
ಬೆಂಗಳೂರು, ಜುಲೈ 24: ಕಾಳಸಂತೆಯಲ್ಲಿ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಅನ್ನಭಾಗ್ಯದ ಅಕ್ಕಿಯ ಮಾರಾಟ ಸರ್ಕಾರಕ್ಕೆ ತಲೆನೋವಾಗಿ ಮಾರ್ಪಟ್ಟಿದ್ದು, ಶತಾಯ ಗತಾಯ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈಗಾಗಲೇ 1,493 ಪ್ರಕರಣಗಳನ್ನು ದಾಖಲಿಸಿ, ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆಯಾದರೂ ಕಾಳಸಂತೆ ಜಾಲ ಇನ್ನೂ ಸಕ್ರಿಯವಾಗಿಯೇ ಇರುವ ಕಾರಣ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಅಕ್ಕಿ ಕಳ್ಳಸಾಗಣೆಗೆ ತಡೆ ಹಾಕಲು ಸರ್ಕಾರ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದ ಮೋಸ ತಪ್ಪಿಸಲು ಸಿಸಿಟಿವಿ ಅಳವಡಿಕೆ, ಕಮಾಂಡ್ ಸೆಂಟರ್ ಮೂಲಕ ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗಳ ರಿಯಲ್ ಟೈಮ್ ಮಾನಿಟರಿಂಗ್, ಯಾವ ಲಾರಿ ಅಂಗಡಿಗೆ ಹೋಗುತ್ತಿದೆ, ಮಧ್ಯದಲ್ಲಿ ಮಾರ್ಗ ಬದಲಿಸುತ್ತಿದೆಯೇ ಎನ್ನುವುದನ್ನೂ ಪರಿಶೀಲಿಸುವ ವ್ಯವಸ್ಥೆ ಜಾರಿಯಾಗಲಿದೆ.
ಇದನ್ನೂ ಓದಿ: ಬಡವರ ಹೊಟ್ಟೆಗೆ ಕನ್ನ ಹಾಕಿದ ಮಾಜಿ ಜಿ.ಪಂ ಸದಸ್ಯನ ಮಗ; ಯಾದಗಿರಿಯಲ್ಲಿ ಬಟಾ ಬಯಲಾಯ್ತು ಅಕ್ರಮ ಅಕ್ಕಿ ದಂಧೆ
ಫಲಾನುಭವಿಗಳಿಗೆ ಇನ್ನಷ್ಟು ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯಲ್ಲೂ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಂಗಡಿಗಳು ತೆರೆದಿರಲಿದ್ದು, ಫಲಾನುಭವಿಗಳು ತಮ್ಮ ಅನುಕೂಲದ ವೇಳೆಯಲ್ಲಿ ಅಕ್ಕಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವದ ಭರವಸೆಯಾಗಿರುವ ಇಂದಿರಾ ಕಿಟ್ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದ್ದು, ಮುಂದಿನ ಎರಡು-ಮೂರು ತಿಂಗಳೊಳಗೆ ಕಿಟ್ ವಿತರಣೆ ಆರಂಭವಾಗಲಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಈ ಕಿಟ್‌ಗಳಿಂದ ಜನರಿಗೆ ಪೌಷ್ಟಿಕ ಆಹಾರ ತಲುಪಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಕುರಿತು ಈ ವೇಳೆ ಮಾತನಾಡಿದ ಸಚಿವರು, ಸರ್ಕಾರ ಆರಂಭದಲ್ಲಿ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರದಿಂದ ಅಗತ್ಯ ಪ್ರಮಾಣದ ಅಕ್ಕಿ ಸಿಗದ ಕಾರಣ ಐದು ಕೆಜಿ ಅಕ್ಕಿ ಹಾಗೂ ಉಳಿದ ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು. ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಮೂರು ಕೆಜಿ ಅಕ್ಕಿ, ಎರಡು ಕೆಜಿ ರಾಗಿ ನೀಡಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ವಿತರಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:31 pm, Fri, 24 July 26