ತಮ್ಮ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಸಲು ಮುಂದಾದ ಸಿದ್ದರಾಮಯ್ಯ
ಪರಿಶಿಷ್ಟ ಜಾತಿಗಳು (ಎಸ್ಸಿ) ಒಳಮೀಸಲಾತಿ ಜಾರಿ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಕೆಲ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿವೆ. ಇದರ ನಡುವೆ ಇದೀಗ ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಜಾತಿ ಗಣತಿಗೆ ಮುಂದಾಗಿದೆ. ಈ ಎಲ್ಲಾ ಜಾತಿ ಜ್ವಾಲೆ ನಡುವೆ ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಸಿದ್ದರಾಮಯ್ಯನವರು ತಮ್ಮ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಕೆ ಕಸರತ್ತು ನಡೆಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 15): ಈ ಹಿಂದೆ ಬಸವರಾಜ ಬೊಮ್ಮಾಯಿ (Basavaraj bommai) ಸಿಎಂ ಆಗಿದ್ದಾಗ ಮೀಸಲಾತಿಯ (Caste Reservation) ಜೇನು ಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡರು. ಈಗ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರ ಮೀಸಲಾತಿ ಪರಿಷ್ಕರಣೆಯ ಪ್ರಯತ್ನವನ್ನು ಮುಂದುವರಿಸಿದೆ. ಈಗಾಗಲೇ ಪರಿಶಿಷ್ಟ ಜಾತಿಯ ಮೀಸಲಾತಿ ಪರಿಷ್ಕರಣೆಯನ್ನು ಮಾಡಿ ಮುಗಿಸಿದೆ. ಪರಿಶಿಷ್ಟ ಜಾತಿಯ ಎಲ್ಲ 101 ಜಾತಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ, ಒಳ ಮೀಸಲಾತಿ ನೀಡಿದೆ. ಆದ್ರೆ, ಇದಕ್ಕೆ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳು ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಜೊತೆಗೆ ಅಲೆಮಾರಿ ಸಮುದಾಯಗಳು ತಮಗೆ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ಶಿಫಾರಸ್ಸಿನಂತೆ ಪ್ರತೇಕ ಮೀಸಲಾತಿಯನ್ನು ನೀಡಬೇಕು ಎಂದು ಆಗ್ರಹಿಸಿಸುತ್ತಿವೆ. ಇದರ ನಡುವೆ ಈಗ ಮತ್ತೊಂದು ಮೀಸಲಾತಿ ಪರಿಷ್ಕರಣೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಹೌದು..ಕುರುಬ ಸಮುದಾಯವನ್ನು (Kuruba community) ಪರಿಶಿಷ್ಟ ಪಂಗಡ(ಎಸ್.ಟಿ) ಪಟ್ಟಿಗೆ ಸೇರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಈ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ನಾಳೆ (ಸೆಪ್ಟೆಂಬರ್ 16) ಬೆಂಗಳೂರಿನ ಬಹುಕಟ್ಟಡದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಈಗಾಗಲೇ ಸಭೆಯ ಸೂಚನಾ ಪತ್ರವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಳಿಸಲಾಗಿದೆ. ಸಭೆಯ ಸೂಚನಾ ಪತ್ರದಲ್ಲಿ ಮುಖ್ಯವಾಗಿ ಸಭೆಯ 2 ಅಜೆಂಡಾಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೇಯದಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ಎಂದು ಉಲ್ಲೇಖವಾಗಿದೆ. ಎರಡನೇಯದಾಗಿ ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು ಕರ್ನಾಟಕದ ಗೊಂಡ ಸಮುದಾಯದ ಜೊತೆ ಸಾಮ್ಯತೆ ಹೊಂದಿರುವ ಬಗ್ಗೆ ಸೇರ್ಪಡೆಯ ಬಗ್ಗೆ ಚರ್ಚೆ ಎಂದು ಉಲ್ಲೇಖಿಸಲಾಗಿದೆ. ಮೇಲ್ಕಂಡ ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನಾಳೆ ನಡೆಯುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಭೆಯಲ್ಲಿ ಏನೇನು ಚರ್ಚೆಯಾಗುತ್ತೆ? ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮತ್ತು ಕೇಂದ್ರದ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಏನೇನು ಶಿಫಾರಸ್ಸು ಮಾಡಲಾಗುತ್ತೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಕುರುಬರ ಎಸ್ಟಿ ಸೇರ್ಪಡೆಗೆ ಕರ್ನಾಟಕದ ಶಿಫಾರಸಷ್ಟೇ ಸಾಕೇ? ಕೇಂದ್ರ ಅನುಸರಿಸುವ ಮುಂದಿನ ಹಂತಗಳೇನು?
ಪುತ್ರ ಯತೀಂದ್ರಗೆ ಮೀಸಲು ಕ್ಷೇತ್ರ ಕೊಡಿಸಲು ತಂತ್ರ
ಇನ್ನು ಎಸ್ಟಿ ಪಟ್ಟಿಗೆ ಕುರುಬ ಸಮುದಾಯ ಸೇರಿಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ. ಪುತ್ರ ಯತೀಂದ್ರಗೆ ಮೀಸಲು ಕ್ಷೇತ್ರ ಕೊಡಿಸಲು ಸಿದ್ದರಾಮಯ್ಯ ತಂತ್ರ ಮಾಡುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯನವರು ಸ್ವಜನ ಪಕ್ಷಪಾತ, ಧೃತರಾಷ್ಟ್ರ ಪ್ರೇಮ. ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸೋದು ನಿಜಕ್ಕೂ ದೊಡ್ಡ ಅಪರಾಧ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಂತ್ರ ಇದೆ. ಎಂದರು.
ಈಗಾಗಲೇ ಕುರುಬ ಸಮುದಾಯ ಒಬಿಸಿ ಪಟ್ಟಿಯಲ್ಲಿ ಇದೆ. ಎಸ್‌ಟಿಗೆ ಸೇರ್ಪಡೆಯಾದರೆ ಅಲ್ಲಿ ಇರುವವರಿಗೆ ಅನ್ಯಾಯವಾಗಲಿದೆ ಸಿಎಂ ಇಷ್ಟು ದಿನ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡಿದರು. ಈಗ ತಮ್ಮ ಸಮುದಾಯ ಕುರುಬರನ್ನು ಓಲೈಸಲು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈ ರೀತಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂದು ಭಾರೀ ಪ್ರತಿಭಟನೆಗಳು ನಡೆದಿದ್ದವು. ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಸಹ ನಡೆದಿತ್ತು. ಇದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸೇರಿದಂತೆ ಸಮುದಾಯದ ಬಿಜೆಪಿ ನಾಯಕರು ಸಾಥ್ ನೀಡಿದ್ದರು. ಆದ್ರೆ, ಆ ವೇಳೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿರಲಿಲ್ಲ. ಆದ್ರೆ, ಇದೀಗ ಸಿದ್ದರಾಮಯ್ಯ ತಮ್ಮ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಕೆಗೆ ಮುಂದಾದ್ದು, ಸಮುದಾಯದ ಜನರ ಸಂತಸಕ್ಕೆ ಕಾರಣವಾಗಿದೆ.
