ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಜಿಐ ಟ್ಯಾಗ್ ಇರುವ ಸೀರೆ ಖರೀದಿಗೆ ಸೂರ್ಯೋದಯಕ್ಕೂ ಮುನ್ನ ಮಹಿಳೆಯರ ಸರದಿ ಸಾಲು!
ಶುದ್ಧ ಮೈಸೂರು ರೇಷ್ಮೆ ಸೀರೆಗಳಿಗೆ ಅಪಾರ ಬೇಡಿಕೆಯಿದ್ದು, ಬೆಳಿಗ್ಗೆ 4 ಗಂಟೆಯಿಂದಲೇ ಮಹಿಳೆಯರು KSIC ಶೋರೂಮ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇವುಗಳ ಗುಣಮಟ್ಟ, ಶುದ್ಧ ಚಿನ್ನದ ಜರಿ ಮತ್ತು ಪರಂಪರೆಯ ಮೌಲ್ಯವು ಗ್ರಾಹಕರನ್ನು ಆಕರ್ಷಿಸುತ್ತದೆ. ದುಬಾರಿಯಾಗಿದ್ದರೂ, GI ಟ್ಯಾಗ್ ಪಡೆದ ಈ ಸೀರೆಗಳು ಪ್ರೀಮಿಯಂ ಸ್ಥಾನ ಉಳಿಸಿಕೊಂಡಿವೆ. KSIC ಉತ್ಪನ್ನಗಳ ಮೇಲಿನ ನಂಬಿಕೆ ಇಂದಿಗೂ ಗ್ರಾಹಕರನ್ನು ಸೆಳೆಯುತ್ತಿದೆ.

ಬೆಂಗಳೂರು, ಜನವರಿ 21: ಸೀರೆ ಎಂದರೆ ಸಾಕು ಮಹಿಳೆಯರು ಮುಗಿಬೀಳುತ್ತಾರೆ. ಅಂತೆಯೇ ಅಪಾರ ಬೇಡಿಕೆಯುಳ್ಳ ಶುದ್ಧ ಮೈಸೂರು ರೇಷ್ಮೆ ಸೀರೆಗಳನ್ನು (Mysore Silk Saree) ಖರೀದಿಸಲು ನಗರದ ರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (KSIC) ಶೋರೂಮ್‌ಗಳ ಮುಂದೆ ಮಹಿಳೆಯರು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಶೋ ರೂಮ್ ತೆರೆಯುವ ಸಮಯ 10 ಗಂಟೆಯಾದರೂ ಬೆಳಗಿನ 4 ಗಂಟೆಯಿಂದಲೇ ಹಾಜರಾಗುತ್ತಿರುವ ಮಹಿಳೆಯರು, ಟೋಕನ್ ತೆಗದುಕೊಂಡು ಕಾದು ಕೂರುತ್ತಿದ್ದಾರೆ.
ಬೆಳಗಿನ ಜಾವವೇ ಹೋಗಿ ನಿಂತರೂ ಒಬ್ಬರಿಗೆ ಒಂದೇ ಸೀರೆ?
23,000 ರೂ. ರಿಂದ 2.5 ಲಕ್ಷ ರೂ.ನವರೆಗೆ ಬೆಲೆ ಹೊಂದಿರುವ ಮೈಸೂರು ರೇಷ್ಮೆ ಸೀರೆಗಳು ದುಬಾರಿಯಾದರೂ ಅವುಗಳ ಗುಣಮಟ್ಟ, ಶುದ್ಧತೆ ಮತ್ತು ಪಾರಂಪರಿಕ ಮೌಲ್ಯಕ್ಕಾಗಿ ಹೆಚ್ಚು ಬೇಡಿಕೆ ಹೊಂದಿವೆ. ಜಿಐ ಟ್ಯಾಗ್ (Geographical Indication Tag) ಪಡೆದಿರುವ ಮೈಸೂರು ರೇಷ್ಮೆಯನ್ನು ಉತ್ಪಾದಿಸುವ ಏಕೈಕ ಅಧಿಕೃತ ಸಂಸ್ಥೆಯಾದ KSIC ನಲ್ಲಿ 2025ರಲ್ಲಿ ಸರಬರಾಜು ಕೊರತೆ ಮುಂದುವರಿದಿದ್ದು, 2026ರಲ್ಲಿಯೂ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ.
