AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ: ‘ಡಿಸೈನ್‌-ಎಕ್ಸ್‌ಥಾನ್‌ 2026’ ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಭಾರತದ ಯುವ ವಿನ್ಯಾಸ ಪ್ರತಿಭೆಗಳಿಗಾಗಿ 'ಡಿಸೈನ್-ಎಕ್ಸ್‌ಥಾನ್ 2026' ಸ್ಪರ್ಧೆಯನ್ನು ಘೋಷಿಸಿದೆ. 2036ನೇ ಇಸವಿಯ ಯುವಜನತೆಯ ಕಲ್ಪನೆಯ ವಾಹನಗಳನ್ನು ವಿನ್ಯಾಸಗೊಳಿಸುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ 4.5 ಲಕ್ಷ ರೂ. ಬಹುಮಾನ ಹಾಗೂ ಮಾರುತಿ ಸುಜುಕಿ ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡುವ ಅವಕಾಶ ಸಿಗಲಿದೆ. ಆಸಕ್ತ ವಿದ್ಯಾರ್ಥಿಗಳು ಜುಲೈ 13ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ: 'ಡಿಸೈನ್‌-ಎಕ್ಸ್‌ಥಾನ್‌ 2026' ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ
'ಡಿಸೈನ್‌-ಎಕ್ಸ್‌ಥಾನ್‌ 2026' ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ Image Credit source: google Gemini
ಭಾವನಾ ಹೆಗಡೆ
|

Updated on:May 11, 2026 | 2:41 PM

Share

ಬೆಂಗಳೂರು, ಮೇ 11: ಭಾರತದಲ್ಲಿ ವಾಹನ ವಿನ್ಯಾಸ ಕ್ಷೇತ್ರದಲ್ಲಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಜನಪ್ರಿಯ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki) ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಜನಪ್ರಿಯ ವಿನ್ಯಾಸ ಸ್ಪರ್ಧೆಯ 2ನೇ ಆವೃತ್ತಿಯಾದ ‘ಡಿಸೈನ್‌-ಎಕ್ಸ್‌ಥಾನ್‌ 2026’ ಅನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಭಾರತದಲ್ಲಿರುವ ವಿವಿಧ ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ವಾಹನಗಳ ವಿನ್ಯಾಸ ಹೇಗಿರಬೇಕು ಎಂಬ ತಮ್ಮ ಕಲ್ಪನೆಯನ್ನು ಸ್ಪರ್ಧೆಯಲ್ಲಿ ಮಂಡಿಸಬಹುದಾಗಿದೆ.

ಮುಖ್ಯಾಂಶಗಳು

  •  ಯುವ ಪ್ರತಿಭೆಗಳಿಗಾಗಿ ಮಾರುತಿ ಸುಜುಕಿ ‘ಡಿಸೈನ್-ಎಕ್ಸ್‌ಥಾನ್ 2026’ ವಿನ್ಯಾಸ ಸ್ಪರ್ಧೆ ಘೋಷಣೆ.
  •  ಭವಿಷ್ಯದ ವಾಹನ ವಿನ್ಯಾಸ ಮಾಡುವ ವಿಜೇತರಿಗೆ 4.5 ಲಕ್ಷ ನಗದು ಬಹುಮಾನ.
  •  ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನ; ಇಂಟರ್ನ್‌ಶಿಪ್ ಮಾಡುವ ಸುವರ್ಣ ಅವಕಾಶ.

ಏನಿದು ಸ್ಪರ್ಧೆಯ ಥೀಮ್?

ಈ ಬಾರಿಯ ಸ್ಪರ್ಧೆಗೆ ಅತ್ಯಂತ ಕುತೂಹಲಕಾರಿ ಥೀಮ್ ನೀಡಲಾಗಿದೆ. “2036ನೇ ಇಸವಿಯಲ್ಲಿ ‘ಜೆನ್ ಜೀ’ ಮತ್ತು ‘ಆಲ್ಫಾ’ ಪೀಳಿಗೆಯ ಯುವಜನರು ಹೊಂದಲು ಬಯಸುವ ಐಕಾನಿಕ್ ವಾಹನ ವಿನ್ಯಾ,” ಎಂಬುದು ಈ ಬಾರಿಯ ಸ್ಪರ್ಧೆಯ ವಿಷಯವಾಗಿದೆ.

