ಕೇರಳದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚಳ; ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೈ ಅಲರ್ಟ್
ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ನಿಫಾ ವೈರಸ್ ಭೀತಿ ಶುರುವಾಗಿದ್ದು, ರಾಜ್ಯ ಗಡಿಭಾಗಗಳಲ್ಲಿ ಹೈಅಲರ್ಟ್ ಘೋಷಣೆಯಾಗಿದೆ. ಅದರಲ್ಲೂ ಪ್ರಮುಖವಾಗಿ ಸಾವಿರಾರು ಪ್ರಭೇದದ ಪ್ರಾಣಿ-ಪಕ್ಷಿಗಳ ಸಂಕುಲವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಿಫಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು, ಸೆ.16: ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಂದ್ರೆ, ಸಾವಿರಾರು ಸಂಖ್ಯೆಯ ಪ್ರಾಣಿ-ಪಕ್ಷಿಗಳಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರತಿದಿನ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park) ಕ್ಕೆ ಭೇಟಿ ನೀಡುತ್ತಾರೆ. ಆದ್ರೆ, ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆಯಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪಕ್ಷಿಗಳಿರುವ ಕೇಜ್ ಗಳ ಬಳಿ ದಿನಕ್ಕೆ ಎರಡು ಬಾರಿಯಂತೆ ಔಷಧಿ ಸ್ಪ್ರೇ ಮಾಡಲಾಗುತ್ತಿದೆ. ಹೊರಗಿನಿಂದ ಪಾರ್ಕ್ನ ಒಳ ಬರುವ ಬಾವಲಿಗಳು ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಪಾರ್ಕ್ನಲ್ಲಿನ ಪ್ರಾಣಿ-ಪಕ್ಷಿಗಳಿಗೆ ನೀಡುವ ಆಹಾರ ಹಾಗೂ ಅವುಗಳ ಆರೋಗ್ಯದ ಮೇಲೂ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ಹೊರಗಿನಿಂದ ಬರುವ ಪ್ರವಾಸಿಗರು ಪ್ರವೇಶದ್ವಾರ, ನಿರ್ಗಮನ ದ್ವಾರಗಳಲ್ಲಿ ಸೋಂಕು ನಿವಾರಕ ದ್ರಾವಣದ ಮೇಲೆ ಕಾಲಿಟ್ಟು ಒಳಗೆ ಬರುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಪಾರ್ಕ್ ಒಳಭಾಗ ಹಾಗೂ ಹೊರಭಾಗದ ಇಕ್ಕೆಲಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಗೂ ಸುಣ್ಣದ ಪುಡಿ ಹಾಕಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಆ್ಯಂಟಿ ವೈರಸ್ ಡಿಸ್ ಇನ್ಫೇಕ್ಷನ್ನಿಂದ ಪಾರ್ಕ್ನ ಸುತ್ತಲೂ ಸ್ಪ್ರೇ ಮಾಡಲಾಗುತ್ತಿದೆ. ಪ್ರತಿ ದಿನ ಸಾವಿರಾರು ಜನ ಬೇರೆ ರಾಜ್ಯದಿಂದ ಆಗಮಿಸುವ ಹಿನ್ನೆಲೆ ಪ್ರವಾಸಿಗರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲು ಸಿದ್ದತೆ ಮಾಡಲಾಗುತ್ತಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಮಾರ್ಗಸೂಚಿಯನ್ನ ಹೊರಡಿಸಿದ್ರೆ ಮಾಸ್ಕ್ ಕಡ್ಡಾಯ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ಹೇಳಿದರು.
ಇದನ್ನೂ ಓದಿ:ನಿಫಾ ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣ ಕೋವಿಡ್ಗಿಂತಲೂ ಹೆಚ್ಚು; ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ ಐಸಿಎಂಆರ್
ಒಟ್ಟಿನಲ್ಲಿ ಕೇರಳದಲ್ಲಿ ನಿಫಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಇದರಿಂದಾಗಿ ಕರ್ನಾಟಕದಲ್ಲೂ ನಿಫಾ ವೈರಸ್ ಭೀತಿ ಎದುರಾಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವ ಮೂಲಕ ಪ್ರವಾಸಿಗರಲ್ಲಿನ ಆತಂಕವನ್ನು ದೂರ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