ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ

ನಮ್ಮ ಮೆಟ್ರೋದಲ್ಲಿ ಟಿಕೆಟ್ ಹೊರತಾದ ಆದಾಯ ಹೆಚ್ಚಿಸಿಕೊಳ್ಳಲು ಬಿಎಂಆರ್​ಸಿಎಲ್ ಸಂಸ್ಥೆಯು ಬೆಂಗಳೂರಿನ 5,000ಕ್ಕೂ ಹೆಚ್ಚು ಮೆಟ್ರೋ ಪಿಲ್ಲರ್‌ಗಳಲ್ಲಿ ಡಿಜಿಟಲ್ ಜಾಹೀರಾತು ಅಳವಡಿಸಲು ಟೆಂಡರ್ ಕರೆದಿದೆ. ಆದರೆ ಇದು ವಾಹನ ಸವಾರರ ಗಮನ ಸೆಳೆದು ಅಪಘಾತಕ್ಕೆ ಕಾರಣವಾಗಬಹುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
Image Credit source: tv9

Updated on: May 20, 2026 | 7:20 AM

ಬೆಂಗಳೂರು, ಮೇ 20: ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿಯಾಗಿರುವ ನಮ್ಮ ಮೆಟ್ರೋ (Namma Metro) ಇನ್ಮುಂದೆ ಕೇವಲ ಪ್ರಯಾಣಿಕರ ಸಾರಿಗೆ ಸಂಸ್ಥೆಯಾಗಿ ಉಳಿಯದೆ, ಭಾರಿ ಆದಾಯ ತರುವ ಬಿಸಿನೆಸ್ ಹಬ್ ಆಗಿ ಬದಲಾಗಲು ಸಜ್ಜಾಗಿದೆ. ಕೇವಲ ಟಿಕೆಟ್ ಆದಾಯದ ಮೇಲಷ್ಟೇ ಅವಲಂಬಿತವಾಗದೆ, ಟಿಕೆಟ್ ರಹಿತ ಇತರೆ ಮೂಲಗಳ ಆದಾಯವನ್ನು (ನಾನ್-ಫೇರ್ ಬಾಕ್ಸ್ ರೆವಿನ್ಯೂ) ಭರ್ಜರಿಯಾಗಿ ಹೆಚ್ಚಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ನಗರದಾದ್ಯಂತ ಇರುವ ಮೆಟ್ರೋ ಪಿಲ್ಲರ್​ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಈಗ ಮೆಗಾ ಟೆಂಡರ್ ಆಹ್ವಾನಿಸಿದೆ. ಆದರೆ, ಸರ್ಕಾರದ ಈ ನಿರ್ಧಾರವು ನಗರದ ಸೌಂದರ್ಯಕ್ಕೆ ಧಕ್ಕೆ ತರಲಿದೆ ಮತ್ತು ವಾಹನ ಸವಾರರ ಗಮನ ಭಂಗ ಮಾಡಲಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಡಿಜಿಟಲ್ ಜಾಹೀರಾತುಗಳಿಗೆ 5,000ಕ್ಕೂ ಹೆಚ್ಚು ಪಿಲ್ಲರ್‌ಗಳ ಬಳಕೆ.
  • ಈಗಾಗಲೇ ಸ್ಥಳೀಯ ಕಲಾವಿದರು ಬಿಡಿಸಿರುವ ಸುಂದರ ಕಲಾಕೃತಿಗಳನ್ನು ಸಂರಕ್ಷಿಸಿ, ಪಿಲ್ಲರ್‌ಗಳ ಮಧ್ಯದ ಭಾಗದಲ್ಲಿ ಮಾತ್ರ ಜಾಹೀರಾತು ಬೋರ್ಡ್‌ಗಳನ್ನು ಅಳವಡಿಸಲು ಅವಕಾಶ.
  • ಅಪಘಾತಗಳ ಆತಂಕ ಮೂಡಿಸಿದ ಹೈಟೆಕ್ ದೃಶ್ಯ ವೈಭವ.

‘ದುಡ್ಡು ಮಾಡುವುದೇ ಉದ್ದೇಶ, ನಗರದ ಸೌಂದರ್ಯಕ್ಕೆ ಧಕ್ಕೆ’

ಬಿಎಂಆರ್‌ಸಿಎಲ್‌ನ ಈ ವಾಣಿಜ್ಯೀಕರಣದ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಮಾತನಾಡಿದ ಸಾರ್ವಜನಿಕರಾದ ವೀರೇಶ್, ‘ಮೆಟ್ರೋ ಸಂಸ್ಥೆಯು ಕೇವಲ ಹಣ ಗಳಿಸುವುದನ್ನೇ ಉದ್ದೇಶವಾಗಿಟ್ಟುಕೊಂಡು ನಗರದ ಸೌಂದರ್ಯವನ್ನು ಹಾಳುಗೆಡವಲು ಹೊರಟಿದೆ. ರಾತ್ರಿ ವೇಳೆ ಈ ಪ್ರಕಾಶಮಾನವಾದ ಡಿಜಿಟಲ್ ಬೋರ್ಡ್‌ಗಳಿಂದಾಗಿ ವಾಹನ ಚಾಲನೆ ಮಾಡುವುದು ಕಷ್ಟವಾಗುತ್ತದೆ’ ಎಂದು ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್, ‘ನಾವು ವಿಶ್ವ ದರ್ಜೆಯ ಸಂಘಟಿತ ಜಾಹೀರಾತು ಮಾದರಿಯನ್ನು ಜಾರಿಗೆ ತರುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಕಠಿಣ ನಿಯಮಾವಳಿಗಳಿಗೆ ಒಳಪಟ್ಟೇ ಈ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ವಾಹನ ಸವಾರರಿಗೆ ಹೊಸ ಸಮಸ್ಯೆ

ಸದ್ಯ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮೆಟ್ರೋ ಸಂಸ್ಥೆ ಇಟ್ಟಿರುವ ಈ ಹೆಜ್ಜೆ, ರಸ್ತೆ ಸುರಕ್ಷತೆಯನ್ನು ಕಾಪಾಡುವಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬಿಎಂಆರ್‌ಸಿಎಲ್‌ಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us