ಕೊಲ್ಕತ್ತಾ ಘಟನೆ ಬಳಿಕ ಎಚ್ಚೆತ್ತ ಕರ್ನಾಟಕ ಸರ್ಕಾರ, ವೈದ್ಯಕೀಯ ಸಿಬ್ಬಂದಿ ಭದ್ರತೆಗೆ ಮುಂದಾದ ಆರೋಗ್ಯ ಇಲಾಖೆ
ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಇತ್ತ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಭದ್ರತೆಗಾಗಿ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದು, ಸಿಬ್ಬಂದಿಯ ಸುರಕ್ಷತೆ ಟಾಸ್ಕ್ ಪೋರ್ಟ್ ರಚನೆಗೆ ತೀರ್ಮಾನಿಸಿದ್ದಾರೆ.
ಬೆಂಗಳೂರು (ಆಗಸ್ಟ್.20): ಮೊನ್ನೆ ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದಿಂದ ಎಚ್ಚೆತ್ತುಕೊಂಡ ಕರ್ನಾಟಕ ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ ಮತ್ತು ಮಹಿಳೆಯರ ರಕ್ಷಣೆಗೆ ಮುಂದಾಗಿದೆ. ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಲು ವೈದ್ಯಕೀಯ ಕ್ಷೇತ್ರದಲ್ಲಿ ಭದ್ರತೆ, ಭರವಸೆ ಮೂಡಿಸಲು ಇಂದು ವಿಧಾನಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಟಾಸ್ಕ್ಫೋರ್ಸ್ ತಂಡ ರಚಿಸಲು ತೀರ್ಮಾನಿಸಲಾಗಿದೆ.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವಿಶೇಷವಾಗಿ ಮಹಿಳೆಯರ ಮೇಲೆ ಆಗುತ್ತಿರುವ ಕೃತ್ಯದಿಂದಾಗಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಮಹಿಳೆಯರೇ ಎಲ್ಲ ಕಡೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಭದ್ರತೆ ನೀಡಬೇಕಿದೆ. ಕರ್ತವ್ಯ ನಿರತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಭದ್ರತೆ ಹೆಚ್ಚಿಸುವ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭದ್ರತೆ, ಭರವಸೆ ಮೂಡಿಸುವ ನಿಟ್ಟಿನಲ್ಲಿ IMA, Phana, ಖಾಸಗಿ ವೈದ್ಯಕೀಯ ಅಸೋಸಿಯೇಷನ್, ಆಯುಷ್ ಸೇರಿದಂತೆ 12 ಸಂಘಟನೆಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಇದನ್ನೂ ಓದಿ: ಚಿಕಿತ್ಸೆ ಪಡೆದುಕೊಳ್ಳಲು ಬಂದು ಎಂಬಿಬಿಎಸ್ ವಿದ್ಯಾರ್ಥಿನಿಗೆ ಮರ್ಮಾಂಗ ತೋರಿಸಿದ ಯುವಕ
ಟಾಸ್ಕ್ ಫೋರ್ಸ್ ಟೀಂ ರಚನೆ
ಮಹಿಳೆಯರ ಭದ್ರತೆಗೆ ಸಿಸಿಟಿವಿ, ಎಮರ್ಜೆನ್ಸಿ ಕಾಲ್, ಪ್ಯಾನಿಕ್ ಬಟನ್, ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಕಾನೂನುಗಳನ್ನು ಅಧ್ಯಯನ ಮಾಡಿ ಅದರ ಜೊತೆಗೆ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಇನ್ನೊಂದು ತಿಂಗಳಲ್ಲೇ ಟಾಸ್ಕ್ ಫೋರ್ಸ್ ಟೀಂ ರಚನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇನ್ನು ರಾಜ್ಯದಲ್ಲಿ ಝೀಕಾ ವೈರಸ್‌ನಿಂದ ವ್ಯಕ್ತಿ ಸಾವನ್ನಪ್ಪಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಿವಮೊಗ್ಗದಲ್ಲಿ ಕೇವಲ ಝೀಕಾ ವೈರಸ್‌ನಿಂದ ಸತ್ತಿಲ್ಲ. ವ್ಯಕ್ತಿಗೆ ಬೇರೆ ಬೇರೆ ಕಾಯಿಲೆಗಳಿದ್ದವು ಜೊತೆಗೆ ಝೀಕಾ ಅಟ್ಯಾಕ್ ಆಗಿತ್ತು. ಹೀಗಾಗಿ ಮೃತಪಟ್ಟಿದ್ದಾರೆ. ಝೀಕಾ ಬಗ್ಗೆ ಜನ ಭಯಪಡಬೇಕಾಗಿಲ್ಲ. ಗರ್ಭಿಣಿಯರಿಗೆ ಹುಟ್ಟುವ ಮಗುವಿಗೆ ಝೀಕಾದಿಂದ ತೊಂದರೆಯಾಗುತ್ತೆ ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಜಿಗಣಿಯಲ್ಲಿ ಝೀಕಾದಿಂದ ಬಳಲುತ್ತಿದ್ದ ಗರ್ಭಿಣಿಯ ಡೆಲಿವರಿ ಆಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ, ಯಾವುದೇ ತೊಂದರೆ ಇಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Tue, 20 August 24