ನಮ್ಮ ಮೆಟ್ರೋ ಹಳೆ ರೈಲುಗಳಿಗೆ ಬಿಎಂಆರ್‌ಸಿಎಲ್ ‘ಸರ್ಜರಿ’: ಸುರಕ್ಷತೆಗೆ ‘ಮಿಡ್ ಲೈಫ್ ಓವರ್‌ಆಲ್’ ಪರೀಕ್ಷೆ!

ಬೆಂಗಳೂರು ನಮ್ಮ ಮೆಟ್ರೋದಲ್ಲಿ 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿ 10 ಲಕ್ಷ ಕಿ.ಮೀ ಓಡಿರುವ ಹಳೆಯ ರೈಲುಗಳಿಗೆ ಬಿಎಂಆರ್‌ಸಿಎಲ್ 'ಮಿಡ್ ಲೈಫ್ ಓವರ್‌ಆಲ್' ತಾಂತ್ರಿಕ ಪರೀಕ್ಷೆ ನಡೆಸಲು ಮುಂದಾಗಿದೆ. ಹೊಸ ಟಿಟಾಗಢ್ ರೈಲುಗಳು ಸೇರ್ಪಡೆಯಾಗುತ್ತಿದ್ದಂತೆ ಹಳೆಯ ರೈಲುಗಳ ರಿಪೇರಿ ನಡೆಸಿ, ಅವುಗಳನ್ನು ನೇರಳೆ ಮಾರ್ಗಕ್ಕೆ ವರ್ಗಾಯಿಸಲು ಯೋಜನೆ ರೂಪಿಸಲಾಗಿದೆ.

ನಮ್ಮ ಮೆಟ್ರೋ ಹಳೆ ರೈಲುಗಳಿಗೆ ಬಿಎಂಆರ್‌ಸಿಎಲ್ ಸರ್ಜರಿ: ಸುರಕ್ಷತೆಗೆ ‘ಮಿಡ್ ಲೈಫ್ ಓವರ್‌ಆಲ್’ ಪರೀಕ್ಷೆ!
ನಮ್ಮ ಮೆಟ್ರೋ ಹಳೆ ರೈಲುಗಳ ಪರೀಕ್ಷೆ
Edited By:

Updated on: Aug 31, 2026 | 9:09 AM

ಮುಖ್ಯಾಂಶಗಳು

  • 15 ವರ್ಷ ಪೂರೈಸಿದ ನಮ್ಮ ಮೆಟ್ರೋ ಹಳೆ ರೈಲುಗಳಿಗೆ ಬಿಎಂಆರ್‌ಸಿಎಲ್ ತಾಂತ್ರಿಕ ತಪಾಸಣೆ.
  • 10 ಲಕ್ಷ ಕಿಲೋಮೀಟರ್ ಓಡಿದ ರೈಲುಗಳಿಗೆ 'ಮಿಡ್ ಲೈಫ್ ಓವರ್‌ಆಲ್' ಪ್ರಕ್ರಿಯೆ.
  • ಹೊಸ ರೈಲುಗಳು ಬಂದ ನಂತರ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಶಿಫ್ಟ್.

ಬೆಂಗಳೂರು, ಆಗಸ್ಟ್ 31: ನಗರದ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ದ ಹಳೆ ರೈಲುಗಳಿಗೆ ಈಗ ಬಿಎಂಆರ್‌ಸಿಎಲ್ (BMRCL) ‘ಸರ್ಜರಿ’ ಮಾಡಲು ಮುಂದಾಗಿದೆ. ಹೊಸ ರೈಲುಗಳ ಸೇರ್ಪಡೆಯ ಬೆನ್ನಲ್ಲೇ, ಕಳೆದ 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹಳೆಯ ರೈಲುಗಳ ತಾಂತ್ರಿಕ ಗುಣಮಟ್ಟ ಪರೀಕ್ಷಿಸಲು ತೀರ್ಮಾನಿಸಲಾಗಿದೆ.

