ಹನಿಟ್ರ್ಯಾಪ್ ವಿರುದ್ಧ ಸಮರಕ್ಕೆ ರಾಜಣ್ಣ ಸಿದ್ಧ: ಕಾನೂನು ಏನು ಹೇಳುತ್ತೆ? ಏನು ಶಿಕ್ಷೆ?
ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಭಾರೀ ಸಂಚಲನ ಮೂಡಿಸಿದೆ. ಅದರಲ್ಲೂ ಕಾಂಗ್ರೆಸ್ನಲ್ಲಿ ಹಲ್ ಚಲ್ ಎಬ್ಬಿಸಿದ್ದು, ಈ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಎನ್ ರಾಜಣ್ಣ ಪುತ್ರ, ಎಂಎಲ್ಸಿ ರಾಜೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಸಾಕ್ಷ್ಯ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಕಾನೂನು ಹೋರಾಟದ ಜತೆಗೆ ದೆಹಲಿ ಮಟ್ಟದಲ್ಲಿ ರಾಜಕೀಯದ ಆಟ ಆಡಲು ರಾಜಣ್ಣ ರೆಡಿಯಾಗಿದ್ದಾರೆ. ಇನ್ನು ಹನಿಟ್ರ್ಯಾಪ್ ಸಂಬಂಧ ಕಾನೂನು ಏನು ಹೇಳುತ್ತೆ? ಏನೇನು ಶಿಕ್ಷೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 23): ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ರಾಜಣ್ಣ (KN Rajanna) ವಿರುದ್ಧದ ಹನಿಟ್ರ್ಯಾಪ್ಗೆ (honeytrap Case)ಯತ್ನಿಸಿದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಮುಂದಿನ ವಾರ ಅಧಿಕೃತ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಹನಿಟ್ರ್ಯಾಪ್ ಪ್ರಕರಣ ಸಂಬಂಧ ನ್ಯಾಯಾಂಗ ಹೋರಾಟ ನಡೆಸಲು ಸಚಿವ ಕೆ.ಎನ್. ರಾಜಣ್ಣ ಕಾನೂನು ತಜ್ಞರ ಸಲಹೆ ಪಡೆದಿದ್ದು, ಐಟಿ ಕಾಯ್ದೆ ಹಾಗೂ ಐಪಿಸಿ ಕಾಯ್ದೆಗಳಡಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕಾನೂನು ಏನು ಹೇಳುತ್ತೆ?
ಇನ್ನು ಈ ಹನಿಟ್ರ್ಯಾಪ್ ಬಗ್ಗೆ ಕಾನೂನು ಏನು ಹೇಳುತ್ತೆ ಎನ್ನುವುದನ್ನು ನೋಡುವುದಾದರೆ, IPC ಸೆಕ್ಷನ್ 384 ರ ಅಡಿ 3 ವರ್ಷ ಜೈಲು ಅಥವಾ ದಂಡ. IPC ಸೆಕ್ಷನ್ 385/389 ಗಂಭೀರ ಬೆದರಿಕೆಯಾಗಿದ್ದು 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. IPC ಸೆಕ್ಷನ್ 120(B) ಸಂಚು ಅಪರಾಧ, IPC ಸೆಕ್ಷನ್ 506 ಕ್ರಿಮಿನಲ್ ಬೆದರಿಕೆಯಾಗಿದ್ದು 2 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಹಲೋ ಅಂದ್ರೆ ಆ ಕಡೆಯಿಂದ ಹಲೋ ಅಂತಾರೆ: ಹನಿಟ್ರ್ಯಾಪ್ ಬಗ್ಗೆ ಡಿಕೆಶಿ ಹೇಳಿಕೆಗೆ ರಾಜಣ್ಣ ಹೇಳಿದ್ದಿಷ್ಟು
ಹನಿಟ್ರಾಪ್ ಬಗ್ಗೆ ಹೈಕಮಾಂಡ್ ಮಾಹಿತಿ ಸಂಗ್ರಹ
ದೇಶಾದ್ಯಂತ ಸದ್ದು ಮಾಡಿರುವ ಹನಿಟ್ರಾಪ್ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಪಡೆದಿದೆ. ಸಹಕಾರ ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಚರ್ಚೆಯಾಗಿರುವ ಕುರಿತು ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಕ್ರವಾರ ಕರೆ ಮಾಡಿ ನಡೆದಿರುವ ಘಟನೆಗಳ ಬಗ್ಗೆ ಮಾಹಿತಿ ಪಡೆದ್ದಾರೆ. ಜತೆಗೆ, ಇಂತಹ ಗಂಭೀರ ವಿಚಾರ ಸದನದಲ್ಲಿ ಚರ್ಚೆ ಬದಲಾಗಿ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತಲ್ಲ ಎಂದು ಉಭಯ ನಾಯಕರಿಗೂ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ನಾಯಕರ ಭೇಟಿಗೆ ನಿರ್ಧಾರ
ಹನಿ ಟ್ರ್ಯಾಪ್ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಸಚಿವರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದು ಪಕ್ಷಕ್ಕೆ ಹಾನಿ ಮಾಡಲಿದೆ ಎಂದು ಹೇಳಿದರೆ, ಮತ್ತೆ ಕೆಲವರು ಈ ರೀತಿ ಪ್ರಕರಣಗಳು ತಡೆಯಲು ಇದು ಸಹಕಾರಿಯಾಗುತ್ತದೆ ಎಂದು ಸಮರ್ಥಿಸಿದ್ದಾರೆ. ಆದ್ರೆ ಸಚಿವ ರಾಜಣ್ಣ ಕಾನೂನು ಹೋರಾಟದ ಜತೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನೂ ಭೇಟಿಯಾಗಲು ತೀರ್ಮಾನಿಸಿದ್ದಾರೆ. ಇನ್ನು ತನಿಖೆಯ ಸ್ವರೂಪದ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ನಿರ್ಧರಿಸುತ್ತಾರೆ ಅಂತಾ ರಾಜಣ್ಣ ಹೇಳಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಈಗ ರಾಜಕೀಯ ಹಾಗೂ ಕಾನೂನು ಚರ್ಚೆಗಳ ಕೇಂದ್ರ ಬಿಂದುವಾಗಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದೇ ಕುತೂಹಲ ಕೆರಳಿಸಿದೆ.