ಬೆಂಗಳೂರಿನಲ್ಲಿ ರೌಡಿಶೀಟರ್ ಕಾರ್ತಿಕೇಯನ್ ಬರ್ಬರ ಹತ್ಯೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ಸಂಖ್ಯೆ ಏರುತ್ತಿದ್ದು, ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

ಬೆಂಗಳೂರು, ಮೇ.07: ಸಿಲಿಕಾನ್ ಸಿಟಿ ಬೆಂಗಳೂರಿನ ಬಾಣಸವಾಡಿ(Banaswadi) ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ. ನಡುರಸ್ತೆಯಲ್ಲಿ ಅಟ್ಟಾಡಿಸಿ ಕಾರ್ತಿಕೇಯನ್ನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಬಳಿಕ ರಕ್ತಸ್ರಾವವಾಗಿ ಕಾರ್ತಿಕೇಯನ್ ರಸ್ತೆಯಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬಾಣಸವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗಷ್ಟೆ ರೌಡಿಶೀಟರ್ ಕ್ಲೋಸ್ ಮಾಡಿಸಿಕೊಂಡಿದ್ದ ಕಾರ್ತಿಕೇಯನ್
ಇನ್ನು ಕಾರ್ತಿಕೇಯನ್ ಮೇಲೆ ಹಲವು ವರ್ಷಗಳಿಂದ ರೌಡಿಶೀಟರ್ ಇತ್ತು. ಇತ್ತೀಚೆಗಷ್ಟೆ ರೌಡಿಶೀಟರ್ ಕ್ಲೋಸ್ ಮಾಡಿಸಿಕೊಂಡಿದ್ದ. ಇತ ವಿವಾದಿತ ಜಾಗಗಳಿಗೆ ಬೇಲಿ ಹಾಕುತ್ತಾ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದ್ದ. ಈ ವೇಳೆ ಮೈಕಲ್ ಮಂಜ ಹಾಗೂ ಸಹಚರರ ವಿರೋಧ ಕಟ್ಟಿಕೊಂಡಿದ್ದ. ಇನ್ನು ಇತನ ಫ್ರೆಂಡ್ಸ್ಗಳ ಬಳಿ ಲೆಸೆನ್ಸ್ ಇರೋ ಗನ್ ಪಡೆದುಕೊಂಡು ಕೆಲವರಿಗೆ ತೋರಿಸಿ ಬೆದರಿಕೆ ಹಾಕುತ್ತಿದ್ದ ಆರೋಪ ಕೂಡ ಕಾರ್ತಿಕೇಯನ್ ವಿರುದ್ದ ಇತ್ತು. ಇದರಿಂದ ರೋಸಿಹೋಗಿದ್ದ ಮೈಕಲ್ ಮಂಜು ಅಂಡ್ ಗ್ಯಾಂಗ್, ಪ್ಲಾನ್ ಮಾಡಿ ಅಟ್ಟಾಡಿಸಿ ಚಾಕು ಹಾಗೂ ಲಾಂಗ್ನಿಂದ ಹೊಡೆದು ಹತ್ಯೆ ಮಾಡಿದೆ. ಹಳೇ ದ್ವೇಷ ಹಾಗೂ ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ಕಿರಿಕ್ ಆಗಿ ಹತ್ಯೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಈ ಕುರಿತು ಬಾಣಸವಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಸಾವು
ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ಜಾಗಿರ ಜಾಡಲದಿನ್ನಿ ಗ್ರಾಮದಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಿಎಲ್ಒ ಆಗಿ ನಿಯೋಜನೆಗೊಂಡಿದ್ದ ಬಸವರಾಜ ಜಗ್ಲಿ(53) ಮೃತ ರ್ದುದೈವಿ. ಬಸವರಾಜ ಜಗ್ಲಿ ಅವರು ಇದೇ ಜಾಗಿರ ಜಾಡಲದಿನ್ನಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿದ್ದರು. ಸದ್ಯ ಚುನಾವಣೆ ಹಿನ್ನೆಲೆ ಜಾಗಿರ ಜಾಡಲದಿನ್ನಿ ಸರ್ಕಾರಿ ಶಾಲೆಯ ಬೂತ್ಗೆ ಬಿಎಲ್ಓ ಆಗಿ ನಿಯೋಜನೆಗೊಂಡಿದ್ದರು. ಇಂದು ಬೆಳಿಗ್ಗೆಯಿಂದ ಚುನಾವಣೆ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್, ಮಧ್ಯಾಹ್ನದ ವೇಳೆ ಬಿಪಿ ಲೋ ಆಗಿ ಕುಸಿದುಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮತ ಹಾಕಲು ತೆರಳುತ್ತಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವು
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದ ಬಳಿ ಖಾಸಗಿ ಬಸ್ಗೆ ಡಿಕ್ಕಿಯಾಗಿ ಬೈಕ್ ಸವಾರ ಮಂಜುನಾಥ್(32) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಕ್ಕನ ಮನೆ ಚುರ್ಚಿಗುಂಡಿಯಲ್ಲಿದ್ದು, ಅಲ್ಲಿಯೇ ಮಂಜುನಾಥ್ ವಾಸವಿದ್ದ. ಇಂದು(ಮೇ.07) ಮತದಾನ ಹಿನ್ನಲೆ ಚುರ್ಚಿಗುಂಡಿಯಿಂದ ಭದ್ರಾವತಿಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Tue, 7 May 24