ಮೈಸೂರು ರೇಷ್ಮೆ ಸೀರೆಯ ಇತಿಹಾಸವೇನು? ಮೈಸೂರಿಗೆ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಪರಿಚಯಿಸಿದ್ದು ಯಾರು?

ಕ್ರಿಸ್ತಶಕ 1780-1790ರ ಸಮಯದಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಮೈಸೂರು ಸಿಲ್ಕ್ ಆರಂಭವಾಯಿತು. ಆದರೆ ವಿದೇಶಗಳಿಂದ ಬರುತ್ತಿದ್ದ ರೇಷ್ಮೆ ಹಾಗೂ ರೆಯಾನ್‌ ಬಟ್ಟೆಗಳ ಹಾವಳಿಯಿಂದ ಅದರ ಜನಪ್ರಿಯತೆ ಕುಗ್ಗಿತು. ಬಳಿಕ ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ ಪುನಃ ಮೈಸೂರು ರೇಷ್ಮೆ ಸೀರೆಗಳ ಜನಪ್ರಿಯತೆ ಹೆಚ್ಚಾಯಿತು. ಮೈಸೂರು ರೇಷ್ಮೆ ಸೀರೆಗಳ ಇತಿಹಾಸ ತಿಳಿದುಕೊಳ್ಳಲು ಈ ಲೇಖನ ಓದಿ.

ಮೈಸೂರು ರೇಷ್ಮೆ ಸೀರೆಯ ಇತಿಹಾಸವೇನು? ಮೈಸೂರಿಗೆ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಪರಿಚಯಿಸಿದ್ದು ಯಾರು?
ಮೈಸೂರು ರೇಷ್ಮೆ ಸೀರೆ
Follow us
ಆಯೇಷಾ ಬಾನು
|

Updated on:May 18, 2024 | 1:08 PM

ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ, ಫ್ರೆಂಡ್​ ಮನೆಯಲ್ಲಿ ಪೂಜೆ ಸಮಾರಂಭ, ಸ್ನೇಹಿತೆಗೆ ಒಂದೊಳ್ಳೆ ಗಿಫ್ಟ್ ಕೊಡಬೇಕು, ಮೊದಲ ತಿಂಗಳ ಸಂಬಳ, ಹಬ್ಬ ಹರಿ ದಿನಗಳಲ್ಲಿ ನಮಗೆಲ್ಲ ಮೊದಲು ನೆನಪಾಗುವುದೇ ಮೈಸೂರು ರೇಷ್ಮೆ ಸೀರೆ. ಭಾರತೀಯ ಪರಂಪರೆಯಲ್ಲಿ ರೇಷ್ಮೆ ಸೀರೆಗೆ ಅದರದೇ ಆದ ಮಹತ್ವವಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆ ಉಡುಗೆಗೆ ಅಗ್ರ ಸ್ಥಾನ ನೀಡಲಾಗಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಾಗುವ ರೇಷ್ಮೆ ಸೀರೆ ಹೆಚ್ಚಿನ ಜನ ಪ್ರಿಯತೆಯನ್ನು ಗಳಿಸಿದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿರುವ ಅರಮನೆ ನಗರಿಗೆ ಭೇಟಿ ನೀಡುವ ವಿದೇಶಿಗರು ಮೈಸೂರು ಸಿಲ್ಕ್ ಸೀರೆಯ ಮಹತ್ವವನ್ನು ಅರಿತು ಖರೀದಿಸಿ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆದರೆ ನಿಮಗೆ ಗೊತ್ತಾ ನಿಮ್ಮ ಅಚ್ಚುಮೆಚ್ಚಿನ ಈ ರೇಷ್ಮೆ ಸೀರೆ ಮೈಸೂರಿಗೆ ಪರಿಚಯಿಸಿದ್ದು ಯಾರು? ಮೈಸೂರು ರೇಷ್ಮೆ ಸೀರೆ ಉದ್ಯಮ ಆರಂಭವಾಗಿದ್ದು ಹೇಗೆ ಅಂತಾ? ಬನ್ನಿ ಈ ಆರ್ಟಿಕಲ್​ ಮೂಲಕ ತಿಳಿದುಕೊಳ್ಳಿ.

ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಅನಾದಿ ಕಾಲದಿಂದಲೂ ಮಹಿಳೆಯರ ಪ್ರಮುಖ ಉಡುಗೆ. ನಮ್ಮ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವ ಬಿದ್ದರೂ ಸೀರೆ ಮೇಲಿನ ಗೌರವ, ವ್ಯಾಮೋಹ ಕಿಂಚಿತ್ತೂ ಕಡಿಮೆ ಆಗಿಲ್ಲ. ಈಗ ವಿದೇಶಿ ಮಹಿಳೆಯರಿಗೂ ಸೀರೆ ಮೇಲೆ ಮೋಹ ಹೆಚ್ಚಾಗಿದೆ. ಅಷ್ಟರಮಟ್ಟಿಗೆ ರೇಷ್ಮೆ ಸೀರೆಗಳು ಹವಾ ಸೃಷ್ಟಿಸಿವೆ. ಕರ್ನಾಟಕದಲ್ಲಿ ಉಡುಪಿ ಸೀರೆ, ಮೊಳಕಾಲ್ಮೂರು ಸೀರೆ, ಕಾಂಜೀವರಂ, ಬನಾರಸ್, ಇಳಕಲ್, ಧಮಾವರಂ, ಕೇರಳ ಕಾಟನ್, ಗಾರ್ಡನ್ ಸಿಲ್ಕ್, ಪ್ಲೇನ್, ಸಿಂಥೆಟಿಕ್, ಡಿಸೈನರ್, ಪಾಲಿಸ್ಟರ್, ಲೈಟ್​ವೇಟ್, ಡಬಲ್​ಷೇಡ್ ಹೀಗೆ ಸಾವಿರಾರು ಬಗೆಯ ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಕನ್ನಡಿಗರಿಗೆ ಮಾತ್ರ ಮೈಸೂರು ಸಿಲ್ಕ್ ಅಂದ್ರೆ ಒಂದು ರೀತಿಯ ಸೆಂಟಿಮೆಂಟ್ ಇದೆ. ನಯವಾದ ವಿನ್ಯಾಸ, ವಿಶಿಷ್ಟ ನೇಯ್ಗೆ ಮತ್ತು ಕನಿಷ್ಠ ವಿನ್ಯಾಸದಿಂದಾಗಿ ಮೈಸೂರು ರೇಷ್ಮೆ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ.

ಮೈಸೂರು ರೇಷ್ಮೆ ಸೀರೆ ಇತಿಹಾಸ

ಮೈಸೂರು ರೇಷ್ಮೆ ಇಡೀ ಜಗತ್ತಿನಲ್ಲಿ ಮಣ್ಣನ್ನೇ ಪಡೆಯಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ತುಂಬಾ ದೊಡ್ಡದಿದೆ. ಮೈಸೂರು ರಾಜ್ಯದಲ್ಲಿ ರೇಷ್ಮೆಯನ್ನು ಪರಿಚಯಿಸಿದ್ದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಆದರೆ ಅದಕ್ಕೊಂದು ಉದ್ಯಮದ ಮಾನ್ಯತೆ ದೊರಕಿಸಿಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್.

