AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ ಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್: ಎಟಿಎಂ ಹಣ ಎಗರಿಸುತ್ತಿದ್ದವರು ಅರೆಸ್ಟ್

ಇತ್ತೀಚೆಗೆ ಬಿಡುಗಡೆಯಾಗಿದ್ದ ಲಕ್ಕಿ ಭಾಸ್ಕರ್ ತೆಲಗು ಸಿನಿಮಾ ಬಾಕ್ಸ್ ಆಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಬ್ಯಾಂಕ್ ಉದ್ಯೋಗಿ ಆಗಿದ್ದ ನಾಯಕ ಅಲ್ಲಿಂದಲೇ ಹಣ ಕದ್ದು ಬ್ಯುಸಿನೆಸ್ ಮಾಡ್ತಿದ್ದ. ಆದರೆ ಅದು ಕಾಲ್ಪನಿಕ ಕಥೆ. ಆದರೆ ಬೆಂಗಳೂರಲ್ಲಿ ಅಂಥದ್ದೇ ಒಂದು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಮತ್ತೊಂದು ಕಡೆ ಕೆಲಸ ಮಾಡುತ್ತಿದ್ದ ಮಾಲೀಕನಿಗೆ ವಂಚಿಸಿ ಹಣ ದೋಚಿದ್ದ ಆಸಾಮಿ ಕೂಡ ಖಾಕಿ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ ಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್: ಎಟಿಎಂ ಹಣ ಎಗರಿಸುತ್ತಿದ್ದವರು ಅರೆಸ್ಟ್
ಬಂಧಿತ ಆರೋಪಿಗಳು
ರಾಚಪ್ಪಾಜಿ ನಾಯ್ಕ್
| Updated By: Ganapathi Sharma|

Updated on: Feb 07, 2025 | 5:01 PM

Share

ಬೆಂಗಳೂರು, ಫೆಬ್ರವರಿ 7: ಲಕ್ಕಿ ಭಾಸ್ಕರ್ ತೆಲಗು ಸಿನಿಮಾದಲ್ಲಿ ನಾಯಕ‌ ನಟ ಬ್ಯಾಂಕ್ ಉದ್ಯೋಗಿ. ಬ್ಯಾಂಕ್​ನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ನಾಯಕ ಅದನ್ನು ಬೇರೆ ಬೇರೆ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದ. ಅದರಿಂದ ಬಂದ ಲಾಭದ ದುಡ್ಡನ್ನು ಮತ್ತೆ ಬ್ಯಾಂಕ್ ಖಜಾನೆಗೇ ತಂದಿಡುತ್ತಿದ್ದ. ಅದೇ ರೀತಿ ಮಾಡಿ ಶ್ರೀಮಂತನಾಗುತ್ತಾನೆ. ಇದು ಸಿನಿಮಾ ಆದರೆ, ಅದೇ ರೀತಿ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಖೆಡ್ಡಕ್ಕೆ ಕೆಡವಿದ್ದಾರೆ.

ಹೀಗೆ ಪೊಲೀಸರ ಬಲೆಗೆ ಬಿದ್ದವರು ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್ ಹಾಗೂ ಜಸ್ವಂತ್. ಶಿವು ಹೊರತು ಪಡಿಸಿದರೆ ಉಳಿದವರೆಲ್ಲರು ಎಟಿಎಂಗಳಿಗೆ ಹಣ ತುಂಬುವ ಸೆಕ್ಯೂರ್ ವ್ಯಾಲ್ಯೂ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ‌ ಕ್ಯಾಶ್ ಆಫೀಸರ್​ಗಳಾಗಿ ಕೆಲಸ ಮಾಡುತ್ತಿದ್ದವರು. ಎಟಿಎಂನಲ್ಲಿ ಹಣ ತುಂಬುವುದು ಸೇರಿದಂತೆ ದುರಸ್ತಿ ಕೆಲಸ ಕೂಡ ಮಾಡುತ್ತಿದ್ದರು. ಈ ವೇಳೆ ಎಟಿಎಂನಿಂದ ಹಣ ತೆಗೆದು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಇದನ್ನು ಬೇರೆ ಕಡೆ ಹೂಡಿಕೆ ಮಾಡಿ ಹಣ ಡಬಲ್ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಆಡಿಟಿಂಗ್ ವೇಳೆಯಲ್ಲಿ ಬೇರೆ ಎಟಿಎಂನಿಂದ ಹಣ ತಂದು ಮತ್ತೊಂದರಲ್ಲಿ ಹಾಕುವ ಕೆಲಸ ಮಾಡುತ್ತಿದ್ದರು.

