
ಬೆಂಗಳೂರು, ಜೂನ್ 16: ಯಾರ್ಡ್ ಮರು ವಿನ್ಯಾಸ (Yard Remodelling) ಹಾಗೂ ಸುರಕ್ಷತಾ ಸುಧಾರಣಾ ಕಾಮಗಾರಿಗಳು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಮುಂದಿನ ಕೆಲವು ದಿನ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿಗಳ ಹಿನ್ನೆಲೆ 58 ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 116 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳ ಸಂಚಾರವನ್ನು ಭಾಗಶಃ ವಿಸ್ತರಿಸಲಾಗಿದ್ದು, 26 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದ್ದು, ಐದು ರೈಲುಗಳ ಸಂಚಾರ 15ರಿಂದ 60 ನಿಮಿಷಗಳವರೆಗೆ ನಿಯಂತ್ರಣಗೊಳ್ಳಲಿದೆ. ಕೆಲವು ರೈಲುಗಳ ರದ್ದತಿ ಜೂನ್ 16ರಿಂದಲೇ (ಇಂದಿನಿಂದ) ಆರಂಭವಾಗಲಿದ್ದು, ಸುಮಾರು ಎರಡು ತಿಂಗಳ ಕಾಲ ಇದು ಮುಂದುವರಿಯಲಿದೆ.
ಒಟ್ಟು 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಯಾವುದೇ ವಂದೇ ಭಾರತ್ ರೈಲನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿಲ್ಲ.
ಇದನ್ನೂ ಓದಿ: ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್; ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ
ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ (26651) ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ಆರಂಭವಾಗಲಿದೆ.
ಮೈಸೂರು/ಅಶೋಕಪುರಂನಿಂದ ಆರಂಭವಾಗುವ ಅಥವಾ ಅಂತ್ಯಗೊಳ್ಳುವ 16 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಕೆಎಸ್‌ಆರ್ ಬೆಂಗಳೂರು ನಗರವನ್ನು ಸಂಪರ್ಕಿಸುವ 9 ಮೆಮು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಈ ರೈಲುಗಳು ತುಮಕೂರು ಸೇರಿದಂತೆ ನಗರದ ವಿವಿಧ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು. ಭಾಗಶಃ ರದ್ದುಗೊಂಡ ರೈಲುಗಳು ಬೆಂಗಳೂರಿನ ಇತರ ನಿಲ್ದಾಣಗಳಿಂದ ಆರಂಭವಾಗಲಿದ್ದು ಅಥವಾ ಅಲ್ಲಿ ಅಂತ್ಯಗೊಳ್ಳಲಿವೆ.
ದಕ್ಷಿಣ ಪಶ್ಚಿಮ ರೈಲ್ವೆ (SWR) ಪ್ರಕಾರ, ಈ ಯಾರ್ಡ್ ಮರು ವಿನ್ಯಾಸ ಕಾಮಗಾರಿಯಿಂದ ಹಲವು ಕಾರ್ಯಾಚರಣಾ ಸುಧಾರಣೆಗಳು ಸಾಧ್ಯವಾಗಲಿವೆ.
ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಾಡಿ ಅವರ ಪ್ರಕಾರ, ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಯಶವಂತಪುರ ಗ್ರಿಡ್ ಭಾಗದಲ್ಲಿ ಇನ್ನೆರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:07 am, Tue, 16 June 26