
ಬೆಂಗಳೂರು, ಮೇ 05: ಇವತ್ತೂ ಕೂಡ ನಮ್ಮ ಮೆಟ್ರೋ ನೇರಳೆ ಮಾರ್ಗದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು 15 ನಿಮಿಷಗಳ ಕಾಲ ನೇರಳೆ ಮಾರ್ಗದ ಕುಂದಲಹಳ್ಳಿ ಸ್ಟೇಷನ್ನಲ್ಲಿ ಮೆಟ್ರೋ ರೈಲುಗಳು ನಿಂತಲ್ಲೇ ನಿಂತಿರುವ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಬೆನ್ನಲ್ಲೇ ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ತಿಳಿಸಿದೆ.
ಇದನ್ನೂ ಓದಿ: ತಾಂತ್ರಿಕ ದೋಷದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಂದ್ ಆಗಿ ಪ್ರಯಾಣಿಕರ ಪರದಾಟ
@nammametro any problem in the purple line, from past 15 min, there is no metro and no update also on the same. #Nammametro #Bengaluru #Whitefield
— Giridhar (@giridharkashyap) May 5, 2026
ನಮ್ಮ ಮೆಟ್ರೋ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಎಕ್ಸ್ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಕೆಲ ಪ್ರಯಾಣಿಕರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಸರಿಯಾಗಿ ನೀಡದ ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮೆಟ್ರೋ ಕಾರ್ಯಾಚರಣೆಯಲ್ಲಿ ಉಂಟಾಗಿದ್ದ ವ್ಯತ್ಯಯದ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಹೂಡಿ ಮೆಟ್ರೋ ನಿಲ್ದಾಣದಲ್ಲಿ ಇಂದು ಸಂಜೆ 5 ಗಂಟೆಯ ಸುಮಾರಿಗೆ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಕಡಿಮೆ ವೇಗದಲ್ಲಿ ಅದನ್ನು ಬೈಯಪ್ಪನಹಳ್ಳಿಗೆ ತರಲಾಯಿತು. ಇದರಿಂದಾಗಿ ಹಿಂಬರುವ ರೈಲುಗಳ ಸೇವೆಯಲ್ಲಿ 3 ನಿಮಿಷ ವಿಳಂಬವಾಗಿದೆ. ನಿಲ್ದಾಣಗಳಲ್ಲಿ ಜನಸಂದಣಿಯನ್ನು ತೆರವುಗೊಳಿಸಲು ಮತ್ತು ರೈಲು ಕಾರ್ಯಾಚರಣೆಯನ್ನು ನಿಗದಿತ ವೇಳೆಗೆ ತರಲು ಶಾರ್ಟ್ ಲೂಪ್ ಕಾರ್ಯಾಚರಣೆ ನಡೆಸಲಾಗುವುದು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ತಿಳಿಸಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ನಿನ್ನೆ (ಮೇ 4) ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಆ ಬಳಿಕ ಬೆಳಿಗ್ಗೆ 11 ಗಂಟೆಯಿಂದ ಮೆಟ್ರೋ ಸೇವೆಗಳು ಪುರರಾರಂಭಗೊಂಡಿತ್ತು.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 pm, Tue, 5 May 26