‘ಪ್ರಜ್ವಲ್​​ ಪ್ರಕರಣದ ಹಿಂದಿದ್ದವರಿಂದಲೇ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್​​’: ಹೆಚ್​​ಡಿಕೆ ಸ್ಫೋಟಕ ಆರೋಪ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ಹಿಂದೆ ಪ್ರಜ್ವಲ್ ರೇವಣ್ಣ ಪ್ರಕರಣದ ರೂವಾರಿಗಳೇ ಇದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 4 ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ ಅಂತಲೂ ಹೆಚ್​​ಡಿಕೆ ಹೇಳಿದ್ದಾರೆ.

ಪ್ರಜ್ವಲ್​​ ಪ್ರಕರಣದ ಹಿಂದಿದ್ದವರಿಂದಲೇ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್​​: ಹೆಚ್​​ಡಿಕೆ ಸ್ಫೋಟಕ ಆರೋಪ
ಹೆಚ್​​.ಡಿ. ಕುಮಾರಸ್ವಾಮಿ
Image Credit source: Tv9 Kannada

Updated on: Oct 13, 2026 | 12:21 PM

ಬೆಂಗಳೂರು, ಅಕ್ಟೋಬರ್​​ 13: ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್​​ ಆಪರೇಷನ್​​ ವಿಚಾರ ಭಾರೀ ಸಂಚಲನ ಮೂಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್​​ ಮಂತ್ರಿಗಳ ಸ್ಟಿಂಗ್​​ ಆಪರೇಷನ್​​ ನಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದ ಬೆನ್ನಲ್ಲೇ ರಾಜ್ಯದ ಮಾಜಿ ಸಿಎಂ ಒಬ್ಬರು ಸ್ಟೇ ಪಡೆದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಈ ನಡುವೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದು, ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಪ್ರಕರಣ ಉಲ್ಲೇಖಿಸಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಕುಮಾರ್​​ ಅವರೇ ನೀರು ಹಾಕಿ ಬೆಳೆಸಿದ ಸ್ಟಿಂಗ್ ಆಪರೇಷನ್ ಇಂದು ಹೆಮ್ಮರವಾಗಿ ಬೆಳೆದಿದೆ ಎಂದಿದ್ದಾರೆ.

ಪ್ರಜ್ವಲ್​​​​ ಕೇಸ್​​ ಉಲ್ಲೇಖಿಸಿ ಡಿಕೆಶಿಗೆ ಹೆಚ್​​ಡಿಕೆ ಡಿಚ್ಚಿ

ನಮ್ಮ ಕುಟುಂಬದ ಒಬ್ಬ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಮೇಲೆ ಎಲೆಕ್ಷನ್​​ಗೆ 2 ದಿನ ಇರಬೇಕಾದರೆ ವಿಡಿಯೋಗಳನ್ನು ಪೆನ್​​ಡ್ರೈವ್ ಮಾಡಿ ಹಂಚುವ ಕೆಲಸ ಮಾಡಿದರು. 5 ವರ್ಷದ ಹಿಂದೆ ಕಂಪ್ಲೇಂಟ್ ಕೊಟ್ಟ ಮಹಿಳೆಯನ್ನ ಕರೆಸಿ ಇಲ್ಲಿ ದೂರು ಕೊಡಿಸಿದರು. ರಾಹುಲ್ ಗಾಂಧಿ ಇದರ ಬಗ್ಗೆ ದೇಶದಾದ್ಯಂತ ಪ್ರಸ್ತಾಪ ಮಾಡಿ ದೇವೇಗೌಡರ ಮರ್ಯಾದೆ ಕಳೆಯೋಕೆ ಹೋದರು. ಹಾಸನದ ಮತ್ತೊಬ್ಬರು, ದೇವರಾಜೇಗೌಡ ಮತ್ತೆ ಇನ್ನೊಬ್ಬರು ಮಾತಾಡುವ ಆಡಿಯೋ ಬಂತು. ಡಿಕೆ ಶಿವಕುಮಾರ್ ಮಾತಾಡ್ತಿದ್ದಾರೆ ಎಂದು ದೇವರಾಜೇಗೌಡಗೆ ಫೋನ್ ಕೊಡ್ತಾರೆ. ಆಗ ಈ ಹೆಣ್ಣುಮಗಳನ್ನ ಹುಡುಕೋಕೆ ಸುಸ್ತಾಗಿದ್ದೀನಿ ಇರಪ್ಪ ಎಂದು ಡಿಕೆಶಿ ಹೇಳ್ತಾರೆ. ವಿಡಿಯೋ ಹಾಕಿ ಹೆಣ್ಣು ಮಕ್ಕಳ ಕುಟುಂಬದ ಮರ್ಯಾದೆ ಕಳೆದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಈಗ ಮಾಜಿ ಸಿಎಂ ಸ್ಟೇ ತೆಗೆದುಕೊಂಡಿದ್ದಾರೆ. ಅಂತಿಮವಾಗಿ ನ್ಯಾಯ ದೊರಕಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸ್ಟಿಂಗ್ ವಿವಾದ: ಕಾಂಗ್ರೆಸ್ ಹೈಕಮಾಂಡ್ ತಲುಪಿದ ವಿಚಾರ, ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ

‘ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ’

ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಆಗಿದ್ದ ಬಗ್ಗೆ ನಾನು ಮಾತನಾಡಿದ್ದೆ. 4 ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಕೇಳಿ ನನಗೆ ಆಶ್ಚರ್ಯ ಆಯ್ತು ಅಂತಲೂ ಇದೇ ವೇಳೆ ಹೆಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್​​ ಸಿಡಿಸಿದ್ದಾರೆ.

