GST: ಹಾಲಿನ ಉತ್ಪನ್ನಗಳು, ಆಹಾರ ಧಾನ್ಯಗಳ ಮೇಲೆ ಜಿಎಸ್ಟಿ: ನಾಳೆಯಿಂದ ಜನಸಾಮಾನ್ಯನ ಮೇಲೆ ಬೆಲೆಏರಿಕೆಯ ಮತ್ತೊಂದು ಬರೆ
KMF Nandini: ಜಿಎಸ್ಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಕೆಎಂಎಫ್ ಸಿದ್ಧತೆ ಮಾಡಿಕೊಂಡಿದೆ. ಮಜ್ಜಿಗೆ, ಮೊಸರು, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಯಾಗುವುದು ನಿರೀಕ್ಷಿತ.
ಬೆಂಗಳೂರು: ಹಾಲಿನಿಂದ ತಯಾರಾದ ಉತ್ಪನ್ನಗಳು (Milk Products) ಮತ್ತು ಆಹಾರ ಧಾನ್ಯಗಳಿಗೆ (Labelled Rice etc) ನೀಡಿದ್ದ ಜಿಎಸ್ಟಿ (Goods and Service Tax – GST) ವಿನಾಯ್ತಿಯನ್ನು ಕೇಂದ್ರ ಸರ್ಕಾರ (ಜಿಎಸ್ಟಿ ಮಂಡಳಿ) ಹಿಂಪಡೆದಿದೆ. ನಾಳೆಯಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ. ‘ನಂದಿನಿ’ ಬ್ರಾಂಡ್ನ ಅಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದನಾ ಮಹಾ ಮಂಡಳವು (Karnataka Milk Federation – KMF) ಸಹ ಮಜ್ಜಿಗೆ, ಮೊಸರು, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ ಯಾವ ಉತ್ಪನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ ಎನ್ನುವ ಬಗ್ಗೆ ಈವರೆಗೆ ಸ್ಪಷ್ಟತೆ ಸಿಕ್ಕಿಲ್ಲ.
ಜೂನ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಿದ್ದ ವಿನಾಯ್ತಿ ತೆಗೆದುಹಾಕಲು ನಿರ್ಣ ತೆಗೆದುಕೊಂಡಿತ್ತು. ಈ ಪರಿಷ್ಕರಣೆಯು ನಾಳೆಯಿಂದಲೇ (ಜುಲೈ 18) ಜಾರಿಗೆ ಬರಲಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಭಾರತೀಯರು ಮುಂದಿನ ದಿನಗಳಲ್ಲಿ ತಮ್ಮ ಅಡುಗೆಮನೆ ಬಜೆಟ್ ಅನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಜಿಎಸ್ಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಹಾಲು ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಸಿದ್ಧವಾಗಿದೆ. ಕೆಎಂಎಫ್ (ನಂದಿನಿ) ಮೊಸರಿನ ಮೇಲೆ ₹ 2.20, ಲಸ್ಸಿಗೆ ₹ 3.75, ಮಜ್ಜಿಗೆಗೆ ₹ 3 ಮತ್ತು ಒಂದು ಕೆಜಿ ಪನ್ನೀರ್ಗೆ ₹ 15 ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ‘ವಿಜಯವಾಣಿ’ ದಿನಪತ್ರಿಕೆಯು ವರದಿ ಮಾಡಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಖಾಸಗಿ ಡೇರಿ ಕಂಪನಿಗಳಾದ ದೊಡ್ಲಾ ಮತ್ತು ಹೆರಿಟೇಜ್ ಸಹ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸಲಿವೆ ಎಂದು ‘ದಿ ಮಿಂಟ್’ ಜಾಲತಾಣ ವರದಿ ಮಾಡಿದೆ.
ಇದನ್ನೂ ಓದಿ: GST Compensation Cess: ಜಿಎಸ್ಟಿ ಪರಿಹಾರ ಸೆಸ್ 2026ರ ತನಕ ವಿಸ್ತರಣೆ ಮಾಡಿದ ಹಣಕಾಸು ಸಚಿವಾಲಯ
ದುಬಾರಿ ಆಗಲಿರುವ ವಸ್ತುಗಳು
1) ಪ್ಯಾಕೇಜ್ಡ್ ಫುಡ್: ಪ್ರೀ- ಪ್ಯಾಕ್ಡ್, ಪ್ರೀ- ಲೇಬಲ್ಡ್ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಮತ್ತಿತರ ಉತ್ಪನ್ನಗಳು. ಜೇನುತುಪ್ಪ, ಉಪ್ಪಿನಕಾಯಿ, ಮಾಂಸ, ಮೀನು, ಪ್ಯಾಕ್ ಮಾಡಿರುವ ಬ್ರಾಂಡ್ ಅಲ್ಲದ ಆಹಾರ ಪದಾರ್ಥ (ಅಕ್ಕಿ, ಗೋಧಿ, ಗೋಧಿ ಹಿಟ್ಟು, ಒಣಕಾಳು ಇತ್ಯಾದಿ)
2) ಬ್ಯಾಂಕ್ ಚೆಕ್ ಬುಕ್: ಬ್ಯಾಂಕ್ ಚೆಕ್ಗಳ (ಬಿಡಿ ಅಥವಾ ಪುಸ್ತಕ ಸ್ವರೂಪದಲ್ಲಿ) ವಿತರಣೆ ಮೇಲೆ ಶೇ 18ರಷ್ಟು ಜಿಎಸ್ಟಿ ಶುಲ್ಕ ಬೀಳಲಿದೆ.
3) ನಕ್ಷೆಗಳು ಮತ್ತು ಚಾರ್ಟ್ಗಳು: ಶೇ 12ರಷ್ಟು ಜಿಎಸ್ಟಿ ಹಾಕಲಾಗುತ್ತದೆ.
4) ಹೋಟೆಲ್ ಕೋಣೆಗಳು: ಒಂದು ದಿನಕ್ಕೆ ₹ 1,000 ರೂಪಾಯಿ ಒಳಗಿನ ಹೋಟೆಲ್ ರೂಮ್ಗೆ ಶೇ 12ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಈವರೆಗೆ ಈ ಮೊತ್ತದ ಶುಲ್ಕವಿರುವ ಕೋಣೆಗೆ ಜಿಎಸ್ಟಿ ವಿನಾಯ್ತಿಯಿತ್ತು.
5) ಆಸ್ಪತ್ರೆ ಬೆಡ್ಗಳು: ರೂಮ್ ಬಾಡಿಗೆ (ಐಸಿಯು ಹೊರತುಪಡಿಸಿ) ದಿನಕ್ಕೆ 5 ಸಾವಿರ ರೂಪಾಯಿ ಮೇಲ್ಪಟ್ಟು ಶುಲ್ಕ ವಿಧಿಸುವ ಆಸ್ಪತ್ರೆಗಳಲ್ಲಿ ಶೇ 5ರ ಜಿಎಸ್ಟಿ ಇದೆ. ಇದಕ್ಕೆ ಐಟಿಸಿ (Input Tax Credit – ITC) ಸಿಗುವುದಿಲ್ಲ.
6) ಎಲ್ಇಡಿ ಬಲ್ಪ್: ಎಲ್ಇಡಿ ದೀಪಗಳು, ಸಲಕರಣೆಗಳು, ಎಲ್ಇಡಿ ಲ್ಯಾಂಪ್ಗಳ ಮೇಲೆ ಶೇ 6ರಷ್ಟು ಜಿಎಸ್ಟಿ ಹೆಚ್ಚಾಗಲಿದೆ. ಈವರೆಗೆ ಶೇ 12ರಷ್ಟು ತೆರಿಗೆಯಿತ್ತು. ಈ ಪ್ರಮಾಣವು ಇನ್ನು ಮುಂದೆ ಶೇ 18ಕ್ಕೆ ಏರಿಕೆಯಾಗಲಿದೆ.
7) ಬ್ಲೇಡ್, ಚಾಕು: ಚಾಕುಗಳು ಜತೆಗೆ ಕತ್ತರಿಸಿದ ಬ್ಲೇಡ್ಗಳು, ಪೇಪರ್ ಕತ್ತರಿಗಳು, ಪೆನ್ಸಿಲ್ ಶಾರ್ಪ್ನರ್ಗಳು ಮತ್ತು ಬ್ಲೇಡ್ಗಳು, ಸ್ಕಿಮ್ಮರ್ಸ್, ಕೇಕ್ ಸರ್ವರ್ಸ್ ಮುಂತಾದವುಗಳಿಗೆ ಶೇ 12ರಿಂದ 18ರಷ್ಟು ತೆರಿಗೆ ಹಾಕಲಾಗುತ್ತದೆ.
8) ಪಂಪ್ಸ್ ಮತ್ತು ಮಶೀನ್ಗಳು: ಸಬ್ ಮರ್ಸಿಬಲ್ ಪಂಪ್ಗಳು, ಬೈಸಿಕಲ್ ಪಂಪ್ಗಳು ಸೇರಿದಂತೆ ಇತರ ಮಶೀನ್ಗಳ ಮೇಲಿನ ಜಿಎಸ್ಟಿಯನ್ನು ಶೇ 12ರಿಂದ ಶೇ 18ಕ್ಕೆ ಏರಿಸಲಾಗಿದೆ.
ಇವೆಲ್ಲ ಅಗ್ಗ ಆಗುತ್ತವೆ
1) ರೋಪ್ವೇ ರೈಡ್ಗಳು: ರೋಪ್ವೇಗಳ ಮೂಲಕ ಸರಕುಗಳು ಮತ್ತು ಪ್ರಯಾಣಿಕರನ್ನು ಒಯ್ಯುವ ದರವನ್ನು ಶೇ 18ರಿಂದ ಶೇ 5ಕ್ಕೆ ಇಳಿಸಿದ್ದು, ಜತೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೇವೆ ದೊರೆಯುತ್ತದೆ.
2) ಸರಕು ಸಾಗಣೆ ಬಾಡಿಗೆ: ಸರಕು ಸಾಗಣೆಯ ಜತೆಗೆ ತೈಲ ಮತ್ತು ಆಪರೇಟರ್ಸ್ ವೆಚ್ಚದ ಜಿಎಸ್ಟಿ ಶೇ 18ರಿಂದ ಶೇ 12ಕ್ಕೆ ಇಳಿದಿದೆ.
3) ಅರ್ಥೋಪೆಡಿಕ್ ಅಪ್ಲೈಯನ್ಸಸ್: ಸ್ಪ್ಲಿಂಟ್ಸ್ ಮತ್ತು ದೇಹದ ಇತರ ಕೃತಕ ಭಾಗಗಳಿಗಾಗಿ ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ.
4) ರಕ್ಷಣಾ ವಸ್ತುಗಳು: ಖಾಸಗಿ ಮಾರಾಟಗಾರರು/ಸಂಸ್ಥೆಗಳು ಆಮದು ಮಾಡಿಕೊಳ್ಳುವ ನಿರ್ದಿಷ್