
ಬೆಂಗಳೂರು, ಸೆಪ್ಟೆಂಬರ್ 21: ಮಾಸ್ಕ್ ಧರಸಿ ಬಂದ ಪುಂಡರ ಗ್ಯಾಂಗ್ ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರ ಬೀಸಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಬೈಕ್ನಲ್ಲಿ ಬಂದ ಆರೋಪಿಗಳು ಉತ್ತರಹಳ್ಳಿಯ ಅರಹಳ್ಳಿ ಆರ್ಚ್ ಸಮೀಪ ರಸ್ತೆ ಬದಿ ಹೋಟೇಲ್ನಲ್ಲಿ ಮೀನೂಟ ಸವಿಯುತ್ತಿದ್ದ ಗ್ರಾಹಕ ಸೇರಿದಂತೆ ಫಿಶ್ ಫ್ರೈ ಮಾಡುತ್ತಿದ್ದ ಮಾಲೀಕ ಮಣಿ, ಅವರ ಹೆಂಡತಿ ಮತ್ತು ಮಗ ರವಿ ಎಂಬಾತನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.
ಇಷ್ಟು ಮಾತ್ರವಲ್ಲದೆ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿಯೂ ಆರೋಪಿಗಳು ಪುಂಡಾಟ ಮೆರೆದಿದ್ದು, ಕಿರಣ್, ಶಿವು, ಕಿರಣ್ ಎಂಬ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಆಸ್ಪತ್ರೆ ಹಾಗೂ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸುಬ್ರಮಣ್ಯಪುರ ಪೊಲೀಸರು, ಈ ಪ್ರದೇಶಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಗಾಯಾಳುಗಳಿಂದ ಪ್ರಾಥಮಿಕ ಮಾಹಿತಿ ಕಲೆಹಾಕಲಾಗಿದ್ದು, ಅಟ್ಟಹಾಸ ಮೆರೆದ ದುಷ್ಕರ್ಮಿಗಳಿಗಾಗಿ ತಲಾಶ್ ಮುಂದುವರಿದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹುಚ್ಚಾಟಕ್ಕೆ ಟಿಟಿ ವಾಹನ ಅಪಘಾತ: ಓರ್ವ ಸಾವು, ಐವರಿಗೆ ಗಾಯ!
ಘಟನೆಗಳನ್ನು ದೃಢಪಡಿಸಿದ ನೈಋತ್ಯ ವಿಭಾಗದ ಡಿಸಿಪಿ ಡಾ. ಸೌಮ್ಯಲತಾ ಅವರು, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ನಾಲ್ವರು ಶಂಕಿತರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:24 pm, Mon, 21 September 26