
ಬೆಂಗಳೂರು, (ನವೆಂಬರ್ 03): ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಮನೆಮನೆಗಳಲ್ಲಿ ದೀಪಗಳ ಅಲಂಕಾರ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪಟಾಕಿ ಸಿಡಿಸುವ ಸಂಭ್ರಮ. ಆದ್ರೆ ಇದೇ ಸಂಭ್ರಮ ಕೆಲವೊಮ್ಮೆ ಕಣ್ಣಿಗೆ ಕಂಟಕವಾಗ್ತಿದೆ. ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.ಇದನ್ನ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾದವರಿಗೆ ತಕ್ಷಣ ಚಿಕಿತ್ಸೆ ನೀಡಲು 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುರ್ತು ಚಿಕಿತ್ಸೆಗೆ ಹಿರಿಯ ವೈದ್ಯರ ತಂಡವನ್ನೂ ನಿಯೋಜಿಸಲಾಗಿದೆ. ಅಗತ್ಯವಿರುವ ರೋಗಿಗಳಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಹೆಚ್ಚುವರಿ ವಾರ್ಡ್ ಹಾಗೂ ಬೆಡ್ ವ್ಯವಸ್ಥೆ ಮಾಡಲಾಗಿದೆ. ಪುರುಷ, ಮಹಿಳೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಮೀಸಲಿರಿಸಲಾಗಿದೆ. ಪ್ರತಿ ಕೊಠಡಿಯಲ್ಲೂ 15 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಅಗತ್ಯ ಔಷಧಿಗಳನ್ನ ಈಗಾಗಲೆ ಮಿಂಟೋ ಆಸ್ಪತ್ರೆಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ.
ಪಟಾಕಿ ಅವಘಡಗಳ ಅಂಕಿ-ಅಂಶ ಗಮನಿಸಿದ್ರೆ ಅಪಾಯದ ತೀವ್ರತೆ ಅರ್ಥವಾಗುತ್ತೆ. 2024ರಲ್ಲಿ ಪಟಾಕಿ ಅವಘಡದಿಂದ ಗಾಯಗೊಂಡ 71 ಮಂದಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ರು. 2025ರಲ್ಲಿ 56 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ರು. ಇವರಲ್ಲಿ 14 ಮಂದಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. 2025ರ ಅಂಕಿ-ಅಂಶದ ಪ್ರಕಾರ 21 ಪುರುಷರು, 4 ಮಹಿಳೆಯರು ಹಾಗೂ 18 ವರ್ಷದೊಳಗಿನ 6 ಬಾಲಕಿಯರಿಗೂ ಚಿಕಿತ್ಸೆ ನೀಡಲಾಗಿದೆ.