ಹೀಗೆ ಒಟ್ಟು ನಾಲ್ಕೈದು ಎಟಿಎಂನಿಂದ 43.76 ಲಕ್ಷ ರೂ. ಹಣ ಎಗರಿಸಿದ್ದ ಖದೀಮರು ಎಸ್​​ಯುವಿ ಕಾರಿನಲ್ಲಿಯೇ ಇಟ್ಟುಕೊಂಡು ಹಣ ಹಂಚಿಕೊಳ್ಳುವಾಗ ಕಿರಿಕ್ ಆಗಿದೆ. ಇದು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ಗೊತ್ತಾಗಿದೆ. ದಾಳಿ ಮಾಡಿದ ಪೊಲೀಸರು, ಒಟ್ಟು 52 ಲಕ್ಷ ರೂ. ನಗದು ಹಣ ಹಾಗೂ ಕದ್ದ ಹಣದಲ್ಲಿ ಖರೀದಿಸಿದ್ದ 40 ಲಕ್ಷ ರೂ. ಮೌಲ್ಯದ ಕಾರುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನಿಗೆ ದೋಖಾ: ಆರೋಪಿ ಅರೆಸ್ಟ್

ನಗರತ್ ಪೇಟೆಯಲ್ಲಿ ವಿಕ್ರಮ್ ಕಾರಿಯ ಎಂಬವರು ಚಿನ್ನದ ಅಂಗಡಿ ಹೊಂದಿದ್ದಾರೆ. ಅಂಗಡಿಯಲ್ಲಿ ತಮಿಳುನಾಡು ಮೂಲದ ನರೇಶ್ ಶರ್ಮಾ ಕಳೆದ 3 ವರ್ಷದಿಂದ ಕೆಲಸ ಮಾಡ್ತಿದ್ದು, ವಿವಿಧ ಅಂಗಡಿಯಲ್ಲಿ ಚಿನ್ನ ಮಾರಾಟ ಮಾಡಿಕೊಡುವ ಕೆಲಸ ಮಾಡ್ತಿದ್ದ. ಹೀಗೆ ಕೊಟ್ಟ ಚಿನ್ನವನ್ನು ಕರಗಿಸಿ ಪ್ರತಿ ಬಾರಿ ಸ್ವಲ್ಪ ಸ್ವಲ್ಪ ಹಣ ಎಗರಿಸ್ತಿದ್ದ. ಹೀಗೆ ಮೂರು ವರ್ಷದಲ್ಲಿ 9 ಕೆಜಿ ಚಿನ್ನ ಎಗರಿಸಿ ವಂಚಿಸಿದ್ದಾನೆ. ಮಾಲೀಕರಿಗೆ ವಿಚಾರ ಗೊತ್ತಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ಆರೋಪಿ ನರೇಶ್ ಬಂಧಿಸಿ 50 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕೋಲಾರ: ಸ್ಮಶಾನದಲ್ಲಿ ವಾಸ, ಅಲ್ಲೇ ಸ್ಕೆಚ್; ಜನರ ನಿದ್ದೆಗೆಡಿಸಿದ್ದ ಮಂಕಿಕ್ಯಾಪ್​​ ಗ್ಯಾಂಗ್​​ ಭೇದಿಸಿದ ಖಾಕಿ

ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಬಡವರಾಗಿದ್ದು. ಹಣ ಮಾಡಲು ಅಡ್ಡದಾರಿ ಹಿಡಿದಿದ್ದರು. ಐಷಾರಾಮಿ ಜೀವನಕ್ಕಾಗಿ ಉಂಡ ಮನೆಗೆ ದ್ರೋಹ ಬಗೆದವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