ಕ್ರಿಸ್ತಶಕ 1780-1790ರ ಸಮಯದಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆಯ ಸಮಯದಲ್ಲಿ ಮೈಸೂರಿಗೆ ರೇಷ್ಮೆ ಸೀರೆಗಳ ಪರಿಚಯವಾಗಿತು. ರೇಷ್ಮೆ ಉದ್ಯಮ ಆರಂಭಿಸಲು ಟಿಪ್ಪು ಸುಲ್ತಾನ್ ಚೀನಾದಿಂದ ರೇಷ್ಮೆ ಗೂಡುಗಳನ್ನು ಆಮದು ಮಾಡಿಕೊಂಡಿದ್ದ. ಆದರೆ ವಿದೇಶಗಳಿಂದ ಆಮದಾಗುತ್ತಿದ್ದ ವಿವಿಧ ರೇಷ್ಮೆ ಹಾಗೂ ರೆಯಾನ್‌ ಬಟ್ಟೆಗಳ ಆದ್ಯತೆ ಹಾಗೂ ಜನಪ್ರಿಯತೆ ಹೆಚ್ಚಿದ್ದರಿಂದ ಮೈಸೂರು ಸಿಲ್ಕ್ ನ ತಯಾರಿ ಹಾಗೂ ಜನಪ್ರಿಯತೆ ಕುಗ್ಗಿತು. ಬಳಿಕ ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ ಪುನಃ ರೇಷ್ಮೆ ಜನಪ್ರಿಯತೆಯ ಉತ್ತುಂಗ ತಲುಪಿದ್ದು ಇಂದಿಗೂ ಮೈಸೂರು ರೇಷ್ಮೆ ಸೀರೆಗಳು ಅದೇ ಬೇಡಿಕೆಯನ್ನು ಕಾಯ್ದುಕೊಂಡು ಬಂದಿದೆ. 20 ನೇ ಶತಮಾನದ ದ್ವಿತೀಯಾರ್ಧದಲ್ಲಿ ರೇಷ್ಮೆ ಉತ್ಪಾದನೆ ಪುನಶ್ಚೇತನಗೊಂಡು ಮೈಸೂರು ರಾಜ್ಯವು ಭಾರತದಲ್ಲಿ ಅಗ್ರ ಮಲ್ಟಿವೋಲ್ಟಿನ್ ರೇಷ್ಮೆ ಉತ್ಪಾದಕವಾಯಿತು.

ಮತ್ತೊಂದೆಡೆ ಮೈಸೂರು ರೇಷ್ಮೆಯನ್ನು ಮಲ್ಬೆರಿ ರೇಷ್ಮೆ ಎಂದೂ ಸಹ ಕರೆಯಲಾಗುತ್ತೆ. ಏಕೆಂದರೆ ರೇಷ್ಮೆ ಕೃಷಿಕರು ಸಾಮಾನ್ಯವಾಗಿ ರೇಷ್ಮೆ ಹುಳುಗಳಿಗೆ ಮಲ್ಬೆರಿ ಎಲೆಗಳನ್ನು ಆಹಾರಕ್ಕಾಗಿ ಬಳಸುತ್ತಾರೆ.

ಬ್ರಿಟನ್ ರಾಣಿ ಪಟ್ಟಾಭಿಷೇಕದ ಮೇಲೆ ಒಡೆಯರ್ ಮನ ಸೆಳೆದಿದ್ದ ರೇಷ್ಮೆ ವಸ್ತ್ರಗಳು

1912ರಲ್ಲಿ ಬ್ರಿಟನ್​ನಲ್ಲಿ ನಡೆದ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತೆರಳಿದ್ದರು. ಆಗ ಅಲ್ಲಿನ ರಾಜ ಮನೆತನದವರು ಧರಿಸಿದ್ದ ಯಂತ್ರ ನಿರ್ಮಿತ ರೇಷ್ಮೆ ವಸ್ತ್ರಗಳು ಅವರ ಗಮನಸೆಳೆದಿದ್ದವು. ಇದನ್ನು ಯಾಕೆ ಮೈಸೂರಿನಲ್ಲಿ ತಯಾರಿಸಬಾರದು ಎಂದು ಯೋಚಿಸಿದ ಒಡೆಯರ್ ಈ ಬಗ್ಗೆ ಮಾಹಿತಿ ಪಡೆದು, ಸ್ವಿಟ್ಜರ್ಲ್ಯಾಂಡ್ ನಿಂದ 32 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿಕೊಂಡರು. ಬಳಿಕ ಮೈಸೂರು ಸಿಲ್ಕ್ ಫ್ಯಾಕ್ಟರಿ ಆರಂಭವಾಯಿತು. 1932 ರಲ್ಲಿ ಅಧಿಕ ತಯಾರಿ ಶುರುವಾಯಿತು. ಈಗಲೂ ಕೂಡ ಮೈಸೂರು ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಕಾರ್ಖಾನೆ ಹಲವು ರೀತಿಯ ರೇಷ್ಮೆ ಸೀರೆಗಳನ್ನು ತಯಾರು ಮಾಡುತ್ತಾ ಬಂದಿದೆ.

