ವರಮಹಾಲಕ್ಷ್ಮೀ ಹಬ್ಬ ಮುಗಿದರೂ ಕೈಸೇರದ ಗೃಹಲಕ್ಷ್ಮೀ ಹಣ, ಹೆಬ್ಬಾಳ್ಕರ್ ಭರವಸೆ ಠುಸ್!
ವರಮಹಾಲಕ್ಷ್ಮಿ ಹಬ್ಬಕ್ಕೆ ಗೃಹಲಕ್ಷ್ಮಿ ಹಣ ಬರುತ್ತೆ ಎಂದು ಖುದ್ದು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದರು. ಹೀಗಾಗಿ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಸಹ ಹಣ ಬರುತ್ತೆ ಎನ್ನುವ ಕಾತರದಲ್ಲಿದ್ದರು. ಆದ್ರೆ ಹಬ್ಬ ಮುಗಿದು ನಾಲ್ಕೈದು ದಿನ ಕಳೆಯಿತು. ಹಣ ಮಾತ್ರ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಹೀಗಾಗಿ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು, (ಆಗಸ್ಟ್ 20): ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕಳೆದ ಮೂರು ತಿಂಗಳಿನಿಂದ ಸ್ಟಾಪ್ ಆಗಿದೆ. ಈ ಕುರಿತಾಗಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಪ್ರಶ್ನಿಸಿದ್ದಕ್ಕೆ, ಗೃಹಿಣಿಯರ ಖಾತೆಗೆ ವರಮಹಾಲಕ್ಷ್ಮೀ ಹಬ್ಬದ ವೇಳೆ ಹಣ ಬರಲಿದೆ ಎಂದು ಭರವಸೆ ನೀಡಿದ್ದರು, ಆದ್ರೆ ಹೇಳಿ 15 ದಿನಗಳು ಕಳೆಯುವುದಕ್ಕೆ ಬಂದ್ರು ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಹಣ ಮಾತ್ರ ಬಂದಿಲ್ಲ. ಹೀಗಾಗಿ ಸರ್ಕಾರ್ ವಿರುದ್ದ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಹಣ ಜಮೆ ಆಗಿದ್ಯಾ ಇಲ್ಲ ಎಂದು ನೋಡಲು ಮಹಿಳೆಯರು ಬ್ಯಾಂಕ್ಗೆ ಅಲೆದಾಡುವಂತಾಗಿದೆ.
ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಸ್ಟಾಪ್ ಆಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕಾದರೂ ಹಣ ಬರಬಹುದು ಅಂತ ಗೃಹಿಣಿಯರು ಕಾಯುತ್ತಿದ್ದರು. ಆದ್ರೆ ಹಣ ಮಾತ್ರ ಬರಲೇ ಇಲ್ಲ. ಪ್ರತಿದಿನ ಖಾತೆಗೆ ಹಣ ಬಂದಿದ್ಯಾ ಇಲ್ವಾ – ಅಂತ ಕಳೆದ 15 ದಿನಗಳಿಂದ ಗೃಹಲಕ್ಷ್ಮೀ ಫಲಾನುಭವಿಗಳು ಪ್ರತಿದಿನ ಬ್ಯಾಂಕಿಗೂ- ಮನೆಗೂ ಅಲೆದಾಡುತ್ತಿದ್ದಾರೆ. ಆದ್ರೆ ಎಷ್ಟೇ ಬ್ಯಾಂಕ್ ಗಳಿಗೆ ಎಷ್ಟೇ ಅಲೆದ್ರು ಹಣ ಮಾತ್ರ ಖಾತೆಗೆ ಬಂದಿಲ್ಲ. ಹೀಗಾಗಿ ಸರ್ಕಾರದ ವಿರುದ್ದ ಮಹಿಳೆಯರು ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿರುವುದೇಕೆ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟರು ಕಾರಣ
