ಬೆಂಗಳೂರಿನಲ್ಲಿ ಮಂಗಳೂರು ವಿವಿ ಗಿಳಿವಿಂಡು ಕಲರವ: ಸೆ.20ರಂದು ಗಿಳಿವಿಂಡು ಪ್ರಾಂತೀಯ ಸಮಾವೇಶ
ಮಂಗಳೂರು ವಿವಿ ಕನ್ನಡ ಅಧ್ಯಯನ ವಿಭಾಗದ ಹಳೆ ವಿದ್ಯಾರ್ಥಿಗಳು ಬೆಂಗಳೂರು ವಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಬೇರೆ ಬೇರೆ ಕ್ಷೇತ್ರಗಳಲ್ಲಿ ಹರಡಿಕೊಂಡಿದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ ಬೆಂಗಳೂರು ಪ್ರಾಂತೀಯ ಸಮಾವೇಶವನ್ನು ನಡೆಸಲಾಗುತ್ತಿದೆ. ಇನ್ನು ಗಿಳಿವಿಂಡು ಪ್ರಾಂತೀಯ ಸಮಾವೇಶದಲ್ಲಿ ಏನೆಲ್ಲಾ ಚರ್ಚೆಗಳು ನಡೆಯಲಿವೆ. ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 15): ಮಂಗಳೂರು ವಿಶ್ವವಿದ್ಯಾನಿಲಯ (Mangaluru University) ಕನ್ನಡ ಅಧ್ಯಯನ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಬೆಂಗಳೂರು ವಲಯದ ಪ್ರಾಂತೀಯ ಸಮಾವೇಶ ಇದೇ ಸೆ.20ರಂದು ನಡೆಯಲಿದೆ. ಬೆಂಗಳೂರು (Bengaluru) ನಗರ ವಿಶ್ವವಿದ್ಯಾಲಯದ ಸಿ.ವಿ.ರಾಮನ್ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮಾವೇಶ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಇನ್ನು ಮಂಗಳೂರು ವಿವಿ ಕನ್ನಡ ವಿಭಾಗದ ಹಳೆ ವಿದ್ಯಾರ್ಥಿ, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ರಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಹಿತಿಗಳಾದ ಸಿ.ಪಿ. ನಾಗರಾಜ್, ವರದಾ ಶ್ರೀನಿವಾಸ, ಸಂಧ್ಯಾರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಡಿ.ಡೊಮಿನಿಕ್ ಪ್ರಸ್ತಾವನೆ ಮಾಡಲಿದ್ದು, ಗಿಳಿವಿಂಡು ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ, ಗಿಳಿವಿಂಡು ಕಾರ್ಯದರ್ಶಿ ಡಾ. ನಾಗಪ್ಪ ಗೌಡ ಆರ್ ಸಮಾವೇಶದಲ್ಲಿ ಉಪಸ್ಥಿತರಿರಲಿದ್ದಾರೆ. ಸಮಾವೇಶದಲ್ಲಿ ಹಳೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಯಲಿದ್ದು, ಡಾ. ಶ್ರೀನಿವಾಸ್ ಗಿಳಿಯಾರ್, ದೀಪಕ್ ಕೆಮ್ಮುಂಜೆ ನಡೆಸಿ ಕೊಡಲಿದ್ದಾರೆ. ಸಮಾವೇಶದಲ್ಲಿ ಮಂಗಳೂರು ವಿವಿ ಕನ್ನಡ ಅಧ್ಯಯನ ವಿಭಾಗದ ಬೆಂಗಳೂರು ವಲಯದಲ್ಲಿರುವ ಹಳೆ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸುವಂತೆ ಗಿಳಿವಿಂಡು ಸಂಚಾಲಕರು ವಿನಂತಿಸಿಕೊಂಡಿದ್ದಾರೆ.
