AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದ್ಮಶ್ರೀ ವಿಜೇತರನ್ನೂ ಬಿಡಲಿಲ್ಲ ಸೈಬರ್ ಕಳ್ಳರು!: ಮಧ್ಯರಾತ್ರಿ ಮೆಸೇಜ್ ಬಂದ ಬೆನ್ನಲ್ಲೇ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಹಣ ಮಾಯಾ

ಪದ್ಮಶ್ರೀ ಪುರಸ್ಕೃತ ಪ್ಯಾರಾ ಅಥ್ಲೀಟ್ ಕೆ. ವೈ. ವೆಂಕಟೇಶ್ ಅವರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಅವರ ಬ್ಯಾಂಕ್ ಖಾತೆಯಿಂದ ₹90 ಸಾವಿರ ದೋಚಲಾಗಿದೆ. ಅಸಮಯದಲ್ಲಿ ಒಟಿಪಿ ಸಂದೇಶಗಳು ಬಂದಿದ್ದರೂ, ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಮರುದಿನ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ಕಟ್ ಆಗಿರುವುದು ಪತ್ತೆಯಾಯಿತು. ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದು ಸೈಬರ್ ವಂಚನೆ ಪ್ರಸಿದ್ಧ ವ್ಯಕ್ತಿಗಳನ್ನೂ ತಲುಪಿರುವುದಕ್ಕೆ ನಿದರ್ಶನ.

ಪದ್ಮಶ್ರೀ ವಿಜೇತರನ್ನೂ ಬಿಡಲಿಲ್ಲ ಸೈಬರ್ ಕಳ್ಳರು!: ಮಧ್ಯರಾತ್ರಿ ಮೆಸೇಜ್ ಬಂದ ಬೆನ್ನಲ್ಲೇ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಹಣ ಮಾಯಾ
ಕೆ. ವೈ. ವೆಂಕಟೇಶ್Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:May 26, 2026 | 11:45 AM

Share

ಬೆಂಗಳೂರು, ಮೇ.26: ಸೈಬರ್​​ ವಂಚಕರ ಕೈಚಳಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲು ಸಾಮಾನ್ಯ ಜನರೇ ಇವರ ಟಾರ್ಗೆಟ್​ ಆಗಿತ್ತು. ಆದರೆ ಇದೀಗ ಸೆಲೆಬ್ರಿಟಿಗಳನ್ನು ಬಿಡುತ್ತಿಲ್ಲ. ಈಗ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕೃತರನ್ನೂ ಬಿಡದೆ ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಖ್ಯಾತ ಪ್ಯಾರಾ ಅಥ್ಲೀಟ್ ಕೆ. ವೈ. ವೆಂಕಟೇಶ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಸೈಬರ್ ಖದೀಮರು, ಸುಮಾರು 90 ಸಾವಿರ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ.

ಹುಟ್ಟಿನಿಂದಲೇ ಅಕೊಂಡ್ರೋಪ್ಲಾಸಿಯಾ (Achondroplasia – ಕುಬ್ಜತೆ) ಸಮಸ್ಯೆಯಿಂದ ಬಳಲುತ್ತಿದ್ದರೂ, ಅದನ್ನೇ ಸವಾಲಾಗಿ ಸ್ವೀಕರಿಸಿದ ಕೆ. ವೈ. ವೆಂಕಟೇಶ್ ಅವರು ದೇಶ ಕಂಡ ಅಪರೂಪದ ಪ್ಯಾರಾ ಅಥ್ಲೀಟ್ ಆಗಿದ್ದಾರೆ. 50ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿರುವ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಅವರ ಮೇಲೆಯೂ ಈ ವಂಚಕರ ಜಾಲದ ದೃಷ್ಟಿ ಬಿದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 12 ಗಂಟೆಯ ಅವಧಿಯಲ್ಲಿ ಕೆ. ವೈ. ವೆಂಕಟೇಶ್ ಅವರ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಒಟಿಪಿ (OTP) ಸಂದೇಶಗಳು ಬರತೊಡಗಿವೆ. ಅಸಮಯದಲ್ಲಿ ಸತತವಾಗಿ ಒಟಿಪಿ ಬರುತ್ತಿರುವುದನ್ನು ಕಂಡು ಅನುಮಾನಗೊಂಡ ವೆಂಕಟೇಶ್ ಅವರು, ಮಾರನೇ ದಿನ ಬೆಳಗ್ಗೆ ತಕ್ಷಣವೇ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದಾರೆ.

ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯ ವಿವರಗಳನ್ನು (Account Statement) ಪರಿಶೀಲಿಸಿದಾಗ ವೆಂಕಟೇಶ್ ಅವರಿಗೆ ತೀವ್ರ ಆಘಾತ ಕಾದಿತ್ತು. ಅವರ ಗಮನಕ್ಕೆ ಬಾರದೆಯೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 90 ಸಾವಿರ ರೂಪಾಯಿ ಹಣ ಕಟ್ ಆಗಿರುವುದು ಪತ್ತೆಯಾಗಿದೆ. ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ಸಹ ಸೈಬರ್ ಕಳ್ಳರು ಕೆಲವೊಂದು ತಂತ್ರಗಳನ್ನು ಬಳಸಿಕೊಂಡು ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ!

ಈ ಸೈಬರ್ ದರೋಡೆಗೆ ಸಂಬಂಧಿಸಿದಂತೆ ಕೆ. ವೈ. ವೆಂಕಟೇಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಬ್ಯಾಂಕ್ ಖಾತೆ ಹಾಗೂ ಐಪಿ ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಮ್ ವಿಭಾಗದ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

ವರದಿ: ವಿಕಾಸ್​​ ಟಿವಿ9 ಕನ್ನಡ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Tue, 26 May 26

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More