RSS 100: ಆರ್‌ಎಸ್‌ಎಸ್ ಶತಮಾನೋತ್ಸವ ನಿಮಿತ್ತ ಹಲವು ಕಾರ್ಯಕ್ರಮ
ಶತಾಮಾನೋತ್ಸವ ವರ್ಷದ ನಿಮಿತ್ತ ಆರ್‌ಎಸ್‌ಎಸ್ 2025ರ ವಿಜಯದಶಮಿ 2026ರ ವಿಜಯದಶಮಿ ತನಕ ಹಲವು ಕಾರ್ಯ ಯೋಜನೆಗಳನ್ನು ರೂಪಿಸಿದೆ. ಮನೆ ಮನೆ ಸಂಪರ್ಕ, ಹಿಂದೂ ಸಮ್ಮೇಳನ, ಸಾಮಾಜಿಕ ಸದ್ಭಾವ ಬೈಠಕ್‌ಗಳು ಸೇರಿವೆ. ಇದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಒಂದು ಪ್ರಯತ್ನವಾಗಿದೆ ಎಂದು ಆರ್ ಎಸ್ ಎಸ್ ಹೇಳಿದೆ.

ಬೆಂಗಳೂರು, ಮಾರ್ಚ್ 23: ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಸಾಮಾಜಿಕ ಸಂಘಟನೆಯಾಗಿದೆ. 2025ರ ವಿಜಯದಶಮಿಯಂದು ಆರ್‌ಎಸ್‌ಎಸ್ ತನ್ನ 100 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಈ ಸಂದರ್ಭದಲ್ಲಿ, ಈ ವರ್ಷದ ವಾರ್ಷಿಕ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ (ABPS) ಶತಮಾನೋತ್ಸವ ವರ್ಷದ ಕಾರ್ಯ ಯೋಜನೆಗಳನ್ನು ಚರ್ಚಿಸಿದೆ. ಶತಾಮಾನೋತ್ಸವ ವರ್ಷದ ನಿಮಿತ್ತ ಆರ್‌ಎಸ್‌ಎಸ್ 2025ರ ವಿಜಯದಶಮಿಯಿಂದ 2026ರ ವಿಜಯದಶಮಿವರೆಗೂ ಹಲವು ಕಾರ್ಯ ಯೋಜನೆಗಳನ್ನು ರೂಪಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಬೆಂಗಳೂರಿನ ಚನ್ನೇನಹಳ್ಳಿಯ ನಡೆದ ಎಬಿಪಿಎಸ್ ಬೈಠೆಕ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶತಾಬ್ಧಿ ವರ್ಷದ ಶುಭಾರಂಭ 2025ರ ವಿಜಯದಶಮಿಯ ಪರ್ವಕಾಲದಲ್ಲಿ ಮಂಡಲ ಅಥವಾ ಖಂಡ/ ನಗರ ಸ್ತರದಲ್ಲಿ ಗಣವೇಷದಲ್ಲಿ ಸ್ವಯಂಸೇವಕರು ಉತ್ಸವ ನಡೆಸುವುದು.
- ವ್ಯಾಪಕ ಮನೆ ಸಂಪರ್ಕ (ಪ್ರತಿ ಗ್ರಾಮ, ವಸತಿ, ಪ್ರತಿ ಮನೆ -2025ರ ನವೆಂಬರ್ ಮತ್ತು ಡಿಸೆಂಬರ್ ಹಾಗೂ 2026ರ ಜನವರಿ ತಿಂಗಳುಗಳಲ್ಲಿ 3 ವಾರಗಳ ವಿಸ್ತ್ರತ ಯೋಜನೆಯಾಗಿದೆ.)
- ಹಿಂದೂ ಸಮ್ಮೇಳನ – ಮಂಡಲ/ವಸತಿ ಸ್ತರದಲ್ಲಿ ಮಾಡುವುದು.
- ಸಾಮಾಜಿಕ ಸದ್ಭಾವ ಬೈಠಕ್ ಖಂಡ/ನಗರ ಸ್ತರದಲ್ಲಿ ಮಾಡುವುದು.
