ಬೆಂಗಳೂರು: ರಿಕವರಿ ಚಿನ್ನ ದುರ್ಬಳಕೆ ಮತ್ತು ಚಿನ್ನದ ವ್ಯಾಪಾರಿಗೆ ವಂಚನೆ, ಪಿಎಸ್ಐ ಅಮಾನತು
ಬೆಂಗಳೂರಿನ ಕಾಟನ್‌ಪೇಟೆ ಠಾಣೆಯ ಪಿಎಸ್ಐ ಸಂತೋಷ್ ಅವರನ್ನು ಚಿನ್ನದ ದುರ್ಬಳಕೆ ಮತ್ತು ವಂಚನೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. 2020ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿದ್ದಾಗ ರಿಕವರಿ ಚಿನ್ನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಚಿನ್ನದ ವ್ಯಾಪಾರಿಯಿಂದ 950 ಗ್ರಾಂ ಚಿನ್ನ ಪಡೆದು ವಾಪಸ್ ನೀಡದೆ ವಂಚಿಸಿದ್ದಾರೆ. ಪರಿಣಾಮವಾಗಿ ಎಫ್‌ಐಆರ್ ದಾಖಲಾಗಿ ಅವರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು, ಮಾರ್ಚ್ 23: ರಿಕವರಿ ಚಿನ್ನ (Gold) ದುರ್ಬಳಕೆ ಮತ್ತು ಚಿನ್ನದ ವ್ಯಾಪಾರಿಗೆ (Gold Merchant) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟೆ ಠಾಣೆ ಪಿಎಸ್ಐ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.
2020ರಲ್ಲಿ ಹಲಸೂರು ಗೇಟ್ ಠಾಣೆ ಪಿಎಸ್ಆರ್ ಆಗಿದ್ದ ಸಂತೋಷ್ ಅವರು ಪ್ರಕರಣವೊಂದರ ರಿಕವರಿ ಚಿನ್ನ ದುರ್ಬಳಕೆ ಮಾಡಿಕೊಂಡಿದ್ದರು. ಹೀಗಾಗಿ, ಚಿನ್ನದ ಅಂಗಡಿ ಮಾಲೀಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದೆ. ಫೋಟೋ ತೆಗೆಸಿ ವಾಪಸ್ ಕೊಡುತ್ತೇನೆ. ನಿನ್ನ ಬಳಿ ಇರುವ950 ಗ್ರಾಂ ಚಿನ್ನದ ಗಟ್ಟಿ ನೀಡುವಂತೆ ಪಿಎಸ್ಐ ಸಂತೋಷ ಚಿನ್ನದಂಗಡೆ ಮಾಲೀಕನಿಗೆ ಹೇಳಿದ್ದಾರೆ.
ಮಾತು ನಂಬಿ 950 ಗ್ರಾಂ ಚಿನ್ನದ ಗಟ್ಟಿಯನ್ನು ಪಿಎಸ್ಐ ಸಂತೋಷ ಅವರಿಗೆ ಚಿನ್ನದ ಅಂಗಡಿ ಮಾಲೀಕ ನೀಡಿದ್ದಾರೆ. ಚಿನ್ನ ವಾಪಸ್ ಕೇಳಿದಾಗ ಪಿಎಸ್ಐ ಸಂತೋಷ ಹಣ ನೀಡುತ್ತೇನೆಂದು ಹೇಳಿದ್ದು, ಭದ್ರತೆಗೆ ನಿವೇಶನ ಕರಾರು ಮಾಡಿಕೊಟ್ಟಿದ್ದರು.
ಆದರೆ, ನಿವೇಶನವನ್ನು ಪಿಎಸ್ಐ ಸಂತೋಷ್ ಬೇರೆಯವರಿಗೆ ಮಾರಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನದ ಅಂಗಡಿ ಮಾಲೀಕ ಮತ್ತೆ ಪಿಎಸ್ಐ ಸಂತೋಷರನ್ನು ಪ್ರಶ್ನಿಸಿದ್ದಾರೆ. ಆಗ, ಪಿಎಸ್ಐ ಸಂತೋಷ ಚಿನ್ನದ ಅಂಗಡಿ ಮಾಲಿಕರಿಗೆ ಖಾಲಿ ಚೆಕ್ ನೀಡಿದ್ದರು. ಆದರೆ, ಚೆಕ್ ಕೂಡ ಬೌನ್ಸ್ ಆಗಿತ್ತು. ಮತ್ತೆ ಹಣ ಅಥವಾ ಚಿನ್ನ ಕೇಳಿದಾಗ ಪಿಎಸ್ಐ ಸಂತೋಷ್ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಚಿನ್ನದ ಅಂಗಡಿ ಮಾಲೀಕ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದರು. ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಕೆಯಾಗಿದೆ. ಪ್ರಾಥಮಿಕ ವರದಿ ಆಧಾರದ ಮೇಲೆ ಪಿಎಸ್ಐ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಹೀಗಾಗಿ, ಹಲಸೂರು ಗೇಟ್ ಠಾಣೆಯಲ್ಲಿ ಪಿಎಸ್ಐ ಸಂತೋಷ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಮುನ್ನೆಲೆಗೆ ಬಂದ ಚಿನ್ನ ಗಣಿಗಾರಿಕೆ: ಮಂಗಳಗಟ್ಟಿ ರೈತರಲ್ಲಿ ಆತಂಕ
ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪಿಎಸ್ಐ ಸಂತೋಷ್ರನ್ನು ಅಮಾನತು ಮಾಡಿ ಪೊಲೀಸ್ ಕಮಿಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Sun, 23 March 25