
ಬೆಂಗಳೂರು, ಅಕ್ಟೋಬರ್ 03: ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸುತ್ತ ಹೊಸ ವಿವಾದಗಳು ಸುತ್ತುವರಿದಿವೆ. ಜೈಲಿನಲ್ಲಿ ಆತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಿದ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ, ಇನ್ನೊಂದೆಡೆ ಸೌಹಾರ್ದತೆ ಕಾಯ್ದುಕೊಳ್ಳುವ ಬಾಂಡ್ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಮತ್ತೊಂದು ಕೇಸ್ ದಾಖಲಿಸಲು ದಕ್ಷಿಣ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಹಾಗೂ ಆತನ ಬೆಂಬಲಿಗರ ವಿರುದ್ಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
“ಪುನೀತ್ ಕೆರೆಹಳ್ಳಿ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ, ನ್ಯಾಯಕ್ಕಾಗಿ ಆತ ಜೈಲಿನಲ್ಲಿ ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವೈರಲ್ ಆಗಿದ್ದವು. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಜೈಲಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೋರಿದ್ದರು. ಪರಿಶೀಲನೆ ನಡೆಸಿದ ಜೈಲಾಧಿಕಾರಿಗಳು, ಪುನೀತ್ ಕೆರೆಹಳ್ಳಿ ಯಾವುದೇ ಉಪವಾಸ ಸತ್ಯಾಗ್ರಹ ನಡೆಸದೆ ನಿಯಮಿತವಾಗಿ ಊಟ ಸೇವಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ಸಹಿತ ದಕ್ಷಿಣ ವಿಭಾಗದ ಡಿಸಿಪಿಗೆ ಮಾಹಿತಿ ನೀಡಿದ್ದಾರೆ.
ಸುಳ್ಳು ಸುದ್ದಿ ಹಾಗೂ ದಾರಿ ತಪ್ಪಿಸುವ ಪೋಸ್ಟ್ ಹಬ್ಬಿಸಿದ ಹಿನ್ನೆಲೆಯಲ್ಲಿ ಬಸವನಗುಡಿ ಠಾಣೆ ಪೊಲೀಸರು ‘ಸಂವಾದ’ ಎಂಬ ಸೋಶಿಯಲ್ ಮೀಡಿಯಾ ಪುಟ ಸೇರಿದಂತೆ 14 ಇನ್‌ಸ್ಟಾಗ್ರಾಮ್ ಹಾಗೂ 9 ಫೇಸ್‌ಬುಕ್ ಅಕೌಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಖಾತೆದಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡುತ್ತಿದ್ದಾರೆ.
ಈ ನಡುವೆ, ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಕಳೆದ ವರ್ಷ ದಕ್ಷಿಣ ವಿಭಾಗದ ಪೊಲೀಸರ ಮುಂದೆ “ಯಾವುದೇ ಅಪರಾಧ ಅಥವಾ ಶಾಂತಿಭಂಗ ಪ್ರಕರಣಗಳಲ್ಲಿ ಭಾಗಿಯಾಗುವುದಿಲ್ಲ” ಎಂದು 2027ರ ಅವಧಿಯವರೆಗೆ 10 ಲಕ್ಷ ರೂ. ಮೊತ್ತದ ಬಾಂಡ್ ಬರೆದುಕೊಡಲಾಗಿತ್ತು. ಆದಾಗ್ಯೂ, ಬಾಂಡ್ ಅವಧಿ ಚಾಲ್ತಿಯಲ್ಲಿರುವಾಗಲೇ ಬಸವನಗುಡಿ ವ್ಯಾಪ್ತಿಯಲ್ಲಿ ಗಲಾಟೆ ನಡೆಸಿ ಬಾಂಡ್ ಷರತ್ತುಗಳನ್ನು ಉಲ್ಲಂಘಿಸಿರುವ ಕಾರಣ, ಆತನ ವಿರುದ್ಧ ಬಾಂಡ್ ಉಲ್ಲಂಘನೆ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