ತಾಯಿ, ತಂಗಿ ಕೊಲೆ ಬೆದರಿಕೆ ಹಾಕಿದ್ರು, ಅವರಿಂದಲೇ ಹತ್ಯೆ ಶಂಕೆ: ಓಂ ಪ್ರಕಾಶ್ ಪುತ್ರನ ದೂರಿನಲ್ಲಿದೆ ಮಹತ್ವದ ಅಂಶ
ಬೆಂಗಳೂರಿನಲ್ಲಿ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣ ದೊಡ್ಡ ಸಂಚಲನ ಸೃಷ್ಟಿಸಿದೆ. ಅವರ ಪುತ್ರನ ದೂರಿನನ್ವಯ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಬಂಧಿಸಲಾಗಿದೆ. ಆತ್ಮರಕ್ಷಣೆಗಾಗಿ ಕೊಲೆ ಎಂದು ಪಲ್ಲವಿ ಹೇಳಿಕೆ ನೀಡಿದ್ದಾರೆ. ಆದರೆ, ಓಂ ಪ್ರಕಾಶ್ ಪುತ್ರ ನೀಡಿದ ದೂರಿನಿಂದ, ಸಂಚು ರೂಪಿಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹಾಗಾದರೆ, ಪುತ್ರ ನೀಡಿರುವ ದೂರಿನಲ್ಲೇನಿದೆ? ಇಲ್ಲಿದೆ ವಿವರ.

ಬೆಂಗಳೂರು, ಏಪ್ರಿಲ್ 21: ನಿವೃತ್ತ ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ (DG and IG Om Prakash) ಹತ್ಯೆ ಪ್ರಕರಣ ಪೊಲೀಸ್ ಇಲಾಖೆಯನ್ನೇ ದಂಗು ಬಡಿಸಿದೆ. ಭಾನುವಾರ ಸಂಜೆ ಬಯಲಿಗೆ ಬಂದ ಕೊಲೆ ಪ್ರಕರಣದ ಬೆನ್ನತ್ತಿದ ಪೊಲೀಸರು (Bengaluru Police) ಕೊಲೆಯ ಅಸಲಿ ರಹಸ್ಯ ಬೇಧಿಸುತ್ತಿದ್ದಾರೆ. ಹತ್ಯೆ ಹಿಂದಿರುವ ಅಸಲಿ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ತಾಯಿ ಪಲ್ಲವಿ (Pallavi), ಸಹೋದರಿ ಕೃತಿ ವಿರುದ್ಧ ಓಂ ಪ್ರಕಾಶ್ ಪುತ್ರ ಕಾರ್ತಿಕೇಶ್ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಪಲ್ಲವಿಯನ್ನು ಬಂಧಿಸಿದ್ದಾರೆ.
