KMFನಲ್ಲಿ ಉದ್ಯೋಗದ ಆಮಿಷ: ಲಕ್ಷ ಲಕ್ಷ ಹಣ ಕೊಟ್ಟು ಯಾಮಾರಿದ ಹಲವರು!
ಕರ್ನಾಟಕ ಹಾಲು ಒಕ್ಕೂಟದಲ್ಲಿ (KMF) ಉದ್ಯೋಗ ಕೊಡಿಸುವ ಆಸೆ ತೋರಿಸಿ ಉದ್ಯೋಗಾಕಾಂಕ್ಷಿಗಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. KAS ಅಧಿಕಾರಿಯೆಂದು ನಂಬಿಸಿ 10ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಲಾಗಿದೆ. ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿವರೆಗೂ ಹಣ ಪಡೆದು, ನಂತರ ಸಂಪರ್ಕಕ್ಕೆ ಸಿಗದೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಜನವರಿ 08: ಕರ್ನಾಟಕ ಹಾಲು ಒಕ್ಕೂಟದಲ್ಲಿ (Karnataka Milk Federation) ಕೆಲಸದ ಆಸೆ ತೋರಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು 10ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದ್ದು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಕೆಎಎಸ್ ಅಧಿಕಾರಿಯೆಂದು ನಂಬಿಸಿ ಪರಿಚಯಿಸಿಕೊಂಡು ಆರೋಪಿಗಳು ವಂಚನೆ ನಡೆಸಿದ್ದಾರೆ.
ತಾನು ಕೆಎಎಸ್ ಅಧಿಕಾರಿಯೆಂದು ಆರೋಪಿ ರಾಧಾಕೃಷ್ಣನ್ ದೂರುದಾರರಿಗೆ ಪರಿಚಯಿಸಿಕೊಂಡಿದ್ದ. ಪೇಪರ್ನಲ್ಲಿ ಕೆಎಂಎಫ್ನವರು ನೀಡಿದ ಜಾಹೀರಾತು ತೋರಿಸಿ ಇದನ್ನು ನಾವೇ ಕೊಟ್ಟಿರೋದು. 10 ಲಕ್ಷ ಕೊಟ್ಟರೆ ಈ ಕೆಲಸ ನಿಮ್ಮವರಿಗೆ ಮಾಡಿಸ್ತೀನಿ ಎಂದು ಭರವಸೆ ನೀಡಿದ್ದ. ತಾನು ಕರ್ನಾಟಕ ಹಾಲು ಒಕ್ಕೂಟದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದೇನೆ. ಹೀಗಾಗಿ ಹಣ ಕೊಟ್ಟರೆ ಕೆಲಸ ಪಕ್ಕಾ ಎಂದು ನಂಬಿಕೆ ಹುಟ್ಟಿಸಿದ್ದ. ಈತನ ಮಾತು ನಂಬಿ ಕುಂಟುಂಬದವರು, ಸ್ನೇಹಿತರಿಂದ ದೂರುದಾರ ಹಣ ಹಾಕಿಸಿದ್ದ. ಕೆಲಸದ ಲೀಸ್ಟ್ನಲ್ಲಿ ನಿಮ್ಮ ಹೆಸರಿದೆ ಎಂದು ನಂಬಿಕೆ ಬರುವಂತೆ ಮಾಡಿದ್ದ ಆರೋಪಿ, ನಂತರ ಮೇಲಿನ ಅಧಿಕಾರಿಗಳು ಇನ್ನೂ 15 ಲಕ್ಷ ಹಣ ಕೇಳ್ತಿದ್ದಾರೆ. ಎಲ್ಲಾ ರೆಡಿ ಆಗಿದೆ ಹೆಚ್ಚಿನ ಹಣ ಕೊಟ್ಟರೆ ಕೆಲಸ ಪಕ್ಕಾ ಆಗುತ್ತೆ ಎಂದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ನಂದಿನಿ ಬೂತ್ಗಳಲ್ಲಿ ಬೇರೆ ಬ್ರಾಂಡ್ ಪ್ರಾಡಕ್ಟ್ ಗೆ ಬ್ರೇಕ್; ಕೆಎಂಎಫ್ ಹೊಸ ರೂಲ್ಸ್
ದೂರುದಾರರು ಸದ್ಯ ಸಂಪರ್ಕಕ್ಕೆ ಪ್ರಯತ್ನಿಸಿದಾಗ ಆರೋಪಿ ಕೈಗೇ ಸಿಗುತ್ತಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ದೂರುದಾರ ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಪ್ರತಿಕ್ರಿಯಿಸಿದ್ದು, ಪ್ರಕರಣ ಸಂಬಂಧ ರಾಧಾಕೃಷ್ಣನ್, ನಾಗರಾಜ್ ವಿರುದ್ಧ ದೂರು ದಾಖಲಾಗಿದೆ. ಲಕ್ಷ ಲಕ್ಷ ಹಣ ಪಡೆದು ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಆರೋಪಿಗಳನ್ನ ಬಂಧಿಸಿದ ನಂತರ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.