ವಾಹನದ ನಂಬರ್ ಪ್ಲೇಟ್ನಲ್ಲಿ ಹೆಸರು, ಲಾಂಛನ ಹಾಕಿಸಿದ್ದೀರಾ? ಈಗಲೇ ತೆಗೆಸಿಬಿಡಿ, ಇಲ್ಲಾಂದ್ರೆ ಬೀಳುತ್ತೆ ಭಾರಿ ದಂಡ
ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರು, ಬೈಕ್ ನಂಬರ್ ಪ್ಲೇಟ್ ಮೇಲೆ ಸಂಘ-ಸಂಸ್ಥೆಗಳ ಹುದ್ದೆಗಳ ಹೆಸರು, ಲಾಂಛನ ಹಾಕಿ ಪೋಸ್ ನೀಡ್ತಿದ್ದ ಪುಢಾರಿಗಳಿಗೆ ಸಾರಿಗೆ ಇಲಾಖೆ ಬಿಸಿ ಮುಟ್ಟಿಸಲು ಮುಂದಾಗಿದೆ. ಮೊದಲ ಸಲ 500 ರೂ. ಎರಡನೇ ಸಲ 1000 ರೂಪಾಯಿ ದಂಡ ವಿಧಿಸಲು ಮುಂದಾಗಿದೆ.

ಬೆಂಗಳೂರು, ಸೆಪ್ಟೆಂಬರ್ 19: ನಿಯಮಗಳ ಪ್ರಕಾರ ಕಾರು, ಬೈಕ್ ಅಥವಾ ಇತರ ವಾಹನಗಳ ನಂಬರ್ ಪ್ಲೇಟ್ ಮೇಲೆ ಯಾವುದೇ ಸಂಘ ಸಂಸ್ಥೆಗಳ ಹೆಸರು, ಲಾಂಛನ ಬರೆಸುವಂತಿಲ್ಲ. ಸರ್ಕಾರದ ಅಧಿಕೃತ ವಾಹನಗಳಲ್ಲಿ ಮಾತ್ರ ಹೆಸರು ಹಾಗೂ ಲಾಂಛನ ಬಳಸಬಹುದಾಗಿದೆ. ಆದಾಗ್ಯೂ ಇತ್ತೀಚೆಗೆ ಕೆಲ ಕಾರು ಮಾಲೀಕರು ತಮ್ಮ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ವಾಹನಗಳ ನಂಬರ್ ಪ್ಲೇಟ್ ಮೇಲೆ, ನಾನು ಆ ಸಂಘದ ಅಧ್ಯಕ್ಷ, ಈ ಸಂಘದ ಅಧ್ಯಕ್ಷ ಎಂದು ಬರೆಸಿಕೊಂಡು ಬಿಲ್ಡಪ್ ಕೊಟ್ಟರೆ ಇನ್ಮುಂದೆ ಆರ್ಟಿಒ (RTO) ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.
ವಾಟ್ಸ್ಆ್ಯಪ್ ಮೂಲಕ ನೀವೂ ದೂರು ನೀಡಬಹುದು!
ನಂಬರ್ ಪ್ಲೇಟ್ ಮೇಲೆ ಯಾರಾದರೂ ಸಂಘ ಸಂಸ್ಥೆಗಳ ಲಾಂಛನ ಹಾಕಿ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಅದರ ಫೋಟೊ ತೆಗೆದು ಸಾರ್ವಜನಿಕರೂ ಆರ್ಟಿಒಗೆ ದೂರು ನೀಡಬಹುದಾಗಿದೆ. ವಾಟ್ಸ್ಆ್ಯಪ್ ಮೂಲಕವೇ ದೂರು ನೀಡಬಹುದು. ವಾಹನಗಳ ಫೋಟೋಗಳನ್ನು ಸಾರ್ವಜನಿಕರು ಆರ್ಟಿಒ ವಾಟ್ಸ್ಆ್ಯಪ್ ಸಂಖ್ಯೆ 9449863459 ಇದಕ್ಕೆ ಕಳುಹಿಸಬೇಕು. ಇದರ ಆಧಾರದಲ್ಲಿ ತಪಾಸಣೆ ನಡೆಸಿ ಆರ್ಟಿಒ ಅಧಿಕಾರಿಳು ದಂಢ ವಿಧಿಸಲಿದ್ದಾರೆ.
ನಂಬರ್ ಪ್ಲೇಟ್ ನಿಯಮ ಉಲ್ಲಂಘಿಸಿದವರಿಗೆ ದಂಡ ಎಷ್ಟು?
ನಂಬರ್ ಪ್ಲೇಟ್ನಲ್ಲಿ ಹೆಸರು, ಲಾಂಛನ ಹಾಕಿ ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿ 500 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘನೆಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಲೆಯೆತ್ತಲಿದೆ 110 ಕೀ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್; 18000 ಕೋಟಿ ಯೋಜನೆಗೆ ರಾಜಧಾನಿ ಸಜ್ಜು!
ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ, ‘ನಮ್ಮದು ಈ ಸಂಘ, ನಮ್ದು ಆ ಸಂಘ, ನಾನು ರಾಜ್ಯಾಧ್ಯಕ್ಷ, ಉಪಾಧ್ಯಕ್ಷ’ ಎಂದು ನಂಬರ್ ಪ್ಲೇಟ್ನಲ್ಲಿ ಬರೆಸಿಕೊಂಡು ಪೋಸ್ ನೀಡುತ್ತಿದ್ದವರಿಗೆ ಇನ್ನು ಸಾರಿಗೆ ಇಲಾಖೆ ಬಿಸಿ ಮುಟ್ಟಿಸಲಿದೆ. ಇನ್ನಾದರೂ ವಾಹನ ಮಾಲೀಕರು ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



