ತರಣೆಯೊಂದೇ ಮಾರ್ಗವಲ್ಲ. ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಸೂಕ್ತ ಎಂದು IISc ಬಲವಾಗಿ ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




