ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಅಚ್ಚರಿಯ ಮಾಹಿತಿ ಬಹಿರಂಗ
ಚಾಮರಾಜನಗರದ ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾದ ಪ್ರಕರಣ ಸಂಬಂಧ ತನಿಖೆ ವೇಳೆ ಹಲವು ಪ್ರಮುಖ ವಿಚಾರಗಳು ಬಯಲಾಗಿವೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಳ್ಳಬೇಟೆ ತಡೆ ಶಿಬಿರದಲ್ಲಿ ಸಿಬ್ಬಂದಿ ಇರಲ್ಲ ಎಂದು ಭಾವಿಸಿ ಬೇಟೆಗಾಗಿ ನಾಲ್ವರು ಬಂದಿದ್ದರು. ಈ ವೇಳೆ ಕ್ಯಾಂಪ್ನಲ್ಲಿದ್ದ ಸಿಬ್ಬಂದಿ ಮತ್ತು ಬೇಟೆಗಾರರ ನಡುವೆ ಫೈರಿಂಗ್ ನಡೆದು 3 ಜೀವ ಹೋಗಿದೆ ಎನ್ನಲಾಗಿದೆ. ಅಲ್ಲದೆ, ಮೃತರ ಪೈಕಿ ಓರ್ವನ ಮೇಲೆ ಕೆಲ ಪ್ರಕರಣಗಳು ಇರುವುದು ಕೂಡ ಬಹಿರಂಗಗೊಂಡಿದೆ.

ಮುಖ್ಯಾಂಶಗಳು
- ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣ
- ತನಿಖೆ ವೇಳೆ ಬಯಲಾಯ್ತು ಹಲವು ಸ್ಫೋಟಕ ವಿಚಾರ
- ಘಟನೆ ನಡೆದ ದಿನ ಅಸಲಿಗೆ ನಡೆದಿದ್ದಾದರೂ ಏನು?
ಬೆಂಗಳೂರು/ಚಾಮರಾಜನಗರ, ಆಗಸ್ಟ್ 19: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ (Firing) ಮೂವರು ಬಲಿ ಪ್ರಕರಣ ಸಂಬಂಧ ಬಗೆದಷ್ಟೂ ಅಚ್ಚರಿಯ ವಿಚಾರಗಳು ಬಯಲಾಗುತ್ತಿವೆ. ಆಗಸ್ಟ್ 14ರ ರಾತ್ರಿ ತಾಂಮ್ರಿಪಲ್ಲಿ ಕಳ್ಳಬೇಟೆ ತಡೆ ಶಿಬಿರದ (Anti-Poaching Camp) ಬಳಿ ಫೈರಿಂಗ್ ಆಗಿದ್ದು, ಕಾವೇರಿ ವನ್ಯಧಾಮದಲ್ಲಿ ಗುಂಡಿನ ಸದ್ದು ಮೊಳಗಿದೆ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಾರ್ಡ್ ಮಾಹಿತಿ ನೀಡಿದ್ದ ಎಂಬುದು ಗೊತ್ತಾಗಿದೆ.
ಘಟನೆ ನಡೆದ ದಿನ ಆಗಿದ್ದೇನು?
ಹೀಗಾಗಿ ಆಗಸ್ಟ್ 15ರಂದು ಬೇಟೆಗಾರರು ಮತ್ತು ಕಾಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ಇಟ್ಟಿದ್ದರು. ಆ ದಿನಂದೇ ನಾಲ್ವರು ಬೇಟೆಯಾಡಲೆಂದು ಕಾಡಿಗೆ ತೆರಳಿದ್ದರು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಅಧಿಕಾರಿಗಳು ಧ್ವಜಾರೋಹಣಕ್ಕೆ ತೆರಳಿರುತ್ತಾರೆ ಎಂದು ಇವರು ಭಾವಿಸಿದ್ದರು. ಆದರೆ ಅಂದು ಅರಣ್ಯ ಇಲಾಖೆ ಸಿಬ್ಬಂದಿ ಕಳ್ಳಬೇಟೆ ತಡೆ ಶಿಬಿರದಲ್ಲಿಯೇ ಇದ್ದರು. ಈ ವೇಳೆ ಬೇಟೆಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಮೂವರು ಬೇಟೆಗಾರರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶೂಟೌಟ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಅರಣ್ಯ ಇಲಾಖೆ ನಡೆಗೆ ವ್ಯಕ್ತವಾಯ್ತು ಭಾರಿ ಅನುಮಾನ!
ಮೃತರ ಪೈಕಿ ಓರ್ವನ ಮೇಲಿವೆ ಕೆಲ ಪ್ರಕರಣ
ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ, ಮೃತರ ಕಡೆಯವರು ಇಲಾಖಾ ಕ್ಯಾಂಪ್ಗಳನ್ನು ಸ್ಫೋಟಗೊಳಿಸಿದ್ದಾರೆ. ಮಿಂಚಿನಹಳ್ಳಿ , ಭೀಮೇಶ್ವರಿ, ಒಳ್ಳೆಮರದ ಹಟ್ಟಿ, ಬೂದಿಕೆರೆ, ಬಂಡಹಳ್ಳಿ ಮತ್ತು ಕಲಿದೊಡ್ಡಿ ಸೇರಿದಂತೆ ಒಟ್ಟು 6 ಕಡೆ ಕಳ್ಳಬೇಟೆ ತಡೆ ಶಿಬಿರಗಳ ದಾಳಿ ನಡೆಸಲಾಗಿದೆ. ಇನ್ನು ಗುಂಡಿನ ದಾಳಿ ವೇಳೆ ಮೃತಪಟ್ಟಿರುವ ಮೂವರ ಪೈಕಿ ಪೀಟರ್ ಮೇಲೆ ಬೇರೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿದ್ದು, ಆತನಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಚರ್ಚ್ಗಳಲ್ಲಿ ಆತ 3 ತಿಂಗಳು ಅಡಗಿ ಕುಳಿತಿದ್ದ ಎಂಬ ಮಾಹಿತಿಯೂ ಸಿಕ್ಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:44 pm, Wed, 19 August 26




