
ಬೆಂಗಳೂರು, ಆಗಸ್ಟ್ 19: ಕರ್ನಾಟಕ ಹಾಲು ಮಹಾಮಂಡಳಿ (KMF)ಯ ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಪಶು ಆಹಾರ ಉತ್ಪಾದನೆ ಮತ್ತು ಅವ್ಯವಹಾರದ ಆರೋಪ ಕೇಳಿಬಂದಿರುವ ಬೆನ್ನಲ್ಲೇ, ಪಶು ಆಹಾರ ನಿರ್ದೇಶಕ ಜಯಕುಮಾರ್ ಅವರದ್ದೆಂದು ಹೇಳಲಾದ ಆಡಿಯೋ ‘ಟಿವಿ9’ಗೆ ಲಭ್ಯವಾಗಿದೆ. ಈ ಆಡಿಯೋದಲ್ಲಿ ಘಟಕದ ಕಚ್ಚಾ ವಸ್ತುಗಳ ಖರೀದಿ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆದಿದೆ.
ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿತ್ತು. ಇದರ ಬೆನ್ನಲ್ಲೇ ನಿರ್ದೇಶಕ ಜಯಕುಮಾರ್ ಅವರದ್ದೆಂದು ಹೇಳಲಾದ ಆಡಿಯೋ ಬಹಿರಂಗವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.
‘ಟಿವಿ9’ಗೆ ಲಭ್ಯವಾಗಿರುವ ಆಡಿಯೋದಲ್ಲಿ ಪಶು ಆಹಾರ ಘಟಕದ ಲ್ಯಾಬ್ ಟೆಕ್ನಿಷಿಯನ್ ವೇದಾವತಿ ಅವರೊಂದಿಗೆ ಜಯಕುಮಾರ್ ಮಾತನಾಡಿರುವುದು ಕೇಳಿಬರುತ್ತದೆ ಎನ್ನಲಾಗಿದೆ. ಕಚ್ಚಾ ವಸ್ತುಗಳ ಖರೀದಿ ಹಾಗೂ ಕಡಿಮೆ ಗುಣಮಟ್ಟದ ಮೊಲಾಸಿಸ್ ಬಳಕೆಯ ಕುರಿತು ಮಾತುಕತೆ ನಡೆದಿದೆ ಎಂಬ ಆರೋಪವಿದೆ. ಘಟಕದ ಖರೀದಿ ಪ್ರಕ್ರಿಯೆ, ಅಧಿಕಾರಿಗಳ ನಡುವಿನ ವ್ಯವಹಾರ ಹಾಗೂ ಸಂಸ್ಥೆಗೆ ಆಗಬಹುದಾದ ನಷ್ಟದ ಬಗ್ಗೆ ಸಂಭಾಷಣೆ ನಡೆದಿರುವುದು ಆಡಿಯೋದಿಂದ ಗೊತ್ತಾಗುತ್ತದೆ ಎನ್ನಲಾಗಿದೆ. ಆದರೆ, ಆಡಿಯೋದ ಸಂಪೂರ್ಣ ವಿವರಗಳು ಮತ್ತು ಅದಕ್ಕೆ ಸಂಬಂಧಿಸಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಸುಮಾರು ₹4.5 ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಕಡಿಮೆ ಗುಣಮಟ್ಟದ ಮೊಲಾಸಿಸ್ ಸೇರಿದಂತೆ ಕಚ್ಚಾ ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ.
ಇದಕ್ಕೂ ಮುನ್ನ ಘಟಕದಲ್ಲಿ ತಯಾರಾಗುವ ಪಶು ಆಹಾರದ ಗುಣಮಟ್ಟದ ಬಗ್ಗೆ ರೈತರಿಂದಲೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಕಳಪೆ ಆಹಾರ ಸೇವನೆಯಿಂದ ಹಸುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಹಾಲಿನ ಇಳುವರಿ ಕಡಿಮೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಇದನ್ನೂ ಓದಿ: ಕಳಪೆ ನಂದಿನಿ ಪಶು ಆಹಾರದಿಂದ ಹಸುಗಳ ಸಾವಾಯ್ತಾ? ಕಳಪೆ ಗುಣಮಟ್ಟದ ಬಗ್ಗೆ ಗಂಭೀರ ಆರೋಪ
ರೈತರ ಹಿತದೃಷ್ಟಿಯಿಂದ ಕೆಎಂಎಫ್ ಅಧಿಕಾರಿಗಳು ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