
ಬೆಂಗಳೂರು, ಮೇ 31: ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳು ಇಂದು (ಮೇ 31) ಬೆಳಿಗ್ಗೆ 7 ಗಂಟೆಯಿಂದಲೇ ಸಂಪೂರ್ಣವಾಗಿ ಲಭ್ಯವಿರುತ್ತವೆ. ಹೀಗಾಗಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲ ನಿಲ್ದಾಣಗಳ ನಡುವೆ ಇಂದು ಸಂಚಾರ ವ್ಯತ್ಯಯದ ಬಗ್ಗೆ ಈ ಹಿಂದೆಯೇ BMRCL ಮಾಹಿತಿ ನೀಡಿತ್ತು.
ಸಾರ್ವಜನಿಕ ಮಾಹಿತಿ-ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ಮೆಟ್ರೋ ರೈಲು ಸೇವೆಗಳು ಇಂದು ಬೆಳಿಗ್ಗೆ 07:00 ಗಂಟೆಯಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನಿಸಿ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
— ನಮ್ಮ ಮೆಟ್ರೋ (@OfficialBMRCL) May 31, 2026
ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ಮೇ 31ರ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆಯಿಂದ 9ರ ವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಮೇ 29ರಂದು ಪ್ರಕಟಣೆ ಮೂಲಕ ಬಿಎಂಆರ್‌ಸಿಎಲ್ ತಿಳಿಸಿತ್ತು. ಆದರೆ ನಿರ್ವಹಣಾ ಕಾಮಗಾರಿಗಳು ನಿಗದಿತ ಸಮಯಕ್ಕೂ ಮೊದಲೇ ಮುಗಿದಿರುವ ಕಾರಣ ಬೆಳಿಗ್ಗೆ 9 ಗಂಟೆಯ ಬದಲು 7 ಗಂಟೆಯಿಂದಲೇ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ; BMRCL ವಿರುದ್ಧ ಪ್ರಯಾಣಿಕರ ಆಕ್ರೋಶ
ರಜೆಯ ದಿನವಾದ ಭಾನುವಾರವೇ ಮೆಟ್ರೋ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಬಿಎಂಆರ್‌ಸಿಎಲ್ ತಿಳಿಸಿದ್ದ ಕಾರಣ ಪ್ರಯಾಣಿಕರು ಕೊಂಚ ನಿರಾಸೆಗೊಂಡಿದ್ದರು. ಆದರೆ ಬಿಎಂಆರ್‌ಸಿಎಲ್ ನೀಡಿರುವ ಸುದ್ದಿ ಅವರಿಗೀಗ ನಿರಾಳರಾಗುವಂತೆ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:54 am, Sun, 31 May 26