ಇನ್ನು ವಿಶೇಷವೆಂದರೆ ಭಾರತದ ಮೊದಲ ರೇಷ್ಮೆ ಉತ್ಪಾದನಾ ಘಟಕವಾಗಿರುವ ಮೈಸೂರು ಸಿಲ್ಕ್ ನೇಯ್ಗೆ ಕಾರ್ಖಾನೆ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ಆಗಿ ಸರ್ಕಾರದ ಅಧೀನದಲ್ಲಿ ನಡೆಯುತ್ತಿದೆ. ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯನ್ನು ಉತ್ಪಾದಿಸುತ್ತಾ ಬಂದಿರುವ ಕೆಎಸ್ಐಸಿ, ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಶುದ್ಧ ರೇಷ್ಮೆ ಬಟ್ಟೆಯನ್ನು ನೇಯುವ ದೇಶದಲ್ಲೇ ಏಕಮಾತ್ರ ಸಂಸ್ಥೆಯಾಗಿದೆ ಎಂದರೆ ತಪ್ಪಾಗಲಾರದು. ಈ ಕಾರ್ಖಾನೆಗೆ ರೇಷ್ಮೆಯ ಮುಖ್ಯ ಮೂಲವು ಕರ್ನಾಟಕದ ರಾಮನಗರ ಜಿಲ್ಲೆ.

ರಾಜಮನೆತನಕ್ಕೆ ಸೀಮಿತವಾಗಿದ್ದ ರೇಷ್ಮೆ

ಆರಂಭದಲ್ಲಿ, ಮೈಸೂರು ರೇಷ್ಮೆ ಬಟ್ಟೆಗಳ ತಯಾರಿ ಕೇವಲ ರಾಜಮನೆತನದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಅವರ ಸಶಸ್ತ್ರ ಪಡೆಗಳಿಗೆ ಅಲಂಕಾರಿಕ ಬಟ್ಟೆಗಳಿಗೆ ಮಾತ್ರ ಸೀಮಿತವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಮೈಸೂರು ರಾಜ್ಯ ರೇಷ್ಮೆ ಕೃಷಿ ಇಲಾಖೆಯು ರೇಷ್ಮೆ ನೇಯ್ಗೆ ಕಾರ್ಖಾನೆಯ ನಿಯಂತ್ರಣವನ್ನು ತೆಗೆದುಕೊಂಡಿತು. 1980 ರಲ್ಲಿ, ಕಾರ್ಖಾನೆಯನ್ನು ಕರ್ನಾಟಕ ಕೈಗಾರಿಕೆಯ ಸರ್ಕಾರವಾದ KSIC ಗೆ ಹಸ್ತಾಂತರಿಸಲಾಯಿತು. ಇಂದು, ಉತ್ಪನ್ನಗಳಲ್ಲಿ ರೇಷ್ಮೆ ಸೀರೆಗಳು, ಶರ್ಟ್‌ಗಳು, ಕುರ್ತಾಗಳು, ರೇಷ್ಮೆ ಧೋತಿ ಮತ್ತು ರೇಷ್ಮೆ ಸೀರೆಗಳನ್ನು ತಯಾರಿಸಲಾಗುತ್ತಿದೆ.

