Bengaluru: ಚಾಲಕನ ಜೊತೆ ಮಾತಾಡಿದ್ದಕ್ಕೆ ಪತ್ನಿಯನ್ನೇ ಕೊಚ್ಚಿಕೊಂದ ಪತಿ!

ಬೆಂಗಳೂರಿನ ಗೋವಿಂದರಾಜನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಚಾಲಕನೊಂದಿಗೆ ಮಾತನಾಡಿದ್ದಕ್ಕೆ ಅನುಮಾನದಿಂದ ಪತಿಯೊಬ್ಬ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 40 ವರ್ಷದ ದಾಂಪತ್ಯ ಅನುಮಾನದ ಕಾರಣದಿಂದ ದುರಂತ ಅಂತ್ಯ ಕಂಡಿದ್ದು, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

Bengaluru: ಚಾಲಕನ ಜೊತೆ ಮಾತಾಡಿದ್ದಕ್ಕೆ ಪತ್ನಿಯನ್ನೇ ಕೊಚ್ಚಿಕೊಂದ ಪತಿ!
ಮೃತ ದೇವಿಕಾ ಮತ್ತು ಆರೋಪಿ ಕುಮಾರ್​
Image Credit source: Tv9 Kannada

Updated on: Feb 18, 2026 | 1:42 PM

ಬೆಂಗಳೂರು, ಫೆಬ್ರವರಿ 18: ಪತ್ನಿ ಮೇಲೆ ಅನುಮಾನ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಆಕೆಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವಿಕಾ(50) ಮೃತರಾಗಿದ್ದು, ಆರೋಪಿ ಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದ ವೇಳೆ ದೇವಿಕಾ ಚಾಲಕನ ಜೊತೆ ಮಾತನಾಡಿದ್ದರು. ಇದರಿಂದ ಅನುಮಾನಗೊಂಡಿದ್ದ ಕುಮಾರ್​​, ನಿನ್ನೆ ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಕೂಡಲೇ ಆತನನ್ನ ಮಕ್ಕಳು ತಡೆದಿದ್ದಾರೆ.

ಇನ್ನು ಘಟನೆ ಬಗ್ಗೆ ದೇವಿ ಮತ್ತು ಕುಮಾರ್ ಪುತ್ರಿ ಶಾಲಿನಿ ಪ್ರತಿಕ್ರಿಯಿಸಿದ್ದು, ನಮ್ಮ ತಂದೆ-ತಾಯಿ ಮದುವೆ ಆಗಿ 40 ವರ್ಷ ಆಗಿದೆ. ಈ ಮೊದಲು ನಮ್ಮ ತಂದೆ ಈ ರೀತಿ ಇರಲಿಲ್ಲ. ಕಳೆದ ಒಂದು ತಿಂಗಳಿಂದ ಅನುಮಾನ ಅಂತ ಶುರು ಮಾಡಿದ್ದ. ಮಲಗಿದ್ದಾಗಲೇ ನಮ್ಮ ತಾಯಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಪರಿಸ್ಥಿತಿ ಯಾರಿಗೂ ಬರಬಾರದು. ಕೊಲೆ ಮಾಡಿದ ಬಳಿಕ ಆತ ನಮ್ಮ ತಮ್ಮನಿಗೆ ಫೋನ್ ಮಾಡಿ ನಿಮ್ಮ ತಾಯಿಯನ್ನ ಕೊಂದಿದ್ದೀನಿ ಎಂದು ಹೇಳಿದ್ದಾನೆ. ಅಲ್ಲದೆ, ತಾನು ಕೂಡ ನೇಣು ಹಾಕಿಕೊಳ್ತೇನೆ ಬನ್ನಿ ಎಂದಿದ್ದಾನೆ. ಹೀಗಾಗಿ ವಿಚಾರ ಪೊಲೀಸರಿಗೆ ತಿಳಿಸಿ ಕೂಡಲೇ ಸ್ಥಳಕ್ಕೆ ಹೋಗಲಾಗಿದೆ. ನಮಗೆ ತಂದೆ ಬೇಡ. ಜಾಮೀನು ಎಂದು ನಾವೇನೂ ಹೋಗಲ್ಲ ಎಂದು ಶಾಲಿನಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:  ಪ್ರೇಯಸಿಯ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಮಾಧ್ಯಮಗಳೆದುರು ನಕ್ಕು ಹೇಳಿದ್ದೇನು?

ಸದ್ಯ ಕೊಲೆ ಆರೋಪಿ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದು, ಘಟನೆ ಬಗ್ಗೆ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 4 ದಶಕಗಳ ಕಾಲ ಜೊತೆಯಾಗಿ ಸಂಸಾರ ನಡೆಸಿದ್ದ ದೇವಿಕಾ ಮತ್ತು ಕುಮಾರ್​​ ದಾಂಪತ್ಯ ದುರಂತ ಅಂತ್ಯ ಕಂಡಿದ್ದು, ಆರೋಪಿ ಕುಮಾರ್​​ ಅದ್ಯಾಕೆ ತನ್ನ ಹೆಂಡತಿಯ ಮೇಲೆ ವಿಪರೀತ ಅನುಮಾನ ಹೊಂದಿದ್ದ ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ತಂದೆಯ ವರ್ತನೆಯಿಂದ ಮಕ್ಕಳೂ ಬೆಚ್ಚಿಬಿದ್ದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us