ನಮ್ಮ ಮೆಟ್ರೋ ಆರೆಂಜ್ ಲೈನ್: ಉದ್ದೇಶಿತ ಪೀಣ್ಯ ನಿಲ್ದಾಣ ಗೊರಗುಂಟೆಪಾಳ್ಯಕ್ಕೆ ಸ್ಥಳಾಂತರಕ್ಕೆ ಬಿಎಂಆರ್‌ಸಿಎಲ್ ಚಿಂತನೆ
ಬಿಎಂಆರ್‌ಸಿಎಲ್ ಪೀಣ್ಯದಲ್ಲಿ ಯೋಜಿತ ನಮ್ಮ ಮೆಟ್ರೋ ನಿಲ್ದಾಣವನ್ನು (ಆರೆಂಜ್ ಲೈನ್) ಗೊರಗುಂಟೆಪಾಳ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ಪರಿಗಣಿಸುತ್ತಿದೆ. ಪೀಣ್ಯದಲ್ಲಿ ಎತ್ತರ ಹೆಚ್ಚಿಸಬೇಕಿರುವ ಸಮಸ್ಯೆ ಮತ್ತು ಸ್ಥಳ ಬದಲಾವಣೆಯಿಂದ ಆರೆಂಜ್ ಲೈನ್‌ನ ಉದ್ದ 300 ಮೀಟರ್ ಕಡಿಮೆಯಾಗಲಿದೆ ಎಂಬುದೇ ಬಿಎಂಆರ್‌ಸಿಎಲ್ ನಿರ್ಧಾರಕ್ಕೆ ಕಾರಣ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ಬೆಂಗಳೂರು, ಫೆಬ್ರವರಿ 7: ಪೀಣ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ನಮ್ಮ ಮೆಟ್ರೋ ರೈಲು ನಿಲ್ದಾಣವನ್ನು (ನೂತನ ಆರೆಂಜ್ ಲೈನ್ಗೆ ಸಂಬಂಧಿಸಿದ್ದು) ಹೊರ ವರ್ತುಲ ರಸ್ತೆಯ ಗೊರಗುಂಟೆಪಾಳ್ಯ ಸಿಗ್ನಲ್ ಬಳಿಗೆ ಸ್ಥಳಾಂತರಿಸುವ ಬಗ್ಗೆ ಬಿಎಂಆರ್‌ಸಿಎಲ್ ಪರಿಗಣಿಸುತ್ತಿದೆ. ಹೀಗೆ ಮಾಡುವುದರಿಂದ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗಿನ (32.15 ಕಿಮೀ) ಆರೆಂಜ್ ಲೈನ್ (ನಮ್ಮ ಮೆಟ್ರೋ ಯೋಜನೆಯ 3 ನೇ ಹಂತ) ಅನ್ನು 300 ಮೀಟರ್‌ಗಳಷ್ಟು ಕಡಿಮೆ ಮಾಡಬಹುದಾಗಿದೆ.
ಹೊಸ ನಿಲ್ದಾಣವು ಪೀಣ್ಯ ಮತ್ತು ಗೊರಗುಂಟೆಪಾಳ್ಯದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೆಟ್ರೋ ನಿರ್ಮಾಣ ಸ್ಥಳಗಳಿಗೆ ಗುರುವಾರ ಬೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಡಿಸಿಎಂ ಬಳಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
3ನೇ ಹಂತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ರಾಜ್ಯ ಸರ್ಕಾರ ಈಗಾಗಲೇ ಅನುಮೋದಿಸಿದೆ. 3ನೇ ಹಂತವು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ, ಆರೆಂಜ್ ಲೈನ್ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಎರಡನೇ ಕಾರಿಡಾರ್ (12.5 ಕಿ.ಮೀ) ಆಗಿದೆ.
ಎಲ್ಲೆಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳು?
ಜೆಪಿ ನಗರ, ಮೈಸೂರು ರಸ್ತೆ, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳನ್ನು ಯೋಜಿಸಲಾಗಿತ್ತು. ಆದಾಗ್ಯೂ, ಪೀಣ್ಯ ಇಂಟರ್‌ಚೇಂಜ್‌ಗೆ ಸಂಬಂಧಿಸಿದಂತೆ ಮರು ಪರಿಶೀಲನೆ ನಡೆಯುತ್ತಿದೆ. ಏಕೆಂದರೆ ಮೂಲತಃ ಪ್ರಸ್ತಾಪಿಸಲಾದ ಪೀಣ್ಯದ ಸ್ಥಳದಲ್ಲಿ ಅದರ ನಿರ್ಮಾಣಕ್ಕೆ ಅತಿ ಹೆಚ್ಚು ಎತ್ತರಿಸಬೇಕಾದ ಅಗತ್ಯವಿದೆ. ಹೀಗಾಗಿ ಮತ್ತು ದೂರ ಕಡಿಮೆ ಮಾಡುವ ಉದ್ದೇಶದಿಂದ ಗೊರಗುಂಟೆ ಪಾಳ್ಯಕ್ಕೆ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಯೋಜಿಸುತ್ತಿದೆ.
ಮೆಟ್ರೋ ದರ ಏರಿಕೆ ಬಗ್ಗೆ ಏನಂದ್ರು ಡಿಸಿಎಂ?
ಪ್ರಸ್ತಾವಿತ ಮೆಟ್ರೋ ಟಿಕೆಟ್ ದರ ಹೆಚ್ಚಳದ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಉದ್ದೇಶಕ್ಕಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸಮಿತಿಯನ್ನು ರಚಿಸಲಾಗಿದೆ ಮತ್ತು ಸರ್ಕಾರವು ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇನಲ್ಲಿ ಟೋಲ್ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶಾಕ್..!
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನಗಳ ಕುರಿತು ಮಾತನಾಡಿದ ಅವರು, ಹೊಸದಾಗಿ ನಿರ್ಮಿಸಲಾದ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ ನಗರ ಸೌಂದರ್ಯೀಕರಣ ಪ್ರಯತ್ನಗಳ ಭಾಗವಾಗಿ ಹೊಸ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್‌ಗಳ ನಿರ್ಮಾಣ ಸೇರಿದಂತೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇನ್ನಿತರ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




