ಡಿಜಿಟಲ್​​ ಡಿಟಾಕ್ಸ್​​ಗಾಗಿ ಸಹಾಯವಾಣಿ ಆರಂಭಿಸಿದ ನಿಮ್ಹಾನ್ಸ್​​, ಏನಿದು ನೋಮೋಫೋಬಿಯಾ?

Digital detox ತಂತ್ರಜ್ಞಾನದ ಅತಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಡಿಜಿಟಲ್ ಹೈಜೀನ್ ಉತ್ತೇಜಿಸಲು ಸಹಾಯವಾಣಿಯು ಸಹಾಯ ಮಾಡುತ್ತದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಚಟುವಟಿಕೆಗಳ ನಡುವೆ ಸಮತೋಲನವನ್ನು ಸಾಧಿಸಲು ನೆರವಾಗುತ್ತದೆ.

ಡಿಜಿಟಲ್​​ ಡಿಟಾಕ್ಸ್​​ಗಾಗಿ ಸಹಾಯವಾಣಿ ಆರಂಭಿಸಿದ ನಿಮ್ಹಾನ್ಸ್​​, ಏನಿದು ನೋಮೋಫೋಬಿಯಾ?
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rashmi Kallakatta

Nov 23, 2022 | 3:05 PM

ದೇಶದಲ್ಲಿ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಅದರ ವ್ಯಸನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್ (NIMHANS) ಡಿಜಿಟಲ್ ಡಿಟಾಕ್ಸ್‌ಗಾಗಿ (digital detox)ಇದೇ ಮೊದಲ ಬಾರಿ ಸಹಾಯವಾಣಿಯನ್ನು ಪ್ರಾರಂಭಿಸಿದೆ.ಈ ಸಹಾಯವಾಣಿಯು ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಮತ್ತು Service for Healthy Use of Technology (SHUT) ಸೇವೆಯ ಸಂಯೋಜಕರಾದ ಡಾ ಮನೋಜ್ ಕುಮಾರ್ ಶರ್ಮಾ ಕನಸಿನ ಕೂಸು. ಈ ರೀತಿಯ ವರ್ತನೆಯ ವ್ಯಸನಕ್ಕೆ ನೋಮೋಫೋಬಿಯಾ(NoMophobia) ಎಂಬ ಹೆಸರಿದೆ ಎಂದು ಸೌತ್ ಫಸ್ಟ್ ಜತೆ ಮಾತನಾಡಿದ ಶರ್ಮಾ ಹೇಳಿದ್ದಾರೆ. NoMophobia ಬಿಡಿಸಿ ಹೇಳುವುದಾದರೆ no-mobile-phone-phobia. ಮೊಬೈಲ್ ಫೋನ್ ಇಲ್ಲದೇ ಇರುವ ಭಯ ಜನರಲ್ಲಿದೆ ಅಂತಾರೆ ಶರ್ಮಾ. “ಮೊಬೈಲ್ ಫೋನ್/ತಂತ್ರಜ್ಞಾನದ ವ್ಯಸನಕ್ಕೆ ಖಂಡಿತವಾಗಿಯೂ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ. ಅದು ಹೇಗೆ ಎಂಬುದುಅನೇಕರಿಗೆ ತಿಳಿದಿರುವುದಿಲ್ಲ. ಅದಕ್ಕೆ ನಮ್ಮ ಸಹಾಯವಾಣಿ ಜನರಿಗೆ ಸಹಾಯ ಮಾಡುತ್ತದೆ ಎಂದು ಶರ್ಮಾ ಹೇಳಿದ್ದಾರೆ.

ಇಂತಹ ಸಹಾಯವಾಣಿಯ ಅಗತ್ಯವಿದೆಯೇ?

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿರುವ SHUT ಕ್ಲಿನಿಕ್ ಡಿಜಿಟಲ್ ಡಿಟಾಕ್ಸ್‌ಗಾಗಿ ಸಹಾಯವಾಣಿ ಆರಂಭಿಸಿದ್ದು. ಇದು ತಂತ್ರಜ್ಞಾನದ ಬಳಕೆಯನ್ನು ಸ್ಥಗಿತಗೊಳಿಸಲು ಸಹಾಯ ಮಾಡುತ್ತದೆ. ವಾರದ ಹಿಂದೆ ಪ್ರಾರಂಭವಾದ ಈ ಸಹಾಯವಾಣಿ ಶುಕ್ರವಾರದಂದು ಮಾತ್ರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಸಹಾಯವಾಣಿ ಮುಂಬರುವ ತಿಂಗಳುಗಳಲ್ಲಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ಕಾರ್ಯನಿರ್ವಹಿಸಲಿದೆ. ಸಹಾಯವಾಣಿಯು ಪ್ರಾರಂಭವಾದ ಮೊದಲ ದಿನವೇ ಸುಮಾರು ಎಂಟು ಕರೆಗಳನ್ನು ಸ್ವೀಕರಿಸಿದೆ ಮತ್ತು ಮುಂಬರುವ ವಾರಗಳಲ್ಲಿ ಈ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ.

