ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಕೂಡ ಒಂದು: ನಡ್ಡಾ

ನಿಮ್ಹಾನ್ಸ್ ಆಸ್ಪತ್ರೆ ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ. ವಾರ್ಷಿಕವಾಗಿ 7 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಈ ಆಸ್ಪತ್ರೆ ಹೊಸ ಸೇವೆಗಳನ್ನು ಆರಂಭಿಸಿದೆ. ಮಾನಸಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ನಿಮ್ಹಾನ್ಸ್‌ನ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದರು. ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಜೆಪಿ ನಡ್ಡಾ ಹೇಳಿದರು.

ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಕೂಡ ಒಂದು: ನಡ್ಡಾ
ಜೆಪಿ ನಡ್ಡಾ
Follow us
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ

Updated on:Jan 03, 2025 | 2:07 PM

ಬೆಂಗಳೂರು, ಜನವರಿ 03: ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ (NIMHANS) ಕೂಡ ಒಂದಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಾರ್ಷಿಕ 7 ಲಕ್ಷ ಜನ ಚಿಕಿತ್ಸೆ ಪಡೆಯುತ್ತಾರೆ. ಹೊಸದಾಗಿ ಸಹ ಕೆಲವು ಸೇವೆಗಳನ್ನು ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ನಿಮ್ಹಾನ್ಸ್ ಅಧ್ಯಕ್ಷ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ (JP Nadda) ತಿಳಿಸಿದರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ, “ನಿಮ್ಹಾನ್ಸ್​ ಸುವರ್ಣ ಮಹೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸರ್ಕಾರ ಹಲವು ಆರೋಗ್ಯ ಯೋಜನೆಗಳನ್ನು ಜಾರಿ ಮಾಡಿದೆ. ಆರೋಗ್ಯ ಸೇವೆಗಳಲ್ಲಿ ನಿಮ್ಹಾನ್ಸ್ ಸಂಸ್ಥೆ ತನಗೆ ತಾನೇ ಸಾಟಿಯಾಗಿದೆ. 50 ವರ್ಷದ ಈ ಸುದೀರ್ಘ ಯಾನ, ತ್ಯಾಗ, ಸೇವೆ ಸ್ಮರಣೀಯವಾಗಿದೆ. ಮುಂದಿನ 25 ವರ್ಷಕ್ಕೆ ನಿಮ್ಹಾನ್ಸ್ ಅಭಿವೃದ್ಧಿಯ ನಕ್ಷೆ ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಮ್ಹಾನ್ಸ್​ನ ಟೆಲಿ‌ ಕನ್ಸಲ್ಟೇಷನ್ ಸೇವೆಗೆ ಅಭಿನಂದನೆಗಳು. ವಾರ್ಷಿಕ 1000 ಕ್ಕೂ ಹೆಚ್ಚು ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಆರೋಗ್ಯ ಸೇವೆಗೆ ನಿಮ್ಹಾನ್ಸ್​ ಕಳುಹಿಸುತ್ತಿದೆ. ಸೀಮಿತ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ: ಶುಭ ಸುದ್ದಿ ನೀಡಿದ ಸಚಿವ ಶರಣ ಪ್ರಕಾಶ್ ಪಾಟೀಲ್

ನಿಮ್ಹಾನ್ಸ್ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ: ಸಿದ್ದರಾಮಯ್ಯ

ಮಾನಸಿಕ ಆರೋಗ್ಯ ಕುರಿತಾದ ನೀತಿ ನಿರೂಪಣೆಯಲ್ಲಿ ನಿಮ್ಹಾನ್ಸ್ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ. ರಾಜ್ಯದಾದ್ಯಂತ ಮಾನಸಿಕ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರ ನಿಮ್ಹಾನ್ಸ್ ನೊಂದಿಗೆ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಮ್ಮ ಸರ್ಕಾರ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಆತ್ಮಹತ್ಯೆ ತಡೆ, ದುಶ್ಚಟ ಹೊಂದಿದವರ ಪುನರ್ವಸತಿ ಮತ್ತು ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ. ಟೆಲಿ ಮನಸ್ (ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ) ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ರಾಜ್ಯದಲ್ಲಿ ಮಾನಸಿಕ ಆರೋಗ್ಯದ ಬೆಂಬಲ ಅಗತ್ಯವಿರುವ ಸುಮಾರು 17 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ನಿಮ್ಹಾನ್ಸ್ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಪ್ರತಿ ವರ್ಷ 137 ಕೋಟಿ ರೂ.ಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ನಿರೂಪಿಸಿದೆ ಎಂದು ತಿಳಿಸಿದರು.

ನಿಮ್ಹಾನ್ಸ್ ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ನಾವು ಒಟ್ಟಾಗಿ ಶ್ರಮಿಸಿ, ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವ ಮೂಲಕ ಸುಭದ್ರ ರಾಷ್ಟ್ರವನ್ನು ನಿರ್ಮಿಸೋಣ ಎಂದು ಕರೆ ಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:06 pm, Fri, 3 January 25