ಪಟಾಕಿ ಅವಘಡಗಳಲ್ಲಿ ಶೇ.38ರಷ್ಟು ಮಂದಿಗೆ ಕೈಕಾಲು ಹಾಗೂ ದೇಹದ ಇತರೆ ಭಾಗಗಳಲ್ಲಿ ಸುಟ್ಟ ಗಾಯಗಳಾಗಿದ್ರೆ, ಶೇ.19ರಷ್ಟು ಮಂದಿಗೆ ಕಣ್ಣಿನ ಹಾನಿಯಾಗುತ್ತಿದೆ ಎಂಬ ಮಾಹಿತಿ ನೀಡಲಾಗಿದೆ. ವಿಶೇಷವಾಗಿ 10ರಿಂದ 40 ವರ್ಷದ ಯುವಜನರೇ ಹೆಚ್ಚಿನ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಕೆಲವೊಮ್ಮೆ ಗಂಭೀರ ಗಾಯಗಳಾದರೆ ಚಿಕಿತ್ಸೆ ನೀಡಿದರೂ ದೃಷ್ಟಿ ಶಾಶ್ವತವಾಗಿ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಪಟಾಕಿ ಸಿಡಿಸುವಾಗ ಕಣ್ಣಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಟೈಮ್ನಲ್ಲಿ ಏನಾದ್ರ ಅವಘಡ ಅದ್ರೆ ಮಿಂಟೋ ಆಸ್ಪತ್ರೆ ತುರ್ತು ಸಂಪರ್ಕ ಸಂಖ್ಯೆ: 9481740137 ಕರೆ ಮಾಡಬಹುದು
ಕೇವಲ ಚಿಕಿತ್ಸೆ ನೀಡುವುದರಿಂದ ಪಟಾಕಿ ಅವಘಡಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಸಾಧ್ಯವಿಲ್ಲ. ಹೀಗಾಗಿ ಜನರ ಸುರಕ್ಷತೆ ದೃಷ್ಟಿಯಿಂದ ಮಿಂಟೋ ಆಸ್ಪತ್ರೆ ವೈದ್ಯರು ಸರ್ಕಾರಕ್ಕೆ ಎರಡು ಪ್ರಮುಖ ಸಲಹೆ ನೀಡಿದ್ದಾರೆ. ಮೊದಲನೆಯದಾಗಿ, ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದಂತೆ ಪಟಾಕಿ ಸಿಡಿಸುವವರಿಗೂ ಶಾಟರ್ಪ್ರೂಫ್ ಸುರಕ್ಷತಾ ಕನ್ನಡಕ ಕಡ್ಡಾಯ ಮಾಡಬೇಕು. 500 ಅಥವಾ 1,000 ರೂಪಾಯಿ ಮೌಲ್ಯದ ಪಟಾಕಿ ಖರೀದಿಸುವವರಿಗೆ ಉಚಿತವಾಗಿ ಪ್ರೊಟೆಕ್ಟಿವ್ ಗ್ಲಾಸ್ ನೀಡುವ ವ್ಯವಸ್ಥೆ ಜಾರಿಯಾಗಬೇಕು.
ಎರಡನೆಯದಾಗಿ ಮನೆಮನೆಗಳಲ್ಲಿ ಜನರೇ ಪಟಾಕಿ ಸಿಡಿಸುವ ಬದಲು ವಿದೇಶಗಳ ಮಾದರಿಯಲ್ಲಿ ಸ್ಟೇಡಿಯಂ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ತರಬೇತಿ ಪಡೆದ ತಜ್ಞರಿಂದ ಬೃಹತ್ ಫೈರ್ವರ್ಕ್ಸ್ ಡಿಸ್ಪ್ಲೇ ಆಯೋಜಿಸಬೇಕು. ಇದರಿಂದ ಜನಸಾಮಾನ್ಯರು ಪಟಾಕಿ ಸಿಡಿಸುವಾಗ ಸಂಭವಿಸುವ ಅವಘಡಗಳನ್ನು ಕಡಿಮೆ ಮಾಡಬಹುದು ಅನ್ನೋದು ವೈದ್ಯರ ಅಭಿಪ್ರಾಯ..
ಪಟಾಕಿ ಸಿಡಿದು ಕಣ್ಣಿಗೆ ಗಾಯವಾದರೆ ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜಬೇಡಿ. ನೀರು, ಎಣ್ಣೆ ಅಥವಾ ಮನೆಮದ್ದನ್ನು ಹಾಕಬೇಡಿ. ಸ್ವಚ್ಛವಾದ ಬಟ್ಟೆಯಿಂದ ಕಣ್ಣನ್ನು ಸಡಿಲವಾಗಿ ಮುಚ್ಚಿಕೊಂಡು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ. ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಹಬ್ಬದ ಸಂಭ್ರಮದಲ್ಲಿ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯ ತಂದುಕೊಳ್ಳಬೇಡಿ. ಸುರಕ್ಷಿತವಾಗಿ ದೀಪಾವಳಿ ಆಚರಿಸಿ ಅನ್ನೋದು ನಮ್ಮ ಮನವಿ.