
ಬೆಂಗಳೂರು, ಆಗಸ್ಟ್ 28: ಈ ಹಿಂದೆ ಕೆಎಸ್‌ಆರ್‌ಟಿಸಿ (KSRTC) ಬಸ್ ಕಾಯುವ ಪ್ರಯಾಣಿಕರಿಗೆ ಬಸ್ ಎಲ್ಲಿದೆ? ಯಾವಾಗ ಬರುತ್ತದೆ? ಮಾರ್ಗಮಧ್ಯೆ ಏನಾದರೂ ಕೆಟ್ಟು ನಿಂತಿದೆಯಾ? ಎಂಬ ಯಾವುದೇ ಸ್ಪಷ್ಟ ಮಾಹಿತಿ ಸಿಗದೆ ಪರದಾಡುವ ಪರಿಸ್ಥಿತಿ ಇತ್ತು. ಆದರೆ, ಪ್ರಯಾಣಿಕರ ಈ ಸುದೀರ್ಘ ಸಮಸ್ಯೆಗೆ ಮುಕ್ತಿ ನೀಡಲು ರಾಜ್ಯ ಸಾರಿಗೆ ನಿಗಮ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳು ಫುಲ್ ಹೈಟೆಕ್ ಆಗಲಿದ್ದು, ಪ್ರಯಾಣಿಕರಿಗೆ ಬಸ್ಸುಗಳ ಕ್ಷಣ ಕ್ಷಣದ ಲೈವ್ ಅಪ್‌ಡೇಟ್ಸ್ ಸಿಗಲಿದೆ.
ದೆಹಲಿಯ ಭೀಕರ ನಿರ್ಭಯ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ದೇಶದ ಎಲ್ಲಾ ಯೆಲ್ಲೋ ಬೋರ್ಡ್ (ವಾಣಿಜ್ಯ) ವಾಹನಗಳಿಗೆ ‘ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್’ (VLTD) ಮತ್ತು ‘ಪ್ಯಾನಿಕ್ ಬಟನ್’ ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು. ಈ ನಿರ್ದೇಶನದಂತೆ ಕರ್ನಾಟಕ ಸಾರಿಗೆ ಇಲಾಖೆಯೂ ಕ್ರಮ ಕೈಗೊಂಡಿದೆ.
ಕೆಎಸ್‌ಆರ್‌ಟಿಸಿಯ ಒಟ್ಟು 6,063 ಬಸ್‌ಗಳ ಪೈಕಿ ಈಗಾಗಲೇ 2,344 ಬಸ್‌ಗಳಿಗೆ ಜಿಪಿಎಸ್ ಆಧಾರಿತ VLTD ಸಾಧನಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಉಳಿದ 3,743 ಬಸ್‌ಗಳಿಗೂ ಈ ತಂತ್ರಜ್ಞಾನ ಅಳವಡಿಸಲು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.
ಲೈವ್ ಟ್ರ್ಯಾಕಿಂಗ್: ವಿಎಲ್‌ಟಿಡಿ ಅಳವಡಿಕೆಯಿಂದ ಬಸ್ ಪ್ರಸ್ತುತ ಯಾವ ಸ್ಥಳದಲ್ಲಿದೆ ಎಂಬ ಲೈವ್ ಮಾಹಿತಿಯನ್ನು ಪ್ರಯಾಣಿಕರು ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ಕೇಂದ್ರೀಯ ಕಮಾಂಡ್ ಸೆಂಟರ್: ಎಲ್ಲಾ ಬಸ್‌ಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಲು ಕೆಎಸ್‌ಆರ್‌ಟಿಸಿ ಪ್ರತ್ಯೇಕ ‘ಕಮಾಂಡ್ ಸೆಂಟರ್’ ನಿರ್ಮಿಸುತ್ತಿದೆ.
ಆಪತ್ಕಾಲಕ್ಕೆ ಪ್ಯಾನಿಕ್ ಬಟನ್: ಪ್ರಯಾಣದ ವೇಳೆ ಮಹಿಳೆಯರು ಅಥವಾ ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ಅಥವಾ ಆರೋಗ್ಯ ಸಮಸ್ಯೆ ಎದುರಾದರೆ, ಬಸ್‌ನಲ್ಲಿರುವ ಪ್ಯಾನಿಕ್ ಬಟನ್ ಪ್ರೆಸ್ ಮಾಡಬಹುದು. ತಕ್ಷಣವೇ ಈ ಮಾಹಿತಿ ಕಮಾಂಡ್ ಸೆಂಟರ್‌ಗೆ ತಲುಪಿ, ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಲಿದ್ದಾರೆ.
ಕೆಎಸ್‌ಆರ್‌ಟಿಸಿ ಕೈಗೊಂಡಿರುವ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಬಸ್ ಲೊಕೇಷನ್ ತಿಳಿಯುವುದರಿಂದ ಮತ್ತು ಭದ್ರತೆಗೆ ಪ್ಯಾನಿಕ್ ಬಟನ್ ಇರುವುದರಿಂದ ಇನ್ಮುಂದೆ ನಾವು ಯಾವುದೇ ಭಯವಿಲ್ಲದೆ ಧೈರ್ಯವಾಗಿ ಪ್ರಯಾಣ ಮಾಡಬಹುದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