- ಪ್ರಮುಖ ನಾಗರಿಕರ ಗೋಷ್ಠಿ ಜಿಲ್ಲಾ ಕೇಂದ್ರಗಳಲ್ಲಿ ನಡೆಸುವುದು.
- ಯುವಕರಿಗಾಗಿ ಕಾರ್ಯಕ್ರಮ ಆಯಾ ಪ್ರಾಂತದ ಯೋಜನೆಯೊಂದಿಗೆ ಮಾಡಲಾಗುತ್ತದೆ ಎಂದು ಹೇಳಿದರು.
ಮಹಾರಾಣಿ ಅಬ್ಬಕ್ಕ 500ನೇ ಜಯಂತಿ: ಅವಿನಾಶಿ ಪರಂಪರೆಗೆ ನಮನ
ಉಳ್ಳಾಲದ ಮಹಾರಾಣಿ ಅಬ್ಬಕ್ಕ ಅವರು ಭಾರತದ ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು. ಅವರು ಆಡಳಿತದಲ್ಲಿ ನಿಪುಣರಾಗಿದ್ದರು. ಅಜೇಯ ತಂತ್ರಗಾರರಾಗಿದ್ದರು ಮತ್ತು ಅತ್ಯಂತ ಶೂರ ಆಡಳಿತಗಾರರಾಗಿದ್ದರು. ಅಬ್ಬಕ್ಕ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಂಸ್ಥಾನವನ್ನು (ಪ್ರಸ್ತುತ ಕರಾವಳಿ ಕರ್ನಾಟಕ) ಯಶಸ್ವಿಯಾಗಿ ಆಳಿದವರು. ವೀರ ಮಹಾರಾಣಿ ಅಬ್ಬಕ್ಕರ 500ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಅವರ ಅವಿನಾಶಿ ಪರಂಪರೆಗೆ ಗೌರವ ಸಲ್ಲಿಸುತ್ತಾ ಪೂರ್ಣ ಹೃದಯದಿಂದ ನಮನ ಸಲ್ಲಿಸುತ್ತದೆ.
ರಾಣಿ ಅಬ್ಬಕ್ಕ ಆಳ್ವಿಕೆಯ ಸಮಯದಲ್ಲಿ, ವಿಶ್ವದ ಅತ್ಯಂತ ಅಜೇಯ ಸೈನ್ಯಶಕ್ತಿ ಎಂದು ಪರಿಗಣಿಸಲಾಗಿದ್ದ ಪೋರ್ಚುಗೀಸ್ ಆಕ್ರಮಣಕಾರರನ್ನು ಪದೇ ಪದೇ ಸೋಲಿಸಿದರು. ಈ ಮೂಲಕ ಅವರು ತಮ್ಮ ರಾಜ್ಯದ ಸ್ವಾತಂತ್ರ್ಯವನ್ನು ಕಾಪಾಡಿದರು. ಉತ್ತರ ಕೇರಳದ ಸಾಮೂತಿರಿ (ಜಮೋರಿನ್) ರಾಜನೊಂದಿಗಿನ ಅವರ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಚತುರ ಮೈತ್ರಿಗಳು ಈ ಸಾಧನೆಯನ್ನು ಸಾಧ್ಯವಾಗಿಸಿದವು. ಅಬ್ಬಕ್ಕ ಅವರ ತಂತ್ರ, ಶೌರ್ಯ ಮತ್ತು ನಿರ್ಭೀತ ನಾಯಕತ್ವವು ಅವರನ್ನು ಇತಿಹಾಸದ ಪುಟಗಳಲ್ಲಿ “ಅಭಯರಾಣಿ” (ನಿರ್ಭೀತ ರಾಣಿ) ಎಂಬ ಗೌರವಾನ್ವಿತ ಬಿರುದಿಗೆ ಪಾತ್ರರಾಗಿಸಿತು.