10 ಲಕ್ಷ ಕಿ.ಮೀ ಓಡಿದ ರೈಲುಗಳಿಗೆ ತಾಂತ್ರಿಕ ತಪಾಸಣೆ

2011ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಮೆಟ್ರೋ ಸಂಚಾರಕ್ಕೆ ಇದೀಗ 15 ವರ್ಷಗಳಾಗಿವೆ. ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಹಲವು ರೈಲುಗಳು ಈಗಾಗಲೇ ಸುಮಾರು 1 ಮಿಲಿಯನ್ ಅಂದರೆ 10 ಲಕ್ಷ ಕಿಲೋಮೀಟರ್‌ಗಳಿಗೂ ಹೆಚ್ಚು ಸಂಚಾರ ಮಾಡಿವೆ. ಈ ಹಿನ್ನೆಲೆಯಲ್ಲಿ ಅವುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಮಿಡ್ ಲೈಫ್ ಓವರ್‌ಆಲ್ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ.

ಈ ದೊಡ್ಡ ಮಟ್ಟದ ನಿರ್ವಹಣಾ ಪ್ರಕ್ರಿಯೆಯಲ್ಲಿ ರೈಲಿನ ಮೋಟಾರ್, ಡ್ರೈವ್ ಸಿಸ್ಟಂ, ಚಕ್ರಗಳು, ಆಕ್ಸಲ್, ಬ್ರೇಕ್, ವಿದ್ಯುತ್ ವ್ಯವಸ್ಥೆ ಮತ್ತು ಬ್ಯಾಟರಿ-ಕೇಬಲ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಬಾಗಿಲುಗಳು, ಎಸಿ, ವೆಂಟಿಲೇಷನ್, ಸಿಗ್ನಲಿಂಗ್ ಹಾಗೂ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಟೆಸ್ಟ್ ಮಾಡಿ, ಹಾಳಾದ ಅಥವಾ ಹಳೆಯ ಬಿಡಿಭಾಗಗಳನ್ನು ಹೊಸದಾಗಿ ಬದಲಾಯಿಸಲಾಗುತ್ತದೆ. ಒಂದು ರೈಲಿನ ಸಂಪೂರ್ಣ ಓವರ್‌ಆಲ್ ಕಾರ್ಯಕ್ಕೆ ಸುಮಾರು 15 ದಿನಗಳ ಸಮಯ ಬೇಕಾಗುತ್ತದೆ.

ನೇರಳೆ ಮಾರ್ಗಕ್ಕೆ ಹಳೆ ರೈಲುಗಳು ಶಿಫ್ಟ್

ಸದ್ಯ ಬಿಎಂಆರ್‌ಸಿಎಲ್‌ಗೆ ಹೊಸ ಸಿಆರ್‌ಆರ್‌ಸಿ–ಟಿಟಾಗಢ್ (CRRC-Titagarh) ರೈಲುಗಳು ಹಂತ ಹಂತವಾಗಿ ಸೇರ್ಪಡೆಯಾಗುತ್ತಿವೆ. ಈಗಾಗಲೇ ಬಂದಿರುವ 4 ಹೊಸ ರೈಲುಗಳು ಹಸಿರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರದಲ್ಲಿವೆ. ಒಟ್ಟು 21 ಹೊಸ ರೈಲುಗಳನ್ನು ಹಸಿರು ಮಾರ್ಗಕ್ಕೆ ಸೇರಿಸಿ, ಅಲ್ಲಿರುವ ಹಳೆ ರೈಲುಗಳನ್ನು ‘ಮಿಡ್ ಲೈಫ್ ಓವರ್‌ಆಲ್’ ಪರೀಕ್ಷೆಯ ನಂತರ ನೇರಳೆ ಮಾರ್ಗಕ್ಕೆ ಶಿಫ್ಟ್ ಮಾಡಲು ಲೆಕ್ಕಾಚಾರ ಹಾಕಲಾಗಿದೆ.

ಆದರೆ, ಮೆಟ್ರೋ ರೈಲುಗಳು ಪದೇಪದೇ ಹಳಿ ಮೇಲೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಳ್ಳುತ್ತಿರುವುದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ ಕಾರಣಕ್ಕೆ ಮೆಟ್ರೋ ಕೈಕೊಡುತ್ತಿದೆ, ಇದರಿಂದ ಸಮಯಕ್ಕೆ ಸರಿಯಾಗಿ ಕಚೇರಿ ಹಾಗೂ ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈಗಲಾದರೂ ಈ ತಾಂತ್ರಿಕ ಪರೀಕ್ಷೆ ನಡೆಸಿ ಸಮಸ್ಯೆ ಬಗೆಹರಿಸಲಿ” ಎಂದು ಪ್ರಯಾಣಿಕರಾದ ಧನಂಜಯ ಮತ್ತು ಭರತ್ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us