
ನವದೆಹಲಿ/ಬೆಂಗಳೂರು, ಮೇ 26: ಕರ್ನಾಟಕದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯವು ಬ್ರೇಕ್ ಹಾಕಿದ್ದು, ಈಗಿರುವ ಕಾನೂನು ವ್ಯವಸ್ಥೆಯೇ ಸಾಕಷ್ಟು ಸಮರ್ಪಕವಾಗಿದೆ. ಆ ಕಾರಣಕ್ಕೆ ಹೊಸ ಕಾನೂನು ಅಗತ್ಯವಿಲ್ಲದಿರಬಹುದು ಎಂದು ಹೇಳಿದೆ. ಈ ಕುರಿತ ತನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಇದೇ ವರ್ಷ ಫೆಬ್ರವರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆಗೆ ಅನುಮೋದನೆ ನೀಡಲು ನಿರಾಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಗಾಗಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಕಠಿಣ ನಿಯಮಗಳನ್ನು ಒಳಗೊಂಡಿದ್ದ ಈ ಮಸೂದೆ ಪ್ರಕಾರ, ದ್ವೇಷ ಅಪರಾಧ ಅಥವಾ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸುವ ಅವಕಾಶವಿತ್ತು. ಮರು ಅಪರಾಧಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸುವ ಬಗ್ಗೆಯೂ ಮಸೂದೆಯಲ್ಲಿ ಸೇರಿಸಲಾಗಿತ್ತು.
ಇದನ್ನೂ ಓದಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? ಇಲ್ಲಿದೆ ಮಾಹಿತಿ
ಮೇ 12ರಂದು ಕಳುಹಿಸಿದ ಪತ್ರದಲ್ಲಿ ಗೃಹ ಸಚಿವಾಲಯ, ಮಸೂದೆಯಲ್ಲಿ ಪರಿಹರಿಸಲು ಯತ್ನಿಸಿರುವ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು ಎಂದು ತಿಳಿಸಿದೆ.
2025ರ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಲಾಗಿತ್ತು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಹೆಚ್ಚಿನ ಚರ್ಚೆಗೆ ಅಥವಾ ಸದನ ಸಮಿತಿಗೆ ಒಪ್ಪದ ಹಿನ್ನೆಲೆ ವಿರೋಧ ಪಕ್ಷ ಬಿಜೆಪಿ ವಾಕೌಟ್ ನಡೆಸಿತ್ತು. ಜನವರಿಯಲ್ಲಿ ರಾಜ್ಯಪಾಲ ಗೆಹ್ಲೋಟ್ ಕೂಡ ಮಸೂದೆಯನ್ನು ಹಿಂದಿರುಗಿಸಿ, ಇದು ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಚರ್ಚೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:22 pm, Tue, 26 May 26