Viral Post: ನಾಯಂಡಹಳ್ಳಿ ಜಂಕ್ಷನ್​ನಲ್ಲಿ ರಸ್ತೆಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸರು: ನೆಟ್ಟಿಗರ ಮೆಚ್ಚುಗೆ

ರಸ್ತೆ ಗುಂಡಿ ಮುಚ್ಚುವ ಬೆಂಗಳೂರು ಪೊಲೀಸರ ಕಾರ್ಯ ಜನರ ಗಮನ ಸೆಳೆದಿದೆ. ಈ ಟ್ವೀಟ್​ ವೈರಲ್ ಆಗಿದ್ದು, ಸಾಕಷ್ಟು ಜನರು ರಿಟ್ವೀಟ್ ಮಾಡಿದ್ದಾರೆ.

Viral Post: ನಾಯಂಡಹಳ್ಳಿ ಜಂಕ್ಷನ್​ನಲ್ಲಿ ರಸ್ತೆಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸರು: ನೆಟ್ಟಿಗರ ಮೆಚ್ಚುಗೆ
ನಾಯಂಡಹಳ್ಳಿ ರಸ್ತೆಯಲ್ಲಿ ಗುಂಡಿ ಮುಚ್ಚುತ್ತಿರುವ ಪೊಲೀಸರು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 19, 2021 | 6:41 PM

ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್​ನಲ್ಲಿ ಟ್ರಾಫಿಕ್ ಪೊಲೀಸರು ಜನರ ನೆರವಿನಿಂದ ರಸ್ತೆ ಗುಂಡಿಗಳನ್ನು ಮುಚ್ಚಿದರು. ಈ ಕುರಿತು ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ನಾಲ್ಕು ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಈ ಪ್ರಯತ್ನವನ್ನು ಮೆಚ್ಚಿಕೊಂಡಿರುವ ಬೆಂಗಳೂರಿನ ಜನರು ಸಾರ್ವಜನಿಕರ ಸಮಸ್ಯೆಗಳಿಗೆ ಬಿಬಿಎಂಪಿ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ಬೆಂಗಳೂರು ಪೊಲೀಸರ ಕಾರ್ಯ ಜನರ ಗಮನ ಸೆಳೆದಿದೆ. ಈ ಟ್ವೀಟ್​ ವೈರಲ್ ಆಗಿದ್ದು, ಸಾಕಷ್ಟು ಜನರು ರಿಟ್ವೀಟ್ ಮಾಡಿದ್ದಾರೆ. ‘ಪೊಲೀಸರು ಈ ಕೆಲಸ ಮಾಡುವುದನ್ನು ನೋಡಲು ಬೇಸರವಾಗುತ್ತಿದೆ. ಆದರೆ ಅವರು ವಾಹನ ಬಳಕೆದಾರರ ಸುರಕ್ಷೆಗಾಗಿ ಇಂಥ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿಗೆ ತೆರಿಗೆ ತುಂಬುವುದು ನಿಲ್ಲಿಸೋಣ, ಟ್ರಾಫಿಕ್ ಪೊಲೀಸರಿಗೆ ಹೆಚ್ಚು ದಂಡ ತುಂಬೋಣ’ ಎಂದು ಅರುಣ್ ವಾಸುಕಿ ಹೇಳಿದ್ದಾರೆ.

ಬಿಬಿಎಂಪಿ ಕಾರ್ಯವೈಖರಿಯನ್ನು ಸಾಕಷ್ಟು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ರಸ್ತೆಗಳ ನಿರ್ವಹಣೆ ಮತ್ತು ರಿಪೇರಿ ಕೆಲಸವನ್ನು ಬಿಬಿಎಂಪಿ ಮಾಡಬೇಕಿತ್ತು. ವಾಹನಗಳನ್ನು ಓಡಿಸುವವರ ಕಷ್ಟವನ್ನು ಹತ್ತಿರದಿಂದ ಗಮನಿಸುವ ಪೊಲೀಸರು ಇಂಥ ಮಹತ್ವದ ಕೆಲಸಕ್ಕೆ ಮುಂದೆ ಬಂದಿದ್ದಾರೆ’ ಎಂದು ರಾಜೇಶ್​ ತಿಳಿಸಿದ್ದಾರೆ.

ಕೆಲವರು ಮಾಡಿರುವ ಕಾಲೆಳೆಯುವ ಟ್ವೀಟ್​ಗಳಿಗೂ ಡಿಸಿಪಿ ಕುಲದೀಪ್​ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘ಈ ರಸ್ತೆಗಳು ಒಂದು ವಾರವಾದರೂ ಚೆನ್ನಾಗಿ ಇರಬಲ್ಲವಾ? ನಾನು ನಿಮ್ಮನ್ನು ಅಭಿನಂದಿಸಬೇಕೋ ಅಥವಾ ಅಳಬೇಕೋ’ ಎಂಬ ಕಿಶೋರ್ ನಾಯಕ್ ಅವರ ಪ್ರಶ್ನೆಗೆ, ‘ನಿಮ್ಮ ನಿರ್ಧಾರ’ ಎಂದು ಹೇಳಿದ್ದಾರೆ ಕುಲದೀಪ್ ಕುಮಾರ್.

‘ಟ್ರಾಫಿಕ್ ಪೊಲೀಸರೇ ರಸ್ತೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಹಲವರು ಸಲಹೆ ಮಾಡಿದ್ದಾರೆ. ‘ಈಗಾಗಲೇ ಜನರ ಕೊರತೆ ಎದುರಿಸುತ್ತಿರುವ ಪೊಲೀಸರು ಬಿಬಿಎಂಪಿ ಕೆಲಸವನ್ನೂ ಮಾಡಬೇಕಾಗಿ ಬಂದಿರುವುದು ವಿಷಾದದ ಸಂಗತಿ’ ಎಂದು ಜಯದೇವನ್ ಪ್ರಭಾಕರನ್ ವಿಷಾದಿಸಿದ್ದಾರೆ.

‘ಈ ಕೆಲಸ ನೀವೇಕೆ ಮಾಡಿದಿರಿ? ಬಿಬಿಎಂಪಿಯ ನಿಮ್ಮ ಸಹವರ್ತಿಗಳ ಗಮನ ಸೆಳೆಯಬೇಕಿತ್ತು ಅಲ್ಲವೇ? ನೀವು ಮಾಡಬೇಕಾದ ಕೆಲಸವೇ ಸಾಕಷ್ಟಿರುವಾಗ ಬೇಡದ ಉಸಾಬರಿ ಏಕೆ ಬೇಕಿತ್ತು’ ಎಂದು ವಿಎನ್ ಹೆಸರಿನ ಟ್ವಿಟರ್ ಹ್ಯಾಂಡಲ್ ಖಾರವಾಗಿ ಪ್ರಶ್ನಿಸಿದೆ. ‘ನಮಗೆ ಗೊತ್ತಿದೆ. ಸುರಕ್ಷೆಯೂ ನಮ್ಮ ಪ್ರಾಥಮಿಕ ಮತ್ತು ಮುಖ್ಯ ಜವಾಬ್ದಾರಿ’ ಎಂದು ಕುಲ್​ದೀಪ್​ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್​ ಇದನ್ನೂ ಓದಿ: Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​