ಕರ್ನಾಟಕದಲ್ಲಿ ದುರ್ಬಲಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ರಾಯಚೂರಲ್ಲಿ ದಾಖಲೆ

Monsoon 2026: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡ ಹಿನ್ನೆಲೆ ತಾಪಮಾನದಲ್ಲಿ ಭಾರಿ ಏರಿಕೆಯಾಗಿದೆ. ರಾಯಚೂರಿನಲ್ಲಿ ಗರಿಷ್ಠ 38.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬೆಂಗಳೂರಿನಲ್ಲೂ ಕಳೆದ ಐದು ವರ್ಷಗಳಲ್ಲೇ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಉಷ್ಣಾಂಶ ವರದಿಯಾಗಿದೆ. ಈ ನಡುವೆಯೂ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದ ಬೆರಳೆಣಿಕೆ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರ್ನಾಟಕದಲ್ಲಿ ದುರ್ಬಲಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ರಾಯಚೂರಲ್ಲಿ ದಾಖಲೆ
ಸಾಂದರ್ಭಿಕ ಚಿತ್ರ
Image Credit source: PTi

Updated on: Jul 14, 2026 | 6:40 PM

ಮುಖ್ಯಾಂಶಗಳು

  • ಕರುನಾಡಲ್ಲಿ ಕುಗ್ಗಿದ ವರುಣಾರ್ಭಟ, ದುರ್ಬಲಗೊಂಡ ಮುಂಗಾರು
  • ಜೂನ್​​ ಮತ್ತು ಜುಲೈ ತಿಂಗಳುಗಳಲ್ಲಿಯೂ ಬೇಸಿಗೆಯ ವಾತಾವರಣ
  • ರಾಯಚೂರಲ್ಲಿ ರಾಜ್ಯದಲ್ಲೇ ಅತ್ಯಧಿಕತ ತಾಪಮಾನ ದಾಖಲು

ಬೆಂಗಳೂರು, ಜುಲೈ 14: ಸಾಮಾನ್ಯವಾಗಿ ಮಳೆ ಹಾಗೂ ತಂಪಾದ ವಾತಾವರಣವಿಣವಿರಬೇಕಿದ್ದ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿಯೂ ಈ ಬಾರಿ ಕರ್ನಾಟಕದಲ್ಲಿ ಬೇಸಿಗೆಯ ಅನುಭವ ಉಂಟಾಗತೊಡಗಿದೆ. ಈ ವರ್ಷ ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಕಾರಣ ತಾಪಮಾನ ಹೆಚ್ಚಳ ಕಂಡಿದೆ. ಕೆಲ ಜಿಲ್ಲೆಗಳ ತಾಪಮಾನ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿಯೂ ಉಷ್ಣಾಂಶ ಹೆಚ್ಚಳವಾಗಿದ್ದು, 32.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಹಿಂದೆಲ್ಲ ಜುಲೈ ಸಂದರ್ಭ ನಗರದ ತಾಪಮಾನ 28 ಡಿಗ್ರಿ ಸೆಲ್ಸಿಯಸ್​​ನ ಆಸುಪಾಸು ಇರುತ್ತಿತ್ತಾದರೂ ಈ ಬಾರಿ ಬದಲಾವಣೆ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜುಲೈ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನ ಇದಾಗಿದೆ. ಇದಕ್ಕೂ ಮೊದಲು 2021ರ ಜುಲೈನಲ್ಲಿ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎನ್ನಲಾಗಿದೆ.

ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ

ಬೆಂಗಳೂರು ಮಾತ್ರವಲ್ಲದೆ ಮೈಸೂರು, ಗದಗ, ಕೊಪ್ಪಳ ಸೇರಿದಂತೆ ಹಲವೆಡೆ ಸಾಮಾನ್ಯಕ್ಕಿಂತ ಸುಮಾರು 4 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ 33 ಗ್ರಿ ಸೆಲ್ಸಿಯಸ್ ಇರಬೇಕಾದ ಗರಿಷ್ಠ ತಾಪಮಾನ ರಾಯಚೂರಿನಲ್ಲಿ 38.4 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಆ ಮೂಲಕ ರಾಯಚೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ರಾಜ್ಯ ಹವಾಮಾನ ಇಲಾಖೆ ಪ್ರಕಾರ, ನೈಋತ್ಯ ಮುಂಗಾರು ದುರ್ಬಲಗೊಂಡಿರುವುದರಿಂದ ಮಳೆಯ ಪ್ರಮಾಣ ಕುಸಿದಿದೆ. ಇದರಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿ, ವಿಶೇಷವಾಗಿ ಉತ್ತರ ಒಳನಾಡು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವಾಮಾನ ಮುಂದುವರಿಯಲಿದೆ.

ಇದನ್ನೂ ಓದಿ: ಮುಂದಿನ 5 ದಿನ ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು; ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ

ಕೆಲ ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಮತ್ತು ದಕ್ಷಿಣ ಒಳನಾಡಿನ ಕೊಡಗು, ಹಾಸನ ಜಿಲ್ಲೆಗಳ ಒಂದೆರಡು ಕಡೆ ಮುಂದಿನ 24 ಗಂಟೆಗಳಲ್ಲಿ 30–40 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಒಂದೆರಡು ಕಡೆ ಬಲವಾದ ಗಾಳಿ ಬೀಸುವ ಸಾಧ್ಯತೆ ಬಗ್ಗೆಯೂ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us