ಆರ್ಎಸ್ಎಸ್ ಶಾಂತಿಯುತವಾಗಿ ದೇಶ ಕಟ್ಟುವ ಕೆಲಸ ಮಾಡ್ತಿದೆ: ಸಿದ್ದರಾಮಯ್ಯಗೆ ಸುನೀಲ್ ಅಂಬೇಕರ್ ತಿರುಗೇಟು
ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಅವರು ಆರ್ಎಸ್ಎಸ್ ಶಾಂತಿಯುತವಾಗಿ ದೇಶ ನಿರ್ಮಾಣದಲ್ಲಿ ತೊಡಗಿದೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿಂಸಾಚಾರದ ಆರೋಪಗಳಿಗೆ ಪ್ರತಿಕ್ರಿಯಿಸಿ ಅವರು ಆರ್ಎಸ್ಎಸ್ ಕೆಲಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್ 21-23 ರ ವರೆಗೆ ಚನ್ನೇನಹಳ್ಳಿಯಲ್ಲಿ ನಡೆಯಲಿರುವ ಆರ್ಎಸ್ಎಸ್ ಸಭೆಯಲ್ಲಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಮತ್ತು ಸಂಘಟನೆಯ ಭವಿಷ್ಯದ ಯೋಜನೆಗಳನ್ನು ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು, ಮಾರ್ಚ್ 19: ಆರ್ಎಸ್ಎಸ್ (RSS) ಶಾಂತಿಯುತವಾಗಿ ದೇಶ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ (Sunil Ambekar) ಹೇಳಿದರು. ಬೆಂಗಳೂರಿನಲ್ಲಿ ಬುಧವಾರ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರಿಗೆ, ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆ ಕುರಿತು ಪ್ರಶ್ನೆ ಕೇಳಲಾಯಿತು. ಆರ್ಎಸ್ಎಸ್ ಹಿಂಸೆಗೆ ಕಾರಣ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಸಿದ್ದರಾಮಯ್ಯ ಅವರು ಹೇಳಿರುವ ವಿಡಿಯೋ ನೋಡಿಲ್ಲ. ಆದರೆ, ನಮ್ಮ ಸ್ವಯಂಸೇವಕ ಸಂಘ ಶಾಂತಿಯುತವಾಗಿ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಇದು ಮೊದಲ ದಿನದಿಂದಲೂ ಹೀಗೆಯೇ ನಡೆಯುತ್ತಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ಮಾರ್ಚ್ 30 ರಂದು ಪ್ರಧಾನಿ ನರೇಂದ್ರ ಮೋದಿ ಆರ್ಎಸ್ಎಸ್ ಕೇಂದ್ರ ಕಚೇರಿಗೆ ಹೋಗುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಕೂಡ ಹೋಗಿದ್ದರು. ಅದಕ್ಕೇನು ಹೆಚ್ಚು ಮಹತ್ವ ಕೊಡಬೇಕಿಲ್ಲ ಎಂದರು.
ಔರಂಗಜೇಬ್ ಇಂದು ಪ್ರಸ್ತುತವಲ್ಲ: ಅಂಬೇಕರ್
ಔರಂಗಜೇಬ್ ಈ ಕಾಲಘಟಕ್ಕೆ ಪ್ರಸ್ತುತವಾ ಎಂಬ ಪ್ರಶ್ನೆಗೆ ಉತ್ತರಿಸಿ, ಆತ ಇಂದಿಗೆ ಪ್ರಸ್ತುತವಲ್ಲ ಎಂದರು. ಯಾವುದೇ ರೀತಿಯ ಹಿಂಸೆಯನ್ನು ಪ್ರೋತ್ಸಾಹಿಸಲಾಗುವುದಿಲ್ಲ ಎಂದು ಅಂಬೇಕರ್ ಹೇಳಿದರು.