ತಂದೆಯೊಂದಿಗೆ ನಿತ್ಯ ಜಗಳ, ಕೊಲೆ ಬೆದರಿಕೆ: ಪುತ್ರನ ದೂರಿನಲ್ಲೇನಿದೆ ನೋಡಿ
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ಓಂ ಪ್ರಕಾಶ್ ಪುತ್ರ ಕಾರ್ತಿಕೇಶ್ ದೂರು ನೀಡಿದ್ದಾರೆ. ದೂರಿನಲ್ಲಿ ಇಂಚಿಂಚೂ ಮಾಹಿತಿ ನೀಡಿದ್ದಾರೆ. ‘‘ನನ್ನ ತಾಯಿ ಪಲ್ಲವಿ ನಮ್ಮ ತಂದೆ ಮಾಜಿ ಡಿಜಿಪಿ ಓಂ ಪ್ರಕಾಶ್ಗೆ ಕಳೆದ ಒಂದು ವಾರದಿಂದ ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ತಂದೆಯವರು ಅವರ ಸಹೋದರಿಯಾದ ಸರೀತಾ ಕುಮಾರಿಯವರ ಮನೆಯಲ್ಲಿ ವಾಸವಿದ್ದರು. ನಂತರ ನನ್ನ ತಂಗಿ ಕೃತಿ 2 ದಿನಗಳ ಹಿಂದೆ ಸರೀತಾ ಕುಮಾರಿಯವರ ಮನೆಗೆ ಹೋಗಿ ತಂದೆಯವರನ್ನು ಮನೆಗೆ ಬರುವಂತೆ ಪೀಡಿಸಿ ಕರೆದು ಕೊಂಡು ಬಂದಿದ್ದಳು. ಏಪ್ರಿಲ್ 20 ರ ಸಂಜೆ ಸುಮಾರು 5 ಗಂಟೆಗೆ ನಾನು ದೊಮ್ಮಲೂರಿನಲಿರುವ ಕರ್ನಾಟಕ ಗಾಲ್ಫ್, ಆಸೋಸಿಯಷನ್ನಲ್ಲಿರಬೇಕಾದರೆ, ನಮ್ಮ ಪಕ್ಕದ ಮನೆಯವರಾದ ಜಯಶ್ರೀ ಶ್ರೀಧರನ್ ಕರೆಮಾಡಿ ನಿಮ್ಮ ತಂದೆ ಓಂ ಪ್ರಕಾಶ್ ದೇಹ ಕೆಳಗಡೆ ಬಿದ್ದಿರುತ್ತದೆಂದು ತಿಳಿಸಿದರು. ತಕ್ಷಣ ನಾನು ಸುಮಾರು 5 ಗಂಟೆ 45ನಿಮಿಷಕ್ಕೆ ಮನೆಗೆ ಬಂದು ನೋಡಿದೆ. ಮನೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರು ಇದ್ದರು. ನಮ್ಮ ತಂದೆಯವರ ತಲೆಗೆ ಗಾಯವಾಗಿತ್ತು ಮತ್ತು ಮೈತುಂಬ ರಕ್ತವಾಗಿತ್ತು. ದೇಹದ ಪಕ್ಕದಲ್ಲಿ ಹೊಡೆದಿರುವ ಬಾಟಲ್ ಮತ್ತು ಚಾಕು ಇತ್ತು. ನಂತರ ನಮ್ಮ ತಂದೆಯವರ ದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಮ್ಮ ತಾಯಿ ಪಲ್ಲವಿ, ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ನಮ್ಮ ತಂದೆಯೊಂದಿಗೆ ಜಗಳ ಮಾಡುತ್ತಿದ್ದರು. ನಮ್ಮ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ನಮ್ಮ ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಶಂಕೆಯಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು’’ ಎಂದು ದೂರಿನಲ್ಲಿ ಕಾರ್ತಿಕೇಶ್ ಉಲ್ಲೇಖಿಸಿದ್ದಾರೆ.
ಇದರ ಬೆನ್ನಲ್ಲೇ ಪಲ್ಲವಿ ಮತ್ತು ಕೃತಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಭಾನುವಾರ ಸಂಜೆಯೇ ಠಾಣೆಗೆ ಕರೆ ಕರೆತಂದಿದ್ದರು. ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಇವತ್ತು ಬೆಳಗ್ಗೆ ಇಬ್ಬರನ್ನೂ ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ಕರೆತಂದು ಬಂಧಿಸಲಾಗಿದೆ.