ಸರ್ಕಾರ ಅಧಿಕಾರಕ್ಕೆ ಬರುವ ಸಲುವಾಗಿ ಸಾಲು ಸಾಲು ಯೋಜನೆಗಳನ್ನ ತಂದ್ರು. ಆದ್ರೆ ಒಂದೊಂದು ಯೋಜನೆಗಳನ್ನ ಸರ್ಕಾರದ ಬಳಿ ಬೇಡಿ ಪಡೆಯುವ ಪರಿಸ್ಥಿತಿ ಎದುರಾಗಿದೆ. ಈ ರೀತಿಯ ಸ್ಕೀಮ್ ಗಳನ್ನ ಜಾರಿ ಮಾಡುವ ಬದಲು ಬೆಲೆ ಏರಿಕೆಯನ್ನಾದ್ರು ಕಡಿಮೆ ಮಾಡಿದ್ರೆ ಎಷ್ಟೋ ಜನರಿಗೆ ಅನುಕೂಲವಾಗುತ್ತಿತ್ತು. ಒಂದು ಸ್ಕೀಮ್ ನಾ ಹಣವಾದ್ರು ಸರಿಯಾಗಿ ಖಾತೆಗಳಿಗೆ ಬಂದ್ರೆ ಬೆಲೆ ಏರಿಕೆಯಿಂದ ಬಚಾವ್ ಆಗಬಹುದು. ಆದ್ರೆ ಯಾವ ಸ್ಕೀಮ್ ತುಂಬ ದಿನಗಳ ಕಾಲ ಉಳಿಯುತ್ತೆ ಅಂತನೇ ಅನ್ನುಸ್ತಾ ಇಲ್ಲಾ ಎನ್ನುವುದು ಗೃಹಿಣಿಯರ ಮಾತು.
ಇನ್ನು, ಕುರಿತಾಗಿ ಮಾತಾನಾಡಿರುವ ಲಕ್ಷ್ಮಿ ಹೆಬ್ಬಾಳ್ಕಾರ್ ಹಣವನ್ನ ಬಿಡುಗಡೆ ಮಾಡಿದ್ದೇವೆ. ಕೆಲವೊಬ್ಬರಿಗೆ ಹಣ ಬಂದಿದೆ. ಕೆಲವೊಬ್ಬರಿಗೆ ಹಣ ಬಂದಿಲ್ಲ. ಸದ್ಯ ಎಲ್ಲಾ ಖಾತೆಗಳಿಗೂ ಹಣ ಹೋಗುವುದಕ್ಕೆ ಎಲ್ಲಾ ಪ್ರಕ್ರಿಯೆಗಳನ್ನ ಮಾಡಲಾಗುತ್ತಿದೆ. ಸದ್ಯ ಒಂದು ತಿಂಗಳ ಹಣವನ್ನ ಹಾಕಿದ್ದೇವೆ. ಮುಂದಿನ ತಿಂಗಳು ಉಳಿದ ಹಣವನ್ನ ಹಾಕತ್ತೇವೆ ಎಂದು ಹೇಳಿದ್ದಾರೆ.
ಒಟ್ನಲ್ಲಿ, ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕುವ ಪ್ರೋಸೆಸ್ 15 ದಿನಗಳಿಂದ ಆರಂಭವಾಗಿದ್ದು, ಇನ್ನು 15 ದಿನಗಳಲ್ಲಿ ಎಲ್ಲರ ಖಾತೆಗೆ ಹಣ ಜಮಾವಣೆಯಗುವ ಭರವಸೆಯನ್ನ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದು, ಹೇಳಿದಂತೆ ಖಾತೆಗೆ ಹಣ ಬರುತ್ತಾ ಕಾದುನೋಡ್ಬೇಕಿದೆ.
ಇನ್ನು ಹಣ ಜಮೆ ಆಗದಿರುವುದನ್ನು ನೋಡಿದರೆ ಸರ್ಕಾರ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ಯಾ? ಗೃಹಲಕ್ಷ್ಮೀ ಹಣ ಹೊಂದಿಸಲು ಹೆಣಗಾಡುತ್ತಿದ್ಯಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಯಾಕಂದ್ರೆ ಹಲವರಿಗೆ ಮೂರು ತಿಂಗಳು ಅಂದರೆ ಜೂನ್, ಜುಲೈ ಹಣ ಬಂದಿಲ್ಲ. ಇನ್ನೇನು ಹತ್ತು ದಿನ ಕಳೆದರೆ ಆಗಸ್ಟ್ ತಿಂಗಳ ಹಣ ಹಾಕಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಅದು ಹೇಗೆ ಹಣವನ್ನು ಹೊಂದಿಸುತ್ತದೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:04 pm, Tue, 20 August 24