ಮಹಾರಾಣಿ ಅಬ್ಬಕ್ಕ ಅವರು ಭಾರತದ ಎಲ್ಲರನ್ನೂ ಒಳಗೊಳ್ಳುವ ಸಂಪ್ರದಾಯವನ್ನು ಮಾದರಿಯಾಗಿ ತೋರಿಸಿದವರು. ಅವರು ಹಲವಾರು ಶಿವ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿದರು. ಅವರ ಆಳ್ವಿಕೆಯಲ್ಲಿ, ಎಲ್ಲಾ ಸಂಪ್ರದಾಯಗಳ ಹಾಗೂ ಸಮುದಾಯಗಳನ್ನೂ ಸಮಾನ ಗೌರವದಿಂದ ಕಾಣಲಾಗಿತ್ತು ಮತ್ತು ಸಮಾಜದ ವಿವಿಧ ವರ್ಗಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಪೋಷಿಸಿದರು. ಈ ಗೌರವ ಮತ್ತು ಏಕತೆಯ ಪರಂಪರೆ ಕರ್ನಾಟಕದಲ್ಲಿ ಇಂದಿಗೂ ಮುಂದುವರಿದಿದೆ. ಅವರ ಪ್ರೇರಣಾದಾಯಕ ಕಥೆಗಳು ಯಕ್ಷಗಾನ, ಜಾನಪದ ಗೀತೆಗಳು ಮತ್ತು ಸಾಂಪ್ರದಾಯಿಕ ನೃತ್ಯಗಳ ಮೂಲಕ ಜೀವಂತವಾಗಿವೆ.
ಅವರ ಅಪ್ರತಿಮ ಶೌರ್ಯ, ರಾಷ್ಟ್ರ ಮತ್ತು ಧರ್ಮದ ಕುರಿತಾದ ಸಮರ್ಪಣೆ, ಪರಿಣಾಮಕಾರಿ ಆಡಳಿತವನ್ನು ಗೌರವಿಸಿ ಭಾರತ ಸರ್ಕಾರವು ಅವರ ಸ್ಮರಣಾರ್ಥ 2003ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರ ಶೌರ್ಯದ ಕಥೆಗಳನ್ನು ರಾಷ್ಟ್ರದೊಂದಿಗೆ ಹಂಚಿಕೊಂಡಿತು. ಹಾಗೆಯೇ 2009ರಲ್ಲಿ ರಾಷ್ಟ್ರದ ಒಂದು ಗಸ್ತು ಹಡಗಿಗೆ ರಾಣಿ ಅಬ್ಬಕ್ಕ ಅವರ ಹೆಸರಿಡಲಾಗಿದ್ದು, ಇದು ಅವರ ನೌಕಾಪಡೆಯ ಪರಂಪರೆಯಿಂದ ಪ್ರೇರಣೆ ಪಡೆದು ಸ್ಫೂರ್ತಿಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಶಾಂತಿಯುತವಾಗಿ ದೇಶ ಕಟ್ಟುವ ಕೆಲಸ ಮಾಡ್ತಿದೆ: ಸಿದ್ದರಾಮಯ್ಯಗೆ ಸುನೀಲ್ ಅಂಬೇಕರ್ ತಿರುಗೇಟು
ಮಹಾರಾಣಿ ಅಬ್ಬಕ್ಕ ಅವರ ಜೀವನವು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿದೆ. ಅವರ 500ನೇ ಜಯಂತಿಯ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಅನುಕರಣೀಯ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುತ್ತದೆ ಮತ್ತು ಅವರ ಅದ್ಭುತ ಜೀವನದಿಂದ ಸ್ಫೂರ್ತಿ ಪಡೆದು ರಾಷ್ಟ್ರ ನಿರ್ಮಾಣದ ಧೈಯಕ್ಕೆ ಸಕ್ರಿಯವಾಗಿ ಕೊಡುಗೆ ನೀಡಬೇಕೆಂದು ಇಡೀ ಸಮಾಜಕ್ಕೆ ಕರೆ ನೀಡುತ್ತದೆ.
Published On - 12:37 pm, Sun, 23 March 25