‘ಉಪ್ಪು ತಿಂದವರು ನೀರು ಕುಡಿಯಲೇಬೇಕು’

ಮತ್ತೊಂದೆಡೆ ಸ್ಟಿಂಗ್ ಆಪರೇಷನ್​ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ಶಾಸಕ ತನ್ವೀರ್ ಸೇಠ್, ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದಿದ್ದಾರೆ. ಕೆಲವರು ತಮ್ಮ ಮಾನಕ್ಕೆ ಹೆದರಿ ಕೋರ್ಟ್​ ಮೊರೆ ಹೋಗಿರ್ತಾರೆ. ಮಾನವಂತರಿಗೆ ಅವಮಾನಗಳನ್ನು ಸಹಿಸಿಕೊಳ್ಳುವುದು ಕಷ್ಟ. ಸ್ಟಿಂಗ್ ಆಪರೇಷನ್ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿರುವವರು, ಅದರ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು. ಸತ್ಯವನ್ನು ಮುಚ್ಚಿಡುವುದು ಕೂಡ ಅಪರಾಧ. ಸುಮ್ಮನೆ ಹೇಳಿಕೆ ಕೊಟ್ಟು ಯಾಕೆ ಗೊಂದಲ ಸೃಷ್ಟಿ ಮಾಡ್ತಿದ್ದಾರೆ? ಸುಮ್ಮನೆ ಹಿಟ್​ ಆ್ಯಂಡ್​​ ರನ್ ಆದರೆ ಪ್ರಯೋಜನೆ ಏನು ಹೇಳಿ? ದಿನವೂ ಸ್ಟಿಂಗ್ ಅಪರೇಷನ್ ಎನ್ನುವ ರಬ್ಬರ್ ಎಳೆಯಬಾರದು. ಸಾಕ್ಷಿಗಳು ಇದ್ದರೆ ಬಿಡುಗಡೆ ಮಾಡಲಿ ಎಂದವರು ಹೇಳಿದ್ದಾರೆ.

ಸರ್ಕಾರ ಸ್ಟಿಂಗ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದರ ಬಗ್ಗೆ ಸಾಕ್ಷಿಗಳು ಇದ್ದರೆ ತನಿಖೆಯಾಗಲಿ. ಇವತ್ತಿನ ಸಂದರ್ಭದಲ್ಲಿ ರಾಜಕಾರಣ ಮಾಡುವುದೇ ಕಷ್ಟವಾಗಿದೆ. ಎಲ್ಲಿ ಯಾವ ಕ್ಯಾಮರಾ ಇರುತ್ತೆ ಎಂಬುದೇ ಗೊತ್ತಾಗದ ಸ್ಥಿತಿ ಇದೆ. ಇದು ರಾಜಕಾರಣದ ಕೆಟ್ಟ ಕಾಲ. ಶಾಸಕರು ಮನುಷ್ಯರೇ, ಶಾಸಕರು ಮೇಲಿಂದ ಇಳಿದು ಬಂದಿಲ್ಲ. ಈ ಸ್ಟಿಂಗ್ ಆಪರೇಷನ್ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ. ಕೆಲವರು ಅಧಿಕಾರಕ್ಕಾಗಿ ಮತ್ತೊಬ್ಬರ ಚಾರಿತ್ರ್ಯಹರಣ ಮಾಡಲು ಇಂಥಹದಕ್ಕೆ ಕೈಹಾಕ್ತಾರೆ. ನನಗೆ ಈ ಬಗ್ಗೆ ಯಾವ ಅಭ್ಯಾಸವೂ ಇಲ್ಲ. ನಾನು ಇಂತಹ ಯಾವ ವಿದ್ಯೆಯನ್ನು ಕಲಿತಿಲ್ಲ ಎಂದು ತನ್ವೀರ್​​ ಸೇಠ್​​ ಹೇಳಿದ್ದಾರೆ.

‘ಸ್ಟಿಂಗ್​ ಆಪರೇಷನ್​ ಬಗ್ಗೆ ಸಿಎಂ ತನಿಖೆ ಮಾಡಿಸಲಿ’

ಸ್ಟಿಂಗ್​ ಆಪರೇಷನ್​ ಸಂಬಂಧ ಸಿಎಂ ತನಿಖೆ ಮಾಡಿಸಬೇಕು ಎಂದು ಮತ್ತೋರ್ವ ಕಾಂಗ್ರೆಸ್​​ ಶಾಸಕ ಕೆ.ಎನ್.ರಾಜಣ್ಣ ಕೂಡ ಒತ್ತಾಯಿಸಿದ್ದಾರೆ. ರಾಜ್ಯದ ಜನರಿಗೆ ಇರುವ ಗೊಂದಲ ದೂರ ಮಾಡಬೇಕು. ನನ್ನ ಮೇಲೂ ಅಟೆಮ್ಟ್ ಮಾಡಿದ್ರು. ಸರ್ಕಾರಿ ನಿವಾಸ ಆಗಿದ್ದರಿಂದ ಸೆಕ್ಯೂರಿಟಿಗೆ ಸಿಸಿಟಿವಿ ಇರುತ್ತೆ. ಸಿಎಂಗೆ ಜವಾಬ್ದಾರಿ ಇದೆ, ತನಿಖೆ ಮಾಡಿಸಿ ತೆರೆ ಎಳೆಯಬೇಕು. ಮುಖ್ಯಮಂತ್ರಿಗಳೇ ಹೇಳಿರೋದ್ರಿಂದ ಅವರೇ ತನಿಖೆ ಮಾಡಿಸಲಿ. ಸಾಮಾನ್ಯ ಜನರ ತರಹ ಮಾತನಾಡಿದರೆ ಆಗಲ್ಲ, ನಾವು ಒಪ್ಪಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:18 pm, Tue, 13 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us