ಕನ್ನಡಕ್ಕಾಗಿ ಗಿಳಿವಿಂಡು ಕಹಳೆ
ಮಂಗಳೂರು ವಿವಿ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರೂಪುಗೊಂಡ ಗಿಳಿವಿಂಡು, ಸ್ನಾತಕೋತ್ತರ ಶಿಕ್ಷಣದ ಬಳಿಕ ಚದುರಿ ಹೋಗಿರುವ ಎಲ್ಲಾ ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡ್ತಿರೋ ಸಂಘಟನೆ. 1968ರಲ್ಲಿ ಆರಂಭಗೊಂಡ ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರ ಮತ್ತು 1980ರಲ್ಲಿ ಆರಂಭಗೊಂಡ ಮಂಗಳೂರು ವಿವಿ ಕನ್ನಡ ವಿಭಾಗದ ಎಂಎ, ಎಂಫಿಲ್, PHD ಅಭ್ಯರ್ಥಿಗಳು ಮತ್ತು ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳನ್ನು ಒಟ್ಟುಗೂಡಿಸುವ ಕೆಲಸವನ್ನು ಗಿಳಿವಿಂಡು ಸಂಘಟನೆ ನಡೆಸುತ್ತಾ ಬರುತ್ತಿದೆ. 2015ರಲ್ಲಿ ಗಿಳಿವಿಂಡು ಮೊದಲ ಸಮಾವೇಶ ನಡೆದಿತ್ತು. ಬಳಿಕ 2016, 2019ರಲ್ಲೂ 2 ಮತ್ತು 3ನೇ ಸಮಾವೇಶಗಳು ಮಂಗಳೂರಿನಲ್ಲಿ ನಡೆದಿವೆ. 2025ರ ನವೆಂಬರ್ 9ರ ಭಾನುವಾರ ಮಂಗಳ ಗಂಗೋತ್ರಿಯಲ್ಲಿ ಗಿಳಿವಿಂಡಿನ 4ನೇ ಸಮಾವೇಶ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರು ವಲಯದ ಪ್ರಾಂತೀಯ ಸಮಾವೇಶ ಸೆಪ್ಟೆಂಬರ್ 20ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಮಂಗಳೂರು ವಿವಿ ಕನ್ನಡ ಅಧ್ಯಯನ ವಿಭಾಗದ ಹಳೆ ವಿದ್ಯಾರ್ಥಿಗಳು ಬೆಂಗಳೂರು ವಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಬೇರೆ ಬೇರೆ ಕ್ಷೇತ್ರಗಳಲ್ಲಿ ಹರಡಿಕೊಂಡಿದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ ಬೆಂಗಳೂರು ಪ್ರಾಂತೀಯ ಸಮಾವೇಶವನ್ನು ನಡೆಸಲಾಗುತ್ತಿದೆ. 1968ರಿಂದ ಈವರೆಗೆ ಕನ್ನಡ ವಿಭಾಗದಲ್ಲಿ ವ್ಯಾಸಂಗ ಮಾಡಿದವರು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳಾಗಿದ್ದವರು ಈ ಸಮಾವೇಶದಲ್ಲಿ ತಪ್ಪದೇ ಭಾಗವಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಜೊತೆಗೆ ಮೈಸೂರು ವಲಯ ಗಿಳಿವಿಂಡು ಪ್ರಾಂತೀಯ ಸಮಾವೇಶ ಅಕ್ಟೋಬರ್ 19 ರಂದು ನಡೆಯಲಿದೆ. ಮೈಸೂರಿನ ನೃಪತುಂಗ ಕನ್ನಡ ಮಾಧ್ಯಮ ಶಾಲೆ (ಸುಯೋಗ ಆಸ್ಪತ್ರೆ ಪಕ್ಕ) ಆವರಣದಲ್ಲಿ ನಡೆಯಲಿದೆ. ಈ ಪ್ರಾಂತೀಯ ಸಮಾವೇಶದಲ್ಲಿ ತಪ್ಪದೇ ಭಾಗವಹಿಸಬೇಕೆಂದು ಸಂಘಟಕರು ಕೋರಿಕೊಂಡಿದ್ದಾರೆ.
ಗಿಳಿವಿಂಡು ಪ್ರಾಂತೀಯ ಸಮಾವೇಶದಲ್ಲಿ ಚರ್ಚೆ
- ಕನ್ನಡದಲ್ಲಿ ಎಂ.ಎ. ಮಾಡಿದವರಿಗೆ ಉದ್ಯೋಗ ಭರವಸೆ
- ಹೊಸ ತಲೆಮಾರಿನವರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಬಗೆ ಹೇಗೆ?
- ಬಹುತ್ವವನ್ನು ರೂಪಿಸಿಕೊಳ್ಳುವ ಬಗೆ
- ಕನ್ನಡಕ್ಕಾಗುವ ಅನ್ಯಾಯವನ್ನು ತಡೆಯುವ ಬಗೆ
- ನಾಯಕತ್ವ ಬೆಳೆಸಿಕೊಳ್ಳುವ ಬಗೆ ಇಂಥ ವಿಷಯಗಳ ಕುರಿತು ಇನ್ನಷ್ಟು ಚರ್ಚೆ .
