ಗ್ಯಾರಂಟಿ ಚಕ್ಕರ್‌ನಲ್ಲಿ ಆರೋಗ್ಯ ಇಲಾಖೆ ಐಸಿಯುಗೆ! ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗರಂ

ರಾಜ್ಯ ಆರೋಗ್ಯ ಇಲಾಖೆಯ ಅವ್ಯವಸ್ಥೆ ಹಾಗೂ 'ನಮ್ಮ ಕ್ಲಿನಿಕ್' ಸಿಬ್ಬಂದಿಗೆ ಕಳೆದ 3 ತಿಂಗಳಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಇಲಾಖೆಯಲ್ಲಿನ 35,196 ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡದಿದ್ದರೆ ಮತ್ತು ಬಾಕಿ ವೇತನ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಎಚ್ಚರಿಸಿದೆ.

ಗ್ಯಾರಂಟಿ ಚಕ್ಕರ್‌ನಲ್ಲಿ ಆರೋಗ್ಯ ಇಲಾಖೆ ಐಸಿಯುಗೆ! ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗರಂ
ಆರ್. ಅಶೋಕ
Edited By:

Updated on: Jun 27, 2026 | 10:12 AM

ಮುಖ್ಯಾಂಶಗಳು

  • ಆರೋಗ್ಯ ಇಲಾಖೆಯ ಅವ್ಯವಸ್ಥೆ ಖಂಡಿಸಿ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • 'ನಮ್ಮ ಕ್ಲಿನಿಕ್' ಸಿಬ್ಬಂದಿಗೆ ಮೂರು ತಿಂಗಳಿಂದ ವೇತನ ನೀಡದೆ ವಿಳಂಬ ಮಾಡಲಾಗಿದೆ.
  • ಇಲಾಖೆಯಲ್ಲಿ ಖಾಲಿ ಇರುವ 35,196 ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಆಗ್ರಹ.

ಬೆಂಗಳೂರು, ಜೂನ್ 27: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ ತೀವ್ರಗೊಳಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka), ಆರೋಗ್ಯ ಇಲಾಖೆಯ ಅವ್ಯವಸ್ಥೆ ಹಾಗೂ ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ವೇತನ ವಿಳಂಬವನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಆರೋಗ್ಯ ಇಲಾಖೆಯೇ ಇಂದು ಐಸಿಯು ತಲುಪಿದೆ ಎಂದು ಟೀಕಿಸಿದ್ದಾರೆ.

ಆರೋಗ್ಯ ಇಲಾಖೆ ಸಂಪೂರ್ಣ ಐಸಿಯುನಲ್ಲಿದೆ: ಆರ್. ಅಶೋಕ್

ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಸರ್ಕಾರ ಬದಲಾದರೂ ಸಹ ಆರೋಗ್ಯ ಇಲಾಖೆಯ ಹಣೆಬರಹ ಮಾತ್ರ ಬದಲಾಗಿಲ್ಲ ಎಂದು ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಮರ್ಥತೆ ಮತ್ತು ಜನವಿರೋಧಿ ನೀತಿಗಳಿಂದಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರ ಸಂಪೂರ್ಣ ಹದಗೆಟ್ಟಿದೆ. ಜೀವ ಉಳಿಸಬೇಕಾದ ಇಲಾಖೆಯಲ್ಲೇ ಬರೋಬ್ಬರಿ 35,196 ಹುದ್ದೆಗಳು ಖಾಲಿ ಇವೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಸರ್ಕಾರಿ ಆಸ್ಪತ್ರೆಗಳು ಕೇವಲ ಹೆಸರಿಗಷ್ಟೇ ಉಳಿದಿದ್ದು, ಸಮಸ್ಯೆಗಳ ಆಗರಗಳಾಗಿವೆ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ನೋಡಿಕೊಳ್ಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಪ್ಯಾರಾಸಿಟಮಾಲ್ ಮಾತ್ರೆಗಳೂ ಸಿಗದೆ ಬಡ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ ಎಂದು ಅವರು ರಾಜ್ಯದ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

‘ನಮ್ಮ ಕ್ಲಿನಿಕ್’ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವಿಲ್ಲ!

ಬಡವರು ಹಾಗೂ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಆರಂಭವಾಗಿದ್ದ ‘ನಮ್ಮ ಕ್ಲಿನಿಕ್’ ಯೋಜನೆಗೆ ಕಾಂಗ್ರೆಸ್ ಸರ್ಕಾರ ಗರ ಬಡಿದಿದೆ ಎಂದು ಅಶೋಕ್ ಟೀಕಿಸಿದ್ದಾರೆ. ಇಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನವನ್ನೇ ನೀಡಿಲ್ಲ. ದುಡಿಯುವ ಕೈಗಳಿಗೆ ಸಂಬಳ ಕೊಡಲೂ ಸಾಧ್ಯವಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಾದರೂ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಆರೋಗ್ಯ ಇಲಾಖೆಯನ್ನೇ ಐಸಿಯು ಅಲ್ಲಿ ಇರಿಸುವ ಪರಿಸ್ಥಿತಿ ತಂದಿರುವುದೇ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ ಕ್ರಾಸ್ ವೋಟಿಂಗ್ ಮಾಹಿತಿ ನೀಡಿದ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಸಾಲು ಸಾಲು ಪ್ರಶ್ನೆಗಳು!

ಬಿಜೆಪಿ ಉಗ್ರ ಹೋರಾಟದ ಎಚ್ಚರಿಕೆ

ಮುಖ್ಯಮಂತ್ರಿಗಳೇ, ತಕ್ಷಣವೇ ಇಲಾಖೆಯಲ್ಲಿ ಖಾಲಿ ಇರುವ 35,196 ಹುದ್ದೆಗಳನ್ನು ಭರ್ತಿ ಮಾಡಿ ಹಾಗೂ ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಿ. ಇಲ್ಲದಿದ್ದರೆ ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 am, Sat, 27 June 26

ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
Loading...
Unable to load recommendations.
Follow Us