
ಬೆಂಗಳೂರು, ಅಕ್ಟೋಬರ್ 11: 600 ರೂಪಾಯಿ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ. ಮಂಜು ಅಲಿಯಾಸ್ ಕೋಳಿ ಮಂಜು ಮೃತ ವ್ಯಕ್ತಿಯಾಗಿದ್ದು, ಆರೋಪಿ ಪಳನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜು ಮತ್ತು ಪಳನಿ ನಡುವೆ ನಿನ್ನೆ ರಾತ್ರಿ ಬಾರ್ ಬಳಿ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಸಿ.ಕೆ.ಅಚ್ಚಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದ ಮಂಜು ಬಳಿ ಆರೋಪಿ ಪಳನಿ, ತನ್ನ ಮೊಬೈಲನ್ನ ಅಡಮಾನ ಇಟ್ಟಿದ್ದ. ಮದ್ಯಸೇವಿಸಲು ಹಣ ಬೇಕಿದ್ದ ಕಾರಣಕ್ಕೆ ಮೊಬೈಲ್ ಅಡವಿಟ್ಟು ದುಡ್ಡು ಪಡೆದಿದ್ದ. ನಿನ್ನೆ ತಡರಾತ್ರಿ ಮೊಬೈಲ್ ವಾಪಾಸ್ಸು ನೀಡುವಂತೆ ಮಂಜುಗೆ ಪಳನಿ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಮಂಜನ ಮೇಲೆ ಅಟ್ಯಾಕ್ ಮಾಡಿದ್ದ. ದೊಣ್ಣೆಯಿಂದ ತಲೆಯ ಭಾಗಕ್ಕೆ ಪಳನಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಂಜು ಪ್ರಾಣಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟ್ರಾಲಿಗಳ ಕೆಳಗೆ 1.2 ಕೆಜಿ ಚಿನ್ನ ಅಡಗಿಸಿ ಸಾಗಾಟ ಯತ್ನ: ಬೆಂಗಳೂರು ಏರ್ಪೋರ್ಟ್ನಲ್ಲಿ ಇಬ್ಬರ ಬಂಧನ
ಜಗಳ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ, ನಿಂದನೆ ಆರೋಪ ಸಂಬಂಧ PSI ಕೆ.ಎಸ್.ಶೋಭಾರಾಣಿ ನ್ಯಾಮತಿ ಠಾಣೆ ಸಿಪಿಐಗೆ ದೂರು ನೀಡಿದ್ದು, ಅದರನ್ವಯ 12 ಜನರ ವಿರುದ್ಧ ಪೊಲೀಸರು ಕಂಪ್ಲೇಟ್ ದಾಖಲಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ಸೋಗಿಲು ಗ್ರಾಮದಲ್ಲಿ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಕಳೆದ ಶುಕ್ರವಾರ ಗಲಾಟೆ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿ ನಿಂದಿಸಿದ್ದರು ಎಂದು ದೂರಲಾಗಿತ್ತು. ಹೀಗಾಗಿ ಅಣ್ಣಪ್ಪ, ಸಂಜು, ಮಂಜಪ್ಪ, ಬಸವರಾಜ್, ಹನುಮಂತಪ್ಪ, ಶಿವು, ಸುನೀಲ್, ಪ್ರದೀಪ್, ಮಹಾಲಕ್ಷ್ಮೀ, ಹಾಲೇಶ್ ಮಲ್ಲಮ್ಮ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮತ್ತು ನಿಂದನೆ ಆರೋಪದಡಿ ನ್ಯಾಮತಿ ಪೊಲೀಸ್ ಠಾಣೆಯಲ್ಲೀಗ ದೂರು ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.