
ಬೆಂಗಳೂರು/ಯಾದಗಿರಿ, ಸೆಪ್ಟೆಂಬರ್ 21: ಮುಂಜಾನೆಯಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಬೆಂಗಳೂರಿಗರಿಗೆ ಸಂಜೆಯಾಗುತ್ತಲೇ ವರುಣ ತಂಪೆರೆದಿದ್ದಾನೆ. ಕಾರ್ಪೊರೇಷನ್, ವಿಧಾನಸೌಧ, ಲಾಲ್‌ಬಾಗ್, ಜಯನಗರ, ಶಾಂತಿನಗರ, ವಿಜಯನಗರ, ಶಿವಾನಂದ ಸರ್ಕಲ್, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಉತ್ತಮ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದ ಜನ ಸಾಮಾನ್ಯರು ಪರದಾಟ ನಡೆಸಿದ್ದು, ಮಳೆಯಲ್ಲಿ ನೆನೆಯುತ್ತಲೇ ದ್ವಿಚಕ್ರ ವಾಹನ ಸವಾರರು ತೆರಳುತ್ತಿರುವ ದೃಶ್ಯಗಳು ಕಂಡುಬಂದಿವೆ.
ಯಾದಗಿರಿ ಸೇರಿದಂತೆ ಜಿಲ್ಲೆಯ ವಿವಿಧೆಡ ಒಂದು ಗಂಟೆಗೂ ಅಧಿಕ ಕಾಲ ಭರ್ಜರಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ವರುಣನ ಆಗಮನದಿಂದ ಕೊಂಚ ರಿಲೀಫ್ ಸಿಕ್ಕಿದೆ. ಭೀಕರ ಬರದಿಂದ ಕಂಗೆಟ್ಟಿದ್ದ ಅನ್ನದಾತರು ಕಂಗೆಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ಮಳೆ ಇಲ್ಲದೆ ಚಿಂತೆಗೀಡಾಗಿದ್ದರು. ಆದರೆ ಇದೀಗ ವರುಣ ಕೊಂಚ ದಯೆ ತೋರಿರುವ ಕಾರಣ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ತೀವ್ರ ಬರ ಪರಿಸ್ಥಿತಿಯ ನಡುವೆಯೂ ಅನಿರೀಕ್ಷಿತವಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಾದ್ಯಂತ ಕಳೆದ ರಾತ್ರಿ ರಣಭೀಕರ ಮಳೆ ಸುರಿದಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ತಾಲೂಕಿನ ಬಂಡೆಪಾಳ್ಯ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು ಒಂದು ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರು ಹಸುಗಳು ಗಂಭೀರವಾಗಿ ಗಾಯಗೊಂಡಿವೆ. ರಾಮಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ಬೃಹದಾಕಾರದ ಮರವೊಂದು ಉರುಳಿಬಿದ್ದ ಪರಿಣಾಮ ರಾಮಾಪುರದಿಂದ ತಮಿಳುನಾಡಿಗೆ ಸಂಪರ್ಕಿಸುವ ರಸ್ತೆಯಲ್ಲಿ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಲೊಕ್ಕನಹಳ್ಳಿ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಎಲೆಕ್ಟ್ರಾನಿಕ್ ವಸ್ತುಗಳು, ದಿನಸಿ ಪದಾರ್ಥಗಳು ಹಾನಿಗೊಳಗಾಗಿವೆ. ಅಲ್ಲದೆ, ಸಾವಿರಕ್ಕೂ ಅಧಿಕ ಬಾಳೆ ಬೆಳೆ ನಾಶವಾಗಿದ್ದು, ಕಟಾವಿಗೆ ಬಂದಿದ್ದ ಬೆಳೆ ನೆಲಕಚ್ಚಿದ್ದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.