ಸಂಸ್ಥೆಯಲ್ಲಿನ ನಿಪುಣ ನೇಕಾರರು ಮತ್ತು ಕೈಗಾರರು ಸಂಖ್ಯೆ ಕಡಿಮೆ ಇರುವುದರ ಜೊತೆಗೆ ಒಬ್ಬ ನೇಕಾರನಿಗೆ ಕನಿಷ್ಠ ಮೂಲಭೂತ ತರಬೇತಿಗೇ 6–7 ತಿಂಗಳು ವ್ಯಯಿಸಬೇಕಾಗುತ್ತಿದೆ. ಇದರಿಂದ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಮದುವೆ , ವರಲಕ್ಷ್ಮೀ ಪೂಜೆ, ಗೌರಿ ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಸೀರೆಗಳ ಬೇಡಿಕೆ ಮತ್ತಷ್ಟು ಹೆಚ್ಚಾಗಿರುವುದರಿಂದ ಶೋರೂಮ್‌ಗಳಲ್ಲಿ ಸೀರೆಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗುತ್ತಿವೆ. ಹೀಗಾಗಿ ಬೆಳಗಿನ ಜಾವವೇ ಶೋ ರೂಮ್ ಮುಂದೆ ಹೋಗಿ ನಿಂತರೂ ಒಬ್ಬ ಗ್ರಾಹಕನಿಗೆ ಒಂದೇ ಸೀರೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ ಮೈಸೂರು ರೇಷ್ಮೆ ಸೀರೆಯ ಇತಿಹಾಸವೇನು? ಮೈಸೂರಿಗೆ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಪರಿಚಯಿಸಿದ್ದು ಯಾರು?
ಈ ಬಗ್ಗೆ ಬೆಂಗಳೂರಿಗರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಶೋ ರೂಮ್ ಮುಂದೆ ಮಹಿಳೆಯರ ಸರದಿ ಸಾಲಿನ ದೃಶ್ಯವನ್ನು ಹಂಚಿಕೊಂಡಿದ್ದು, ವೀಡಿಯೋ ಇಲ್ಲಿದೆ.
ಪರಂಪರೆಯ ಸಂಕೇತವಾಗಿರುವ ಮೈಸೂರು ಸಿಲ್ಕ್ ಸ್ಯಾರಿ
KSIC ಸೀರೆಗಳಿಗೆ ವಿಶಿಷ್ಟ ಕೋಡ್ ಹಾಗೂ ಹೋಲೋಗ್ರಾಂ ಅಳವಡಿಸಲಾಗಿದ್ದು, ಶೇ100 ಶುದ್ಧ ಚಿನ್ನದ ಜರಿ ಬಳಸಲಾಗುತ್ತದೆ. ಖಾಸಗಿ ವಲಯದಲ್ಲಿ ನಕಲಿ ಹಾಗೂ ಕೃತಕ ರೇಷ್ಮೆ ಮಾರಾಟದ ಆರೋಪಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, KSIC ಉತ್ಪನ್ನಗಳ ಶುದ್ಧತೆ ಗ್ರಾಹಕರ ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ. ಮೈಸೂರು ರೇಷ್ಮೆ ಸೀರೆ ಇಂದಿಗೂ ಮಹಿಳೆಯರ ಮನದಲ್ಲಿ ಪರಂಪರೆಯ ಸಂಕೇತವಾಗಿ ಉಳಿದಿದೆ. ಹೀಗಾಗಿ ಬೆಲೆಯೆಷ್ಟೇ ಇದ್ದರೂ ಸೀರೆಯನ್ನು ಖರೀದಿಸಲು ಇಂದಿಗೂ ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