‘ಏಯ್, ಡೋಂಟ್ ಟಚ್ ಮೀ’ ಪಲ್ಲವಿ, ಕೃತಿ ಮೊಂಡಾಟ
ಸೋಮವಾರ ಬೆಳಗ್ಗೆ A1 ಆರೋಪಿ ಪಲ್ಲವಿ, A2 ಆರೋಪಿ ಕೃತಿಯನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಈ ವೇಳೆ, ಪೊಲೀಸರಿಗೆ ಆವಾಜ್ ಹಾಕಿದ ಇಬ್ಬರು, ‘ಏಯ್ ನನ್ನ ಮುಟ್ಟಬೇಡಿ, ಯಾಕೆ ಟಚ್ ಮಾಡುತ್ತೀರಾ’ ಎಂದು ಗದರಿದ್ದಾರೆ. ಇಬ್ಬರನ್ನು ಠಾಣೆಯೊಳಗೆ ಕರೆದೊಯ್ಯಲು ಹತ್ತಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. 30 ನಿಮಿಷದ ಬಳಿಕ ಕೃತಿ ಕಾರಿನಿಂದ ಇಳಿದು, ಪೊಲೀಸ್ ಠಾಣೆಯ ಬೇಸ್‌ಮೆಂಟ್‌ಗೆ ಹೋಗಿದ್ದಾಳೆ.
ಆತ್ಮರಕ್ಷಣೆಗಾಗಿ ಕೊಲೆ ಮಾಡಿದ್ದಾಗಿ ಪಲ್ಲವಿ ಹೇಳಿಕೆ
ಪಲ್ಲವಿ ಮತ್ತು ಕೃತಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಆತ್ಮ ರಕ್ಷಣೆಗಾಗಿ ಕೊಲೆ ಮಾಡಿರುವುದಾಗಿ ಪತ್ನಿ ಪಲ್ಲವಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ. ಮಡಿವಾಳ ಎಸಿಪಿ ವಾಸುದೇವ್ ಮುಂದೆ ಹೇಳಿಕೆ ದಾಖಲಿಸಿದ್ದು, ಇಬ್ಬರಿಂದರೂ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಗಳ ಮದುವೆ ಬಗ್ಗೆ ಅಪಾರ ಕನಸು ಕಂಡಿದ್ದ ಓಂ ಪ್ರಕಾಶ್
ಆತ್ಮ ರಕ್ಷಣೆಗಾಗಿ ಕೊಲೆ ಮಾಡಿದ್ದಾಗಿ ಪಲ್ಲವಿ ಹೇಳಿಕೆ ದಾಖಲಿಸಿದ್ದಾರೆ. ಪುತ್ರಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ತಂಗಿ ಸರಿತಾ ಮನೆಯಲ್ಲಿದ್ದ ಓಂ ಪ್ರಕಾಶ್‌ರನ್ನು ಕೃತಿಯೇ ಕರೆತಂದಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಹಾಗಾದರೆ, ಕೃತಿ ಮತ್ತು ಪಲ್ಲವಿ ಮುಂಚಿತವಾಗಿಯೇ ಸಂಚು ಹೂಡಿ ಕೊಲೆ ಮಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ದುರಂತ ಎಂದರೆ, ಕೃತಿ ಬಗ್ಗೆ ಅಪಾರ ಕನಸು ಕಂಡಿದ್ದ ಓಂ ಪ್ರಕಾಶ್, ಮದುವೆ ಬಗ್ಗೆ ಆಪ್ತರ ಬಳಿ ಹೇಳಿಕೊಂಡಿದ್ದರಂತೆ.
ಇದನ್ನೂ ಓದಿ: ಓಂ ಪ್ರಕಾಶ್ ಕೊಲೆ ಪ್ರಕರಣ: ತನಿಖಾಧಿಕಾರಿಗಳ ಎದುರು ಹತ್ಯೆ ರಹಸ್ಯ ಬಿಚ್ಚಿಟ್ಟ ಮಾಜಿ ಡಿಜಿ ಪತ್ನಿ ಪಲ್ಲವಿ
ಏತನ್ಮಧ್ಯೆ, ಓಂಪ್ರಕಾಶ್ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಹೆಚ್ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಎಂಸಿಎಚ್ಎಸ್ ಕ್ಲಬ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯ ನಂತ್ರ ವಿಲ್ಸನ್ ಗಾರ್ಡನ್‌ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Mon, 21 April 25