ಚಿನ್ನ, ಬೆಳ್ಳಿ ನೇಯ್ಗೆ ಹೊಂದಿರುವ ರೇಷ್ಮೆ ಸೀರೆಗಳು

ಕರ್ನಾಟಕವು ತನ್ನ ರಾಜಮನೆತನದ ಪರಂಪರೆ ಹಾಗೂ ವೈಭವದಿಂದ ಶ್ರೀಮಂತವಾಗಿದೆ. ಹಾಗಾಗಿ ಇಲ್ಲಿ ಉತ್ಪಾದಿಸಲಾಗುವ ರೇಷ್ಮೆ ತನ್ನ ಶ್ರೀಮಂತ ಹಾಗೂ ನಾಜೂಕಾದ ಜರಿತಾರೆಗಳ ಮೂಲಕ ಕರ್ನಾಟಕ ಪಾರಂಪರಿಕ ವೈಭವವನ್ನು ಪ್ರತಿಫಲಿಸುತ್ತದೆ.

ಇಲ್ಲಿಯ ರೇಷ್ಮೆ ಸೀರೆ ಜರಿಯು 65% ಶುದ್ಧ ಬೆಳ್ಳಿ ಮತ್ತು 0.65% ಚಿನ್ನವನ್ನು ಒಳಗೊಂಡಿರುವುದರಿಂದ, ಇದು ಭಾರತದ ಅತ್ಯಂತ ದುಬಾರಿ ರೇಷ್ಮೆ ಸೀರೆಗಳಲ್ಲಿ ಒಂದಾಗಿದೆ. ಕೆಲವೆಡೆ ನಕಲಿ ಮೈಸೂರು ರೇಷ್ಮೆ ಸೀರೆ ಉತ್ಪಾದನೆ ಮಾಡಿ KSIC ಹೆಸರಿನಲ್ಲಿ ಮೋಸ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಮೈಸೂರು ರೇಷ್ಮೆ ಸೀರೆ ಖರೀದಿಸಿ. KSIC ತನ್ನ ಕಾರ್ಖಾನೆಯಲ್ಲಿ ಉತ್ಪಾದಿಸುವ ಪ್ರತಿಯೊಂದು ಮೈಸೂರು ಸಿಲ್ಕ್ ಸೀರೆಯಲ್ಲಿ ನೇಯ್ದ ವಿಶಿಷ್ಟ ಐಡಿ, ಹೊಲೊಗ್ರಾಮ್ ಆಧಾರಿತ ವಿನ್ಯಾಸ ಮತ್ತು ವಿಶಿಷ್ಟ ಗುರುತಿನ ಬಾರ್‌ಕೋಡ್ ಅನ್ನು ಅಳವಡಿಸಿದೆ. ಹೀಗಾಗಿ ಸಿಲ್ಕ್ ಮಾರ್ಕ್ ನೋಡಿ ರೇಷ್ಮೆ ಸೀರೆ ಖರೀದಿಸಿ.

GI ನೋಂದಣಿ ಹೊಂದಿರುವ ಮೈಸೂರು ರೇಷ್ಮೆ ಸೀರೆ

KSIC ಮೈಸೂರು ಸಿಲ್ಕ್ ಸೀರೆಯ ಏಕೈಕ ಮಾಲೀಕತ್ವವನ್ನು ಮೈಸೂರಿನ ಹಿಂದಿನ ರಾಯಲ್ ಸರ್ಕಾರದಿಂದ ಪಡೆದಿದೆ. ಇದು 2005 ರಲ್ಲಿ GI ಪೇಟೆಂಟ್ ನೋಂದಣಿ ಪ್ರಮಾಣಪತ್ರವನ್ನು ಪಡೆಯಿತು. ಇದರರ್ಥ KSIC ಹೊರತುಪಡಿಸಿ ಬೇರೆ ಯಾರೂ ಈ ಸೀರೆಯನ್ನು ತಯಾರಿಸಲು ಸಾಧ್ಯವಿಲ್ಲ.

