ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು?

ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಹುಬ್ಬಳ್ಳಿಯ ಹಿರಿಯ ಪಂಚಮಸಾಲಿ ಮುಖಂಡ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ಒಬಿಸಿ ನಾಯಕ ರಘು ಕೌಟಿಲ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನ ಒಬಿಸಿ ತಂತ್ರಕ್ಕೆ ಪ್ರತಿತಂತ್ರ ಹೂಡಲು ಹಾಗೂ ಪ್ರಮುಖ ಸಮುದಾಯಗಳನ್ನು ಮುನ್ನೆಲೆಗೆ ತರಲು ಬಿಜೆಪಿ ನಡೆಸಿರುವ ಈ ಮಹತ್ವದ ಲೆಕ್ಕಾಚಾರದ ಸಂಪೂರ್ಣ ವಿವರ ಇಲ್ಲಿದೆ.

ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು?
ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ
Image Credit source: Facebook and X accounts
Edited By:

Updated on: Jun 08, 2026 | 2:24 PM

ಬೆಂಗಳೂರು, ಜೂನ್ 08: ಬಿಜೆಪಿ (BJP) ಹೈಕಮಾಂಡ್ ಪ್ರಕಟಿಸಿರುವ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಹುಬ್ಬಳ್ಳಿಯ ಹಿರಿಯ ಮುಖಂಡ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ಹಿಂದುಳಿದ ವರ್ಗಗಳ ನಾಯಕ ರಘು ಕೌಟಿಲ್ಯ ಅವರಿಗೆ ಈ ಬಾರಿ ಅದೃಷ್ಟ ಒಲಿದಿದ್ದು, ಅವರ ಆಯ್ಕೆಯ ಹಿಂದೆ ಹೈಕಮಾಂಡ್‌ನ ಮಹತ್ವದ ಲೆಕ್ಕಾಚಾರಗಳಿವೆ.

ಮುಖ್ಯಾಂಶಗಳು

  • ಬಿಜೆಪಿ ಹೈಕಮಾಂಡ್ ವಿಧಾನಪರಿಷತ್ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಹುಬ್ಬಳ್ಳಿಯ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯಗೆ ಅದೃಷ್ಟ ಒಲಿದಿದೆ.
  • ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಲಿಂಗರಾಜ್ ಪಾಟೀಲ್ ಆಯ್ಕೆಗೆ ಕಾರಣಗಳು

ಮೂಲತಃ ಹುಬ್ಬಳ್ಳಿಯವರಾದ ಲಿಂಗರಾಜ್ ಪಾಟೀಲ್ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಕಳೆದ ಬಾರಿ ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ವಿಧಾನಸಭೆಯಿಂದ ಪರಿಷತ್‌ಗೆ ನಡೆಯಬೇಕಿದ್ದ ಚುನಾವಣೆಯ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಇವರಿಗೆ ಟಿಕೆಟ್ ಕೈತಪ್ಪಿತ್ತು. ಇದರಿಂದ ಬೇಸತ್ತು ಇವರು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ಪ್ರಹ್ಲಾದ್ ಜೋಶಿ ಅವರ ಮನೆಗೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಪಂಚಮಸಾಲಿ ಸಮುದಾಯವನ್ನು ಬೆಂಬಲಿಸಲು ಇವರಿಗೆ ಈ ಬಾರಿ ಪ್ರಹ್ಲಾದ್ ಜೋಶಿ ಮತ್ತು ಆರ್. ಅಶೋಕ್ ಅವರ ಸಂಪೂರ್ಣ ಬೆಂಬಲದೊಂದಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ ರಾಜ್ಯಸಭೆಗೆ ಕಣಕ್ಕಿಳಿದ ಪ್ರೊ. ಎಂ. ನಾಗರಾಜ; ಮಾಜಿ ಪ್ರಧಾನಿ ದೇವೇಗೌಡರ ಸ್ಥಾನಕ್ಕೆ ಬಿಜೆಪಿ ಇವರನ್ನೇ ಆರಿಸಿದ್ದೇಕೆ?

ರಘು ಕೌಟಿಲ್ಯ ಆಯ್ಕೆಗೆ ಕಾರಣಗಳು

ರಘು ಕೌಟಿಲ್ಯ ಅವರು ಒಬಿಸಿ ಸಮುದಾಯದ ಅತ್ಯಂತ ಸಣ್ಣ ಜನಾಂಗವಾದ ‘ಮಡಿವಾಳ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಸ್ತುತ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿರುವ ಇವರು, ಈ ಹಿಂದೆ ಮೈಸೂರಿನಿಂದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಕಾಂಗ್ರೆಸ್ ತನ್ನ ನಾಲ್ಕೂ ಅಭ್ಯರ್ಥಿಗಳನ್ನು ಒಬಿಸಿ ಸಮುದಾಯಕ್ಕೆ ನೀಡಿರುವುದರಿಂದ, ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಒಬಿಸಿ ಮುಖವನ್ನು ಮುನ್ನೆಲೆಗೆ ತರಲು ಬಯಸಿದೆ. ಪ್ರಸ್ತುತ ಬಿಜೆಪಿಯಲ್ಲಿ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ನಾಯಕತ್ವ ಮುಂಚೂಣಿಯಲ್ಲಿದ್ದು, ಒಬಿಸಿ ನಾಯಕನ ಹುಡುಕಾಟದಲ್ಲಿದ್ದ ಪಕ್ಷಕ್ಕೆ ರಘು ಕೌಟಿಲ್ಯ ಸೂಕ್ತ ಆಯ್ಕೆಯಾಗಿ ಕಂಡಿದ್ದಾರೆ. ಇವರ ಆಯ್ಕೆಗೆ ಬಿ.ವೈ. ವಿಜಯೇಂದ್ರ ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ
Follow Us