ತಂತ್ರಜ್ಞಾನದ ಅತಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಡಿಜಿಟಲ್ ಹೈಜೀನ್ ಉತ್ತೇಜಿಸಲು ಸಹಾಯವಾಣಿಯು ಸಹಾಯ ಮಾಡುತ್ತದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಚಟುವಟಿಕೆಗಳ ನಡುವೆ ಸಮತೋಲನವನ್ನು ಸಾಧಿಸಲು ನೆರವಾಗುತ್ತದೆ. ಮಕ್ಕಳು, ವಯಸ್ಕರು ಮತ್ತು ಹಿರಿಯರು ಸೇರಿದಂತೆ ಹಲವಾರು ಕ್ಲೈಂಟ್‌ಗಳು ನಮ್ಮ SHUT ಕ್ಲಿನಿಕ್‌ಗೆ ಗೇಮಿಂಗ್‌ಗೆ ಸಂಬಂಧಿಸಿದ ವ್ಯಸನಗಳು ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ, ನಿರಂತರ ಸ್ಕ್ರೋಲಿಂಗ್ ಸಿಂಡ್ರೋಮ್, ನೆಟ್‌ಫ್ಲಿಕ್ಸ್ ಮತ್ತು ಇತರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಂಜ್-ವೀಕ್ಷಣೆಯಿಂದ ಹೊರಬರುವ ಮಾರ್ಗ ಅನ್ವೇಶಿಸಿ ಬರುತ್ತಾರೆ. ವ್ಯಸನವನ್ನು ಗುರುತಿಸುವುದು ಮಾತ್ರವಲ್ಲದೆ ಅವರು ಸರಿಯಾದ ಡಿ-ಅಡಿಕ್ಷನ್ ಪ್ರಕ್ರಿಯೆಯ ಮೂಲಕ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯವಾಣಿ ಅಗತ್ಯವಿದೆ ಎಂದು ನಾವು ಭಾವಿಸಿರುವುದಾಗಿ ಡಾ ಶರ್ಮಾ ವಿವರಿಸಿದರು.

ಡೈಲಾಗ್ಸ್ ಇನ್ ಕ್ಲಿನಿಕಲ್ ನ್ಯೂರೋಸೈನ್ಸ್ (Dialogues in Clinical Neuroscience ) ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಆಗಾಗ್ಗೆ ತಂತ್ರಜ್ಞಾನದ ಬಳಕೆಯು ಹೆಚ್ಚಿದ ಗಮನ-ಕೊರತೆಯ ಲಕ್ಷಣಗಳು, ಸಾಮಾಜಿಕ ಪ್ರತ್ಯೇಕತೆ, ತಂತ್ರಜ್ಞಾನದ ವ್ಯಸನ, ದುರ್ಬಲ ಭಾವನಾತ್ಮಕ ಮತ್ತು ಸಾಮಾಜಿಕ ಬುದ್ಧಿವಂತಿಕೆ, ದುರ್ಬಲಗೊಂಡ ಮೆದುಳಿನ ಬೆಳವಣಿಗೆ, ಅನೇಕ ಸಂದರ್ಭಗಳಲ್ಲಿ ನಿದ್ರಾಭಂಗ ಮತ್ತು ನಿದ್ರಾಹೀನತೆಗೆ ಸಂಬಂಧಿಸಿದೆ ಎಂದು ತೋರಿಸಿದೆ.

ಯಾರು ಕರೆ ಮಾಡಬಹುದು?

ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುವ ಯಾವುದೇ ವ್ಯಕ್ತಿ, ತಂತ್ರಜ್ಞಾನದ ವ್ಯಸನದಿಂದಾಗಿ ತಮ್ಮ ಮನಸ್ಸು ಅಥವಾ ದೇಹವನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿ, ನಿರಂತರವಾಗಿ ಬ್ರೌಸ್ ಮಾಡುವ, ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಅದಮ್ಯ ಪ್ರಚೋದನೆಯು ಜೀವನದ ಇತರ ಸಮಸ್ಯೆಗಳಿಂದ ಕಾರಣವಾಗುತ್ತದೆ. ಕೇವಲ ತಂತ್ರಜ್ಞಾನವನ್ನು ಮಾತ್ರ ಉತ್ತಮ ಅಥವಾ ಶಾಂತವಾದ ಭಾವನೆಯನ್ನು ನೀಡಬಹುದು ಎಂದು ಭಾವಿಸುವವರು ಕೂಡಾ ಸಹಾಯವಾಣಿಯನ್ನು ಬಳಸಬೇಕು ಎಂದು ಡಾ ಶರ್ಮಾ ಹೇಳಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ತಂತ್ರಜ್ಞಾನ ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರಿದೆ ಎಂದು ನೀವು ಭಾವಿಸಿದಾಗ ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ನೋಡಲು ನೀವು ಬಯಸುತ್ತೀರಿ.

ಅನೇಕ ಜನರ ಮೇಲೆ ತಂತ್ರಜ್ಞಾನ ತುಂಬಾ ಪ್ರಭಾವ ಬೀರಿದೆ. ಇದು ಅವರ ವೈಯಕ್ತಿಕ ಮತ್ತು ಸಾಮಾಜಿಕ ಸಂಬಂಧಗಳನ್ನೂ ಅಡಿಮೇಲು ಮಾಡಿದೆ.  ತಂತ್ರಜ್ಞಾನಕ್ಕೆ ಜೋತು ಬೀಳುವುದು ಹಲವಾರು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಿದೆ. ಅಂಥವರು ಖಂಡಿತಾ ನಮಗೆ ಕರೆ ಮಾಡಿ ಆತ್ಮವಿಶ್ವಾಸ ಗಳಿಸಬಹುದು. ತಮ್ಮ ಸಮಸ್ಯೆಯನ್ನು ವಿವರವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಶರ್ಮಾ ಹೇಳಿದ್ದಾರೆ.

ಏನಿದು ಡಿಜಿಟಲ್ ಡಿಟಾಕ್ಸ್?

ತಂತ್ರಜ್ಞಾನದ ವ್ಯಸನದಿಂದಾಗಿ ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು OTT ಅತಿಯಾದ ವೀಕ್ಷಣೆಯಿಂದಾಗಿ, ಹಲವಾರು ಜನರು ಈಗ ಪ್ರಜ್ಞಾಪೂರ್ವಕವಾಗಿ ಒಂದು ಅಥವಾ ಹೆಚ್ಚಿನ ಸಾಮಾಜಿಕ ಮಾಧ್ಯಮ ಮತ್ತು OTT ಪ್ಲಾಟ್‌ಫಾರ್ಮ್‌ಗಳನ್ನು ಮಿತಿಗೊಳಿಸಲು ಅಥವಾ ಬಳಸದಿರಲು ಇಚ್ಛಿಸುತ್ತಾರೆ. ಇದೇ ಡಿಜಿಟಲ್ ಡಿಟಾಕ್ಸ್ ಎಂದು ಚೆನ್ನೈನ ಸ್ವತಂತ್ರ ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಡಾ ಪ್ರಿಯಾ ಜಿ ಹೇಳಿದ್ದಾರೆ. ಹಲವಾರು ಬ್ರ್ಯಾಂಡ್‌ಗಳು, ಪ್ರಭಾವಿಗಳು, ಸಾಮಾನ್ಯ ಪುರುಷರು/ಮಹಿಳೆಯರು/ಮಕ್ಕಳು ‘ಡಿಜಿಟಲ್ ಡಿಟಾಕ್ಸ್’ ಅನ್ನು ಆರಿಸಿಕೊಳ್ಳುತ್ತಾರೆ. ಈ ವಿದ್ಯಮಾನವು ಹೆಚ್ಚಾಗಿ Instagram, Twitter ಮತ್ತು Reddit ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬರುತ್ತದೆ. ಅವರಲ್ಲಿ ಹಲವಾರು ಮಂದಿ ಕೆಲಕಾಲ ಈ ಪ್ಲಾಟ್‌ಫಾರ್ಮ್‌ಗಳಿಂದ ದೂರವಿದ್ದು ಬಿಡುತ್ತಾರೆ. ಇದು ಅತಿಯಾದ ಬಳಕೆಗೆ ನೀಡಿದ ಬ್ರೇಕ್ ಆಗಿರುತ್ತದೆ. ಇದು ಮಾನಸಿಕ ಆರೋಗ್ಯ ಕ್ಷೀಣಿಸುವುದನ್ನು ತಡೆಯುತ್ತದೆ ಮತ್ತು ತಂತ್ರಜ್ಞಾನದ ಅವಶ್ಯಕತೆ ಮತ್ತು ಬಯಕೆ ನಡುವೆ ಏನು ಆಯ್ಕೆ ಮಾಡಬೇಕೆಂದು ತಿಳಿಸುತ್ತದೆ ಎಂದು ಅವರು ವಿವರಿಸಿದರು.