2035 ರಿಂದ 2040ರ ಕಾಲಘಟ್ಟಕ್ಕೆ ತಕ್ಕಂತೆ ವಾಹನಗಳು ಹೇಗಿರಬೇಕು, ಇಂದಿನ ಯುವಜನರ ಜೀವನಶೈಲಿಗೆ ಅದು ಹೇಗೆ ಹೊಂದಿಕೊಳ್ಳುತ್ತದೆ, ಪರಿಸರ ಸ್ನೇಹಿ ಅಂಶಗಳನ್ನು ಹೇಗೆ ಅಳವಡಿಸಲಾಗಿದೆ ಹಾಗೂ ವಾಹನದ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಹೇಗೆ ಕೊಂಡಿ ಬೆಸೆಯಲಾಗಿದೆ ಎಂಬುದರ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹಿಸಾಶಿ ಟೆಕ್ಯುಚಿ “ವಾಹನ ವಿನ್ಯಾಸ ಎಂಬುದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ; ಅದು ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ಗ್ರಾಹಕರ ಆಯ್ಕೆಯನ್ನು ಪ್ರಭಾವಿಸುವ ಒಂದು ಕಲೆಯಾಗಿದೆ. ಮೊದಲ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತದ ಯುವ ವಿನ್ಯಾಸಕರ ಅದ್ಭುತ ಪ್ರತಿಭೆ ನಮಗೆ ಕಾಣಲು ಸಿಕ್ಕಿತು. ಯುವಕರಿಗೆ ತಮ್ಮ ಕಲ್ಪನೆಗಳನ್ನು ವಾಸ್ತವ ರೂಪಕ್ಕೆ ತರಲು ಹಾಗೂ ಮಾರುತಿ ಸುಜುಕಿಯೊಂದಿಗೆ ಕೆಲಸ ಮಾಡಿ ಪ್ರಾಯೋಗಿಕ ಅನುಭವ ಪಡೆಯಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ,” ಎಂದರು.

“ಭವಿಷ್ಯದ ವಾಹನಗಳನ್ನು ರೂಪಿಸುವಲ್ಲಿ ಯುವಕರ ಪಾತ್ರ ಬಹಳ ದೊಡ್ಡದು. ಈ ಡಿಸೈನ್‌-ಎಕ್ಸ್-ಥಾನ್ ಸ್ಪರ್ಧೆಯ ಮೂಲಕ ಭಾರತದಲ್ಲಿ ಬಲಿಷ್ಠವಾದ ವಿನ್ಯಾಸ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ,” ಎಂದು ಅವರು ತಿಳಿಸಿದರು.

ಭಾರೀ ಯಶಸ್ಸು ಕಂಡಿತ್ತು ಮೊದಲ ಆವೃತ್ತಿ

2025ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ 70ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್, ವಿಐಟಿ ವೆಲ್ಲೂರು ಮತ್ತು ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ವಿಜೇತರಾಗಿ ಹೊರಹೊಮ್ಮಿದ್ದರು. ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 8 ವಿದ್ಯಾರ್ಥಿಗಳು ಪ್ರಸ್ತುತ ಮಾರುತಿ ಸುಜುಕಿ ವಿನ್ಯಾಸ ತಂಡದಲ್ಲಿ 6 ತಿಂಗಳ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.

ವಿಜೇತರಿಗೆ ಇದೆ ಬಂಪರ್‌ ಬಹುಮಾನ

ವಿಜೇತರಿಗೆ 4.5 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಅಲ್ಲದೆ, ಟಾಪ್ 3 ತಂಡಗಳಿಗೆ ಮಾರುತಿ ಸುಜುಕಿ ವಿನ್ಯಾಸ ತಂಡದೊಂದಿಗೆ 6 ತಿಂಗಳ ಕಾಲ ಕೆಲಸ ಮಾಡುವ (ಇಂಟರ್ನ್‌ಶಿಪ್) ಅವಕಾಶ ಸಿಗಲಿದೆ.

4 ರಿಂದ 10ನೇ ಸ್ಥಾನ ಪಡೆಯುವ ತಂಡಗಳಿಗೂ ಪ್ರಶಂಸನಾ ಪತ್ರ ಹಾಗೂ ಮುಂದೆ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ. ಇದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಮೆಟ್ಟಿಲಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಜುಲೈ 13, 2026 ರೊಳಗೆ ಮಾರುತಿ ಸುಜುಕಿ ಡಿಸೈನ್‌-ಎಕ್ಸ್-ಥಾನ್‌ನ ಅಧಿಕೃತ ಲಿಂಕ್ (https://marutisuzuki.ent.box.com/s/qq6wj8scuf2jbgjjvem3tcnogdlatvs5) ಮೂಲಕ ಅರ್ಜಿ ಸಲ್ಲಿಸಬಹುದು. ಬದಲಾಗುತ್ತಿರುವ ಗ್ರಾಹಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಲು ಮಾರುತಿ ಸುಜುಕಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Mon, 11 May 26

Follow Us