ಮಾರ್ಚ್ 21 – 23 ರವರೆಗೆ ಅಖಿಲ ಭಾರತೀಯ ಪ್ರತಿನಿಧಿ ಸಭೆ
ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾರ್ಚ್ 21 ರಿಂದ 23 ರ ವರೆಗೆ ಚನ್ನೇನಹಳ್ಳಿಯಲ್ಲಿ ನಡೆಯಲಿದೆ. ಆರ್ಎಸ್ಎಸ್ನ ಅತ್ಯುನ್ನತ ನೀತಿ ನಿರ್ಧಾರಗಳನ್ನು ನಿರೂಪಿಸುವ ಕುರಿತು ನಡೆಯಲಿರುವ ಸಭೆ ಇದಾಗಿದೆ. ಸಭೆಯಲ್ಲಿ ಸಂಘಟನೆಯ ಚಟುವಟಿಕೆಗಳ ಕುರಿತು ವಿಮರ್ಶಾತ್ಮಕ ಚರ್ಚೆ, ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಸುಧೀರ್ಘ ಚರ್ಚೆಯಾಗಲಿದೆ. ಸಭೆಯಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಇತರ ಹಿರಿಯ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಭಾಗವಹಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಭಾಗವಹಿಸಲಿದ್ದಾರೆ. ಸಭೆಗೆ ಪೂರಕವಾಗಿ ಈಗಾಗಲೇ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿಯ ಮಂಡಲ್ ಬೈಠಕ್ಗಳು ಶುರುವಾಗಿವೆ. ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಾರ್ಚ್ 23 ರ ವರೆಗೆ ನಡೆಯುವ ಎಲ್ಲ ಸಭೆಗಳಲ್ಲೂ ಹಾಜರಿರಲಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್, ಬಿಜೆಪಿಯವರು ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಆರಾಧಕರು: ಸಿದ್ದರಾಮಯ್ಯ ಕಿಡಿ
ಮೂರು ದಿನ ಅಖಿಲ ಭಾರತೀಯ ಪ್ರತಿನಿಧಿ ಸಭೆ ನಡೆಯಲಿದೆ. ಸಂಘದ ಪ್ರತಿನಿಧಿಗಳು, ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಬೈಠಕ್ ಪ್ರತಿ ವರ್ಷವೂ ನಡೆಯಲಿದೆ. ಸಂಘಟನೆಯ ಪ್ರಮುಖವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿವರ್ಷ ಬೈಠಕ್ ನಡೆಯುತ್ತದೆ. ಈ ವರ್ಷದ ವಿಜಯ ದಶಮಿ ದಿನದ ಸಂಘ 100 ವರ್ಷ ಪೂರೈಸಲಿದೆ. ಇದೀಗ ನಾಲ್ಕು ವರ್ಷಗಳ ಬಳಿಕ ಬೆಂಗಳೂರಲ್ಲಿ ಸಭೆ ನಡೆಯುತ್ತಿದೆ. ಸಂಘದ ರಚನೆಯಲ್ಲಿ ಮಹತ್ವಪೂರ್ಣ ಸಭೆ ಇದು. ಸಭೆಯಲ್ಲಿ 2024-25ರ ರಿಪೋರ್ಟ್ಅನ್ನು ದತ್ತಾತ್ರೇಯ ಹೊಸಬಾಳೆಯವರು ಮಂಡಿಸಲಿದ್ದಾರೆ. ಸಮಾಜದ ಎಲ್ಲರನ್ನೂ ತಲುಪಿಸುವ ಕೆಲಸ ನೂರು ವರ್ಷದ ಆಚರಣೆಯಲ್ಲಿ ಮುಖ್ಯವಾಗಿ ನಡೆಯಲಿದೆ. ಐದು ಪರಿವರ್ತನೆಯ ವಿಚಾರಗಳ ಮೇಲೆ ಚರ್ಚೆಯಾಗಲಿದೆ. ಎರಡು ನಿಲುವಳಿ ಕೂಡ ಕೈಗೊಳ್ಳಲಿದ್ದೇವೆ. ಮೊದಲನೆಯದು ಬಾಂಗ್ಲಾದೇಶದ ವಿಚಾರವಾಗಿ ಇರಲಿದೆ. ಮತ್ತೊಂದು, ಸಂಘದ ನೂರು ವರ್ಷಗಳ ಬಗ್ಗೆ ಹಾಗೂ ಮುಂದಿನ ಕಾರ್ಯದ ಬಗ್ಗೆ ಇರಲಿದೆ ಎಂದು ಅಂಬೇಕರ್ ತಿಳಿಸಿದರು.