ಇದು ಅವರ ಆನ್‌ಲೈನ್ ಅಭ್ಯಾಸಗಳನ್ನು ಮರುಹೊಂದಿಸುತ್ತದೆ ಮತ್ತು ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ಡಿಜಿಟಲ್ ಬಳಕೆಯ ರೀತಿಗಳನ್ನು ಬದಲಾಯಿಸುತ್ತದೆ.

ಡಿಜಿಟಲ್ ಡಿಟಾಕ್ಸ್ ಮಾಡುವುದು ಹೇಗೆ?

ಇದಕ್ಕೆ ಸ್ಥಿರತೆ ಅತ್ಯಂತ ಮಹತ್ವದ್ದಾಗಿದೆ ಎಂದು ಡಾ ಶರ್ಮಾ ಹೇಳುತ್ತಾರೆ. ನಾವು ಬಳಸುವ ಸಾದನ ಅಥವಾ ಡಿವೈಸ್​​ನಿಂದ ಕಳಚಿಕೊಳ್ಳುವುದು ಸುಲಭ ಎಂದು ಜನರು ಭಾವಿಸಬಹುದು, ಆದರೆ ಇದು ಸುಲಭವಲ್ಲ.ದೈನಂದಿನ ನಡವಳಿಕೆಯಲ್ಲಿ ಇದನ್ನು ಮುಂದುವರಿಸಲು ನಿರ್ಣಯ ಮತ್ತು ಸ್ಥಿರತೆಯ ಅಗತ್ಯವಿದೆ ಎಂದು ಅವರು ಹೇಳಿದರು.ವಿವಿಧ ಕಾರಣಗಳಿಗಾಗಿ ತಂತ್ರಜ್ಞಾನದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಾರ್ಯಸಾಧ್ಯವಾಗದಿದ್ದರೂ, “ಬಳಕೆಯ ಸಮಯವನ್ನು ಕಡಿತಗೊಳಿಸುವುದು ಹೆಚ್ಚು ವಾಸ್ತವಿಕ ವಿಧಾನದಂತೆ ತೋರುತ್ತದೆ” ಎಂದು ಡಾ ಶರ್ಮಾ ಮತ್ತು ಡಾ ಪ್ರಿಯಾ ವಿವರಿಸಿದ್ದಾರೆ.

ಇದನ್ನು ಮಾಡಲು ಏನು ಬದಲಾಯಿಸಬೇಕೆಂದು ಎಂಬುದರ ಬಗ್ಗೆ ನಿರ್ಧಾರ ಮತ್ತು ಅದಕ್ಕಾಗಿ ಸರಿಯಾದ ಯೋಜನೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. SHUT ನಲ್ಲಿರುವ ವೈದ್ಯರು ನಿಖರವಾದ ಸಮಸ್ಯೆಯನ್ನು ಸೂಚಿಸಲು ಸಹಾಯ ಮಾಡಬಹುದು. ಕ್ಲೈಂಟ್‌ಗೆ ಅವರ ತಂತ್ರಜ್ಞಾನದ ಬಳಕೆಯ ಸ್ಪಷ್ಟ ಚಿತ್ರವನ್ನು ಪಡೆಯಲು ಮತ್ತು ಅವರ ಫೋನ್‌ಗಳಲ್ಲಿ ಕಳೆದ ಸಮಯವನ್ನು ಪರಿಶೀಲಿಸಲು ಇದು  ಸಹಾಯ ಮಾಡಬಹುದು.ಇದು ನಂತರ ವಿವಿಧ ಅಪ್ಲಿಕೇಶನ್‌ಗಳಲ್ಲಿ ವ್ಯಯಿಸಲಾದ ಸಮಯವನ್ನು ವಿಭಜಿಸಲು ಮತ್ತು ಯಾವ ಪ್ರದೇಶಗಳಲ್ಲಿ ಮಿತಿಯನ್ನು ಅಳವಡಿಸಬೇಕೆಂದು ನಿರ್ಧರಿಸಲು ಸಹಾಯ ಮಾಡುತ್ತದೆ.

