ಪ್ರಜ್ವಲ್ ರೇವಣ್ಣ ಮೊಂಡಾಟ: ಹಾಸನ ಲೋಕಸಭೆ ರಿಸಲ್ಟ್ಗೂ ಮುನ್ನ ಎಸ್ಐಟಿ ಮೆಗಾ ಪ್ಲಾನ್
ಅತ್ಯಾಚಾರ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಿಲ್ಲ. ಎಲ್ಲವೂ ಷಡ್ಯಂತ್ರ, ನಾನೇನು ಮಾಡಿಲ್ಲ ಎಂದು ಪ್ರಜ್ವಲ್ ರೇವಣ್ಣ ಉತ್ತರ ನೀಡುತ್ತಿದ್ದಾರೆ.
ಬೆಂಗಳೂರು, ಜೂನ್ 02: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ವಿಶೇಷ ತನಿಖಾ ಅಧಿಕಾರಿಗಳು (SIT) ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಿಲ್ಲ. ಎಲ್ಲವೂ ಷಡ್ಯಂತ್ರ, ನಾನೇನು ಮಾಡಿಲ್ಲ ಎಂದು ಪ್ರಜ್ವಲ್ ರೇವಣ್ಣ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಸ್ಥಳ ಮಹಜರು ಪ್ರಕ್ರಿಯೆ ಎಸ್ಐಟಿ ಪ್ಲ್ಯಾನ್ ಮಾಡಿದೆ. ಇಂದು ಅಥವಾ ನಾಳೆ (ಜೂ.03) ರಂದು ಸ್ಥಳ ಮಹಜರು ನಡೆಯುವ ಸಾಧ್ಯತೆ ಇದೆ. ಎಸ್ಐಟಿ ಅಧಿಕಾರಿಗಳು ಎರಡು ದಿನಗಳ ಒಳಗಾಗಿಯೇ ಸ್ಥಳ ಮಹಜರು ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಲೋಕಸಭೆ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಂಡಿದ್ದು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲ್ಲುವ ಸಾಧ್ಯತೆ ಇದೆ. ಒಂದು ವೇಳೆ ಹಾಸನದಲ್ಲಿ ಪ್ರಜ್ವಲ್ ಗೆದ್ದರೆ ಹಾಸನದ ಚಿತ್ರಣ ಬದಲಾಗುವ ಸಾಧ್ಯತೆ ಇದೆ. ಮತ್ತು ಫಲಿತಾಂಶದ ದಿನ ಮತ್ತು ಬಳಿಕ ಹಾಸನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜ್ವಲ್ ರೇವಣ್ಣ ಬೆಂಬಲಿಗರು, ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಇದರಿಂದ ಸ್ಥಳ ಮಹಜರಿಗೆ ಅಡ್ಡಿಯಾಗಬಹುದು.
ಸ್ಥಳ ಮಹಜರು ಬಳಿಕ ಮತ್ತೆ ಸಂಸದ ಪ್ರಜ್ವಲ್ ವಿಚಾರಣೆ ನಡೆಯುತ್ತದೆ. ಸ್ಥಳ ಮಹಜರು ಮಾಡಿದರೆ ಮುಂದಿನ ಹಂತದ ಪ್ರಕ್ರಿಯೆ ಸರಳವಾಗಿ ನಡೆಯಲಿದೆ. ಈ ಕಾರಣಕ್ಕಾಗಿ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರಿಗೆ ಇಂದು ಅಥವಾ ನಾಳೆ ಪ್ರಜ್ವಲ್ ರೇವಣ್ಣ ಅವರನನ್ನು ಹೊಳೆನರಸೀಪುರಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನ SIT ಕಚೇರಿಗೆ ಕರೆತಂದ ಜೀಪ್ನಲ್ಲಿದ್ದವರೆಲ್ಲ ಮಹಿಳಾ ಸಿಬ್ಬಂದಿ
ಪ್ರಜ್ವಲ್ ಕಡೆ ಯಾರು ಹೋಗುವಂತಿಲ್ಲ
ಸಿಬ್ಬಂದಿಗಳು ಕೂಡ ಪ್ರಜ್ವಲ್ ಕಡೆ ಸುಳಿಯುವಂತಿಲ್ಲ, ಮುಖ ಮಾಡುವಂತಿಲ್ಲ. ಪ್ರಜ್ವಲ್ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರ ಹೋಗಿ ಮಾತನಾಡಿಸಬಹುದು. ಉಳಿದಂತೆ ಯಾರು ಕೂಡ ಆ ಕಡೆ ಸುಳಿಯುವಂತಿಲ್ಲ ಎಂದು ಎಸ್ಐಟಿ ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ನಿಗಾ ಇಟ್ಟಿದ್ದಾರೆ.
ಮಹಿಳಾ ಅಧಿಕಾರಿಗಳಿಂದ ವಿಚಾರಣೆ
ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮಹಿಳಾ ಅಧಿಕಾರಿಗಳೇ ವಿಚಾರಣೆ ನಡೆಸುತ್ತಿದ್ದಾರೆ. ಎಸ್ಪಿ ಸುಮನ್ ಪನ್ನೇಕರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಇನ್ನು ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಹಾಗೂ ಸ್ಟೇಟ್ಮೆಂಟ್ ರೆಕಾರ್ಡ್ ಮಾಡುವುದು, ಸಾಕ್ಷಿ ಪರಿಶೀಲನೆ ಎಲ್ಲವೂ ಸಹ ಮಹಿಳಾ ಅಧಿಕಾರಿಗಳೇ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