ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್ಟಿ ರದ್ದುಗೊಳಿಸಿ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಿದ್ದರಾಮಯ್ಯ
ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟೂ ಗಳಿಕೆ ಇರುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಡಬ್ಬಲ್ ಎಂಜಿನ್ ಸರ್ಕಾರಗಳಿಗೆ ಇಲ್ಲ.
ಬೆಂಗಳೂರು: ದಿನಬಳಕೆ ವಸ್ತು ಹಾಗೂ ಆಹಾರ ವಸ್ತುಗಳ ಮೇಲೆ ನಾಳೆಯಿಂದಲೇ ಕೇಂದ್ರದ ನೂತನ ಜಿಎಸ್ಟಿ (GST) ನೀತಿ ಜಾರಿಯಾಗಲಿದ್ದು, ದುನಿಯಾ ಇನ್ನಷ್ಟು ದುಬಾರಿಯಾಗಲಿದೆ. ಈ ಬಗ್ಗೆ ಅಸಮಧಾನ ಹೊರಹಾಕಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್ಟಿ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಕೇಂದ್ರ ಸರಕಾರದ ತಲೆಕೆಳಗಾದ ಆರ್ಥಿಕ ನೀತಿಗಳಿಂದ ದೇಶದ ದುಡಿಯುವ ವರ್ಗಗಳು ಹೈರಾಣಾಗಿರುವಾಗ ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲೂ ಶೇ.5 ರಷ್ಟು ಜಿಎಸ್ಟಿ ವಿಧಿಸುತ್ತಿರುವುದು ಕ್ರೌರ್ಯದ ಪರಮಾವಧಿಯಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲಿನ ಜಿಎಸ್ಟಿಯನ್ನು ತಕ್ಷಣ ರದ್ದುಗೊಳಿಸಲು ಒತ್ತಾಯಿಸಬೇಕೆಂದು ಸಿದ್ದರಾಮಯ್ಯ ಪತ್ರ ಬರೆದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ?: ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟೂ ಗಳಿಕೆ ಇರುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಡಬ್ಬಲ್ ಎಂಜಿನ್ ಸರ್ಕಾರಗಳಿಗೆ ಇಲ್ಲ. ಬಿಜೆಪಿ ಸರ್ಕಾರಗಳು ಜನತೆಯನ್ನು ಶತ್ರುಗಳೆಂದು ಭಾವಿಸಿ ಕೆಲಸ ಮಾಡುತ್ತಿವೆ ಎಂಬುದಕ್ಕೆ ಇದು ಉದಾಹರಣೆ. ಮಂಡಕ್ಕಿ ಉತ್ಪಾದನೆಗೆ ತಗಲುವ ವೆಚ್ಚ, ಮಾರಾಟ ವೆಚ್ಚಕ್ಕಿಂತ ಹೆಚ್ಚಾಗಿದೆ. ಮಂಡಕ್ಕಿ ಉತ್ಪಾದಿಸಿ ಅದು ಗ್ರಾಹಕರ ಕೈಗೆ ತಲುಪುವವರೆಗೂ ಬೆಲೆಗಳ ಏರಿಳಿತ ಅತಿ ಸಾಮಾನ್ಯ ಅಗಿ ಬಿಟ್ಟಿದೆ. ಮಳೆಗಾಲದಲ್ಲಿ ಮಂಡಕ್ಕಿ ಉತ್ಪಾದನೆಗೆ ನಾನಾ ತೊಂದರೆಗಳಿವೆ. ಅಕ್ಕಿ ಒಣಗಿರುವುದಿಲ್ಲ, ಭತ್ತದ ಬೆಲೆ ಗಗನಕ್ಕೆ ಏರಿರುತ್ತದೆ. ಮಾರಾಟವೂ ಕುಸಿದಿರುತ್ತದೆ ಎಂದು ಪತ್ರದ ಮೂಲಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಮಳೆಗಾಲದಲ್ಲಿ ಅಕ್ಕಿ ನೆನೆದರೆ ಮಂಡಕ್ಕಿ ಭಟ್ಟಿಗಳನ್ನು ವಾರಗಟ್ಟಲೆ ಮುಚ್ಚಬೇಕಾಗುತ್ತದೆ. ಭಟ್ಟಿ ಮುಚ್ಚಿದರೆ ಮಂಡಕ್ಕಿ ಕಾರ್ಮಿಕರಿಗೆ ಬೇರೆ ಕಡೆ ಕೂಲಿ ಕೆಲಸ ಸಿಗುವುದಿಲ್ಲ. ಒಂದು ಹೊತ್ತಿನ ಊಟಕ್ಕೂ ಕೂಲಿ ಕಾರ್ಮಿಕರು ಪರದಾಡಬೇಕಾಗುತ್ತದೆ. ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದಿದ್ದರೂ ಮಂಡಕ್ಕಿ ಮತ್ತಿತರ ಸಣ್ಣ-ಪುಟ್ಟ ಬಡವರ ಆಹಾರ ಉತ್ಪಾದನೆ ಮೇಲೆ ಜಿಎಸ್ಟಿ ವಿಧಿಸುತ್ತಿರಲಿಲ್ಲ. ದಾವಣಗೆರೆ ಒಂದರಲ್ಲೆ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮಂಡಕ್ಕಿ ಉತ್ಪಾದನೆಯನೇ ನೆಚ್ಚಿಕೊಂಡಿವೆ. ಇವರ ಅನ್ನದ ತಟ್ಟೆಗೆ ಕೈ ಹಾಕಿ ತುತ್ತು ಅನ್ನವನ್ನೂ ಕಿತ್ತುಕೊಳ್ಳುವುದು ಅಮಾನವೀಯ ಸಂಗತಿ. ದಾವಣಗೆರೆ ಮತ್ತಿತರ ಕಡೆಯ ಮಂಡಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದವರು ನನ್ನನ್ನು ಭೇಟಿಯಾಗಿ ಮಂಡಕ್ಕಿಗೂ ಜಿಎಸ್ಟಿ ವಿಧಿಸಿರುವುದರಿಂದ ಆಗಿರುವ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ಗನ್; ನಟೋರಿಯಸ್ ರೌಡಿಶೀಟರ್ ಮೇಲೆ ಫೈರಿಂಗ್