300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು

ಮೈಸೂರು ರೇಷ್ಮೆ ಸೀರೆಯು ಹಲವು ರೀತಿಯ ವಿಶೇಷತೆಗಳನ್ನು ಹೊಂದಿದೆ. ಈ ಸೀರೆಯ ಜರಿ ಮಾಸದೆ, ಹೊಚ್ಚ ಹೊಸದಂತೆ ಕಾಣುವುದು ವಿಶೇಷ. ಕುಸುರಿ ವಿನ್ಯಾಸ ಸೀರೆ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ ಸಾಂಪ್ರದಾಯಿಕ ಜರಿ ಸೀರೆ ಹೀಗೆ 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳನ್ನು KSICಯಲ್ಲಿ ತಯಾರಿಸಲಾಗುತ್ತೆ.

ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೆಎಸ್ಐಸಿಯು ಮೈಸೂರಿನ ಪ್ರಮುಖ ಸ್ಥಳಗಳಾದ ಜೆ.ಎಲ್.ಬಿ ರಸ್ತೆ ಹಾಗೂ ಮೃಗಾಲಯದ ಬಳಿ ಮಾರಾಟದ ಮಳಿಗೆ ತೆರೆದಿದೆ. ಇದಲ್ಲದೆ ನೇರವಾಗಿ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಗೆ ತೆರಳಿ ರೇಷ್ಮೆ ಸೀರೆಗಳನ್ನು ಖರೀದಿಸಬಹುದು.

ದೀರ್ಘ ಸಮಯ ಬಾಳಿಕೆ

ಮೈಸೂರು ರೇಷ್ಮೆ ಸೀರೆಗಳ ಜರಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಮಾಡಲಾಗುತ್ತೆ. ಹೀಗಾಗಿ ಮೈಸೂರು ರೇಷ್ಮೆ ಸೀರೆಗಳು ದಶಕಗಳ ಕಾಲ ಬಾಳಿಕೆ ಬರುತ್ತವೆ. ನಮ್ಮ ಅಜ್ಜಿ-ಮುತ್ತಜಿ ಬಳಸುತ್ತಿದ್ದ ರೇಷ್ಮೆ ಸೀರೆಗಳನ್ನು ನಾವು ಈಗಲೂ ಹೊಚ್ಚ ಹೊಸದಂತಿರುವುದನ್ನು ಕಾಣಬಹುದು.

ಮೈಸೂರು ರೇಷ್ಮೆ ಸೀರೆಗಳ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಬಯಸುವವರು ಮೈಸೂರಿನ ರೇಷ್ಮೆ ಕಾರ್ಖಾನೆಗೆ ಪ್ರವಾಸ ಕೈಗೊಳ್ಳಬಹುದು. ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಕಾರ್ಖಾನೆಯಲ್ಲಿ ಮೈಸೂರು ಸಿಲ್ಕ್ ಸೀರೆಯನ್ನು ತಯಾರಿಸುವುದನ್ನು ನೋಡಬಹುದು.

ಇನ್ನು ಮೈಸೂರು ರೇಷ್ಮೆ ಸೀರೆಗಳನ್ನು ಇತರೆ ಬಟ್ಟೆಗಳೊಂದಿಗೆ ಇಡಬಾರದು. ಒಂದೊಂದು ರೇಷ್ಮೆ ಸೀರೆಯನ್ನು ಮಸ್ಲಿನ್‌ ಬಟ್ಟೆಯಲ್ಲಿ ಸುತ್ತಿ ಇಟ್ಟರೆ ಒಳ್ಳೆಯದು. ಆಗಾಗ ಮಡಿಕೆಗಳನ್ನು ಬದಲಾಯಿಸುತ್ತಿರಬೇಕು. ಇಲ್ಲದಿದ್ದರೆ ಸೀರೆ ಹರಿದುಹೋಗಬಹುದು. ನಾಲ್ಕೈದು ತಿಂಗಳಿಗೊಮ್ಮೆ ಮೈಸೂರು ಸಿಲ್ಕ್ ರೇಷ್ಮೆ ಸೀರೆಯನ್ನ ಬಿಸಿಲಿನಲ್ಲಿ ಒಣಗಿಸಿ ಮಡಿಚಿಡಿ.

Published On - 2:06 pm, Thu, 16 May 24

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