ಉಪ್ಪಿನ ಬಳಿಕ ಸಕ್ಕರೆ ಬಳಕೆ ಪ್ರಮಾಣಕ್ಕೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ: ಕಾರಣ ಇಲ್ಲಿದೆ

ರಾಜ್ಯದಲ್ಲಿ ಉಪ್ಪಿನ ಬಳಿಕ ಸಕ್ಕರೆ ಬಳಕೆಗೂ ಕಡಿವಾಣ ಹಾಕಲು ಸರ್ಕಾರ ಚಿಂತಿಸಿದೆ. ಮಧುಮೇಹ, ಹೃದ್ರೋಗ ತಡೆಯುವ ನಿಟ್ಟಿನಲ್ಲಿ WHO ಮಾನದಂಡದಂತೆ ಸಿಹಿ, ಪಾನೀಯ ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಮಾರ್ಗಸೂಚಿ ಸಿದ್ಧವಾಗುತ್ತಿದೆ. ಆ ಮೂಲಕ ಸಾಂಕ್ರಾಮಿಕವಲ್ಲದ ಕಾಯಿಲೆಗಳ ನಿಯಂತ್ರಣಕ್ಕೆ ಜನರ ಆಹಾರ ಪದ್ಧತಿ ಬದಲಾವಣೆಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಉಪ್ಪಿನ ಬಳಿಕ ಸಕ್ಕರೆ ಬಳಕೆ ಪ್ರಮಾಣಕ್ಕೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ: ಕಾರಣ ಇಲ್ಲಿದೆ
ಸಕ್ಕರೆ
Image Credit source: Getty Images
Edited By:

Updated on: Sep 28, 2026 | 11:36 AM

ಬೆಂಗಳೂರು, ಸೆಪ್ಟೆಂಬರ್​​ 28: ಉಪ್ಪಿನ ಬಳಿಕ ಈಗ ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅತಿಯಾದ ಸಕ್ಕರೆ ಸೇವನೆಯಿಂದ ಹೃದ್ರೋಗ ಸಮಸ್ಯೆ, ಬೊಜ್ಜು, ಮಧುಮೇಹ, ಫ್ಯಾಟಿ ಲಿವರ್ ಸಮಸ್ಯೆಗಳ ಅಪಾಯ ಹೆಚ್ಚಳ ಹಿನ್ನಲೆ ಸಕ್ಕರೆ ಬಳಕೆಗೆ ರಾಜ್ಯದಲ್ಲಿ ಮೊದಲ ಬಾರಿಗೆ ಮಾನದಂಡ ರೂಪಿಸಲು ಆಹಾರ ಇಲಾಖೆ ಪ್ಲ್ಯಾನ್​​ ಮಾಡಿದೆ. ಸಿಹಿ ಪದಾರ್ಥ ಸೇರಿ ಸಕ್ಕರೆ ಬಳಸಿ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಗರಿಷ್ಠ ಇಂತಿಷ್ಟೇ ಸಕ್ಕರೆ ಬಳಕೆ ಮಾಡಬೇಕು ಎಂದು ಉತ್ಪಾದಕರಿಗೆ ಮಾರ್ಗಸೂಚಿ ನೀಡಲು ಸಿದ್ಧತೆ ನಡೆದಿದೆ. ಆ ಮೂಲಕ ಸಿಹಿ ತಿಂಡಿ, ಪಾನೀಯ, ಪ್ಯಾಕೇಜ್ಡ್ ಆಹಾರಗಳಲ್ಲಿ ಬಳಸುವ ಸಕ್ಕರೆ ಪ್ರಮಾಣದ ಮೇಲೆ ನಿಗಾ ವಹಿಸಲು ಸರ್ಕಾರ ಮುಂದಾಗಿದೆ.

WHO ಪ್ರಕಾರ ಸಕ್ಕರೆ ಬಳಕೆ ಪ್ರಮಾಣ ಎಷ್ಟಿರಬೇಕು?

ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಗಳ ಪ್ರಕಾರ, ವಯಸ್ಕರು ಮತ್ತು ಮಕ್ಕಳು ತಮ್ಮ ದೈನಂದಿನ ಒಟ್ಟು ಕ್ಯಾಲೊರಿ ಬಳಕೆಯಲ್ಲಿ ಫ್ರೀ ಶುಗರ್​​ ಪ್ರಮಾಣವನ್ನು ಶೇಕಡಾ 10ಕ್ಕಿಂತ ಕಡಿಮೆ ಮಾಡಬೇಕು.ಹೆಚ್ಚಿನ ಆರೋಗ್ಯ ಪ್ರಯೋಜನಗಳಿಗಾಗಿ, ಈ ಪ್ರಮಾಣವನ್ನು ಶೇಕಡಾ 5 ಕ್ಕಿಂತ ಕಡಿಮೆಗೆ (ಅಂದರೆ ಸುಮಾರು 25 ಗ್ರಾಂ ಅಥವಾ 6 ಟೀ ಚಮಚ) ತಗ್ಗಿಸುವುದು ಅತ್ಯಂತ ಸೂಕ್ತ ಎಂದು WHO ಶಿಫಾರಸು ಮಾಡಿದೆ. ಹೀಗಾಗಿ ಸಕ್ಕರೆ ಹೆಚ್ಚಿರುವ ಆಹಾರಗಳ ಸೇವನೆ ಕಡಿಮೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮಧುಮೇಹ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳ ನಿಯಂತ್ರಣಕ್ಕೆ ಜನರ ಆಹಾರ ಪದ್ಧತಿ ಬದಲಾವಣೆಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ‘ಆರೋಗ್ಯಕ್ಕೆ ಹಾನಿಕಾರಕ’: ಮದ್ಯದ ಬಾಟಲಿಗಳಲ್ಲಿರುವಂತೆ ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು ಎಚ್ಚರಿಕೆಯ ಸ್ಟಿಕ್ಕರ್​

ಸಕ್ಕರೆ ಜೊತೆಗೆ ಅಧಿಕ ಉಪ್ಪಿನ ಪ್ರಮಾಣ ಸೇವನೆಯೂ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಕಾರಣ ಅದರ ಬಳಕೆ ನಿಯಂತ್ರಣಕ್ಕೂ ಸರ್ಕಾರ ಮುಂದಾಗಿದೆ ಎಂದು ಈ ಹಿಂದೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್​​ ಅವರೇ ಘೋಷಿಸಿದ್ದರು. ಮದ್ಯದ ಬಾಟಲಿಗಳ ಮೇಲೆ ಇರುವಂತಹ ಎಚ್ಚರಿಕೆಗಳ ಮಾದರಿಯಲ್ಲೇ ಉಪ್ಪಿನ ಪ್ಯಾಕೆಟ್‌ಗಳ ಮೇಲೆ “ಆರೋಗ್ಯಕ್ಕೆ ಹಾನಿಕರ” ಎಂಬ ಎಚ್ಚರಿಕೆ ಸ್ಟಿಕ್ಕರ್‌ಗಳನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಜನರಿಗೆ ಉಪ್ಪಿನ ಸರಿಯಾದ ಬಳಕೆಯ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಉಪ್ಪಿನ ಉತ್ಪಾದನೆಗೆ ಒತ್ತು ನೀಡುವುದು ಈ ಕ್ರಮದ ಹಿಂದಿರುವ ಮುಖ್ಯ ಉದ್ದೇಶ ಎಂದವರು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us