LPG ಸಿಲಿಂಡರ್​​ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್​ ಉದ್ಯಮ: ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!

ಕರ್ನಾಟಕದಲ್ಲಿ ವಾಣಿಜ್ಯ LPG ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರಿನಲ್ಲಿ ಐದೇ ದಿನಗಳಲ್ಲಿ 100 ಕೋಟಿ ರೂಪಾಯಿಯೂ ಅಧಿಕ ನಷ್ಟವಾಗಿದೆ. ಹಲವು ಹೋಟೆಲ್‌ಗಳು ಮುಚ್ಚಿರುವ ಹಿನ್ನೆಲೆ ಮಾಲೀಕರು ಸರ್ಕಾರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೋರಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದ ಮೇಲೂ ಸಿಲಿಂಡರ್​​ಗಳ ಅಭಾವದ ಕರಿನೆರಳು ಬಿದ್ದಿದ್ದು, ಸಂತಸ ಕಸಿದಿಕೊಳ್ಳುವ ಆತಂಕ ವ್ಯಕ್ತವಾಗಿದೆ.

LPG ಸಿಲಿಂಡರ್​​ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್​ ಉದ್ಯಮ: ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Mar 15, 2026 | 7:26 PM

ಬೆಂಗಳೂರು, ಮಾರ್ಚ್​​ 15: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಅದರಲ್ಲೂ ಹೋಟೆಲ್​​ ಉದ್ಯಮವಂತೂ ಇದರಿಂದ ಬಹಳ ಸಮಸ್ಯೆಗೆ ಸಿಲುಕಿದ್ದು, ಹಲವೆಡೆ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ಮೆನುವಿನಿಲ್ಲಿ ಭಾರಿ ಕಡಿತ ಮಾಡಿ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಇದೆಲ್ಲದರ ಪರಿಣಾಮ ಎಂಬಂತೆ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ಕಳೆದ 5 ದಿನಗಳಲ್ಲಿ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಹೋಟೆಲ್​​ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟ್ಯಾಕ್ಸ್ ವಿನಾಯಿತಿಗೆ ಸರ್ಕಾರಕ್ಕೆ ಮನವಿ

ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್​ಗಳಿದ್ದು, ಈ ಪೈಕಿ 4,500 ಹೋಟೆಲ್​​ಗಳು ರಿಜಿಸ್ಟರ್​​ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹೀಗಾಗಿ ಟ್ಯಾಕ್ಸ್ ವಿನಾಯತಿ ನೀಡುವಂತೆ ಹೋಟೆಲ್ ಮಾಲೀಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ . ಪ್ರಾಪರ್ಟಿ ತೆರಿಗೆ ಸೇರಿ ಎಲ್ಲ ವಿಧದ ಟ್ಯಾಕ್ಸ್​​ನಿಂದ ಶೇ.20ರಿಂದ 25ರಷ್ಟು ವಿನಾಯಿತಿ ನೀಡುವಂತೆ ಕೋರಲಾಗಿದೆ. ಇನ್ನು ನಾಳೆಯಿಂದ ರಾಜ್ಯದ ಹೋಟೆಲ್​​ಗಳಿಗೆ ಶೇ.20ರಷ್ಟು LPG ಸಿಲಿಂಡರ್ ಪೂರೈಕೆಯಾಗಲಿದೆ ಎಂದು ಕೇಂದ್ರದಿಂದ ಸೂಚನೆ ಬಂದಿದ್ದು, ಇದು ನೆರವೇರಿದ್ದೇ ಆದಲ್ಲಿ ಹೋಟೆಲ್ ಉದ್ಯಮ ಕೊಂಚ ಉಸಿರಾಡಬಹುದು ಎಂದು ಆಹಾರೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಹಬ್ಬದ ಹೋಳಿಗೆ ತಯಾರಿಗೂ ಸಿಗ್ತಿಲ್ಲ LPG ಸಿಲಿಂಡರ್​​

ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದ್ದು ಹೋಳಿಗೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಸಿಲಿಂಡರ್​​ಗಳ ಕೊರತೆ ಇವುಗಳ ತಯಾರಿ ಮೇಲೆಯೂ ಪ್ರಭಾವ ಬೀರಿದೆ. ವೆರೈಟಿ ಹೋಳಿಗೆ ತಯಾರಿಸುವ ಬಹುತೇಕ ಹೋಳಿಗೆ ಮನೆಗಳು ಬಂದ್​​ ಆಗಿದ್ದು, ಸಂಪಿಗೆ ರಸ್ತೆಯ ಹಳ್ಳಿಮನೆ ಹೋಟೆಲ್ ಹಬ್ಬದ ಹೋಳಿಗೆ ತಯಾರಿಸಲು ಸೌದೆ ಒಲೆ ಮೊರೆ ಹೋಗಿರುವ ದೃಶ್ಯ ಕಂಡುಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:24 pm, Sun, 15 March 26

Follow Us