ಕೆಲವು ಟಿಪ್ಸ್

  1. ದಿನವಿಡೀ ಇಂತಿಷ್ಟು ಸಮಯ ಸ್ಕ್ರೀನ್ ನಿಂದ ದೂರುವಿರುವುದಕ್ಕೆ ಸಮಯವನ್ನು ನಿಗದಿಪಡಿಸಿ.
  2. ನಿಮ್ಮ ಕೆಲಸದ ವೇಳಾಪಟ್ಟಿಯಲ್ಲಿ ಕನಿಷ್ಠ 30 ನಿಮಿಷಗಳ ಕಾಲ ನಡೆಯಲು ಅಥವಾ ಡೆಸ್ಕ್‌ನಿಂದ ದೂರವಿರಲು ನಿಮಗೆ ನೆನಪಿಸಲು ನಿಮ್ಮ ಫೋನ್‌ನಲ್ಲಿ ಅಲಾರಂ ಅನ್ನು ಇರಿಸಿಕೊಳ್ಳಿ.
  3. ನಿಮ್ಮ ಫೋನ್‌ನಿಂದ ಕೆಲವು ಸಮಸ್ಯಾತ್ಮಕ ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿ ಬಿಡಿ ಯಾವ ಅಪ್ಲಿಕೇಶನ್ ಉದಾಹರಣೆಗೆ, Instagramಗೆ ಹೆಚ್ಚು ಅಡಿಕ್ಟ್ ಆಗಿದ್ದೀರಿ ಎಂದಾದರೆ ಅದನ್ನು ಸ್ವಲ್ಪ ಸಮಯದವರಗೆ ಡಿಲೀಟ್ ಮಾಡಿ.
  4. ಸ್ಮಾರ್ಟ್ ಫೋನ್ ಬದಲಿಗೆ ಸಾದಾ ಫೋನ್ ಬಳಸಿ (ತೀವ್ರ ವ್ಯಸನದ ಪ್ರಕರಣಗಳಲ್ಲಿ ಮತ್ತು ಮಕ್ಕಳಿಗೆ ಇದನ್ನು ಮಾಡಬಹುದು). ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ಫೋನ್ ಆಫ್ ಮಾಡಿ ಬಿಡಿ.
  5. ” Do not disturb ” ಅನ್ನು ಸಕ್ರಿಯಗೊಳಿಸಿ. ಊಟದ ಸಮಯದಲ್ಲಿ ಮತ್ತು ಅದರ ನಂತರ ಕೆಲವು ಗಂಟೆಗಳ ನಂತರ ಎಲ್ಲಾ ಅಲರ್ಟ್, ನೋಟಿಫಿಕೇಶನ್, ಕರೆಗಳು ಇತ್ಯಾದಿಗಳನ್ನು ಸೈಲೆಂಟ್ ಮಾಡಿಬಿಡಿ.
  6. ನಿರ್ದಿಷ್ಟ ಅಪ್ಲಿಕೇಶನ್‌ಗಳನ್ನು ಮಿತಿಗೊಳಿಸಲು ಫೋನ್ ಸೆಟ್ಟಿಂಗ್‌ಗಳನ್ನು ಅಡ್ಜೆಸ್ಟ್ ಮಾಡಿ.
  7. ಫೋನ್ ಇಲ್ಲದ ಪ್ರದೇಶಗಳನ್ನು ಮಾಡಿ.ಮಲಗುವ ಕೋಣೆ, ಊಟದ ಮೇಜು ಮೊದಲಾದೆಡೆ ಫೋನ್‌ಗಳನ್ನು ನಿಷೇಧಿಸಿ.
  8. ಮನೆಯಲ್ಲಿ ಎಲ್ಲರಿಗೂ ಏಕರೂಪದ ನಿಯಮಗಳು ಅತ್ಯಗತ್ಯ.
  9. ಡಿಟಾಕ್ಸ್ ಮಾಡಲು ಕಷ್ಟವಾಗುತ್ತಿದ್ದರೆ ಮಾನಸಿಕ ಆರೋಗ್ಯ ಫ್ರೊಫೆಷನಲ್ ಗಳನ್ನು ಸಂಪರ್ಕಿಸಿ.

DIGITAL DETOX HELPLINE: 9480829675

ಕಾರ್ಯಪ್ರವೃತ್ತವಾಗಿರುವ ಸಮಯ: 9.30 am-1 pm (ಶುಕ್ರವಾರ ಮಾತ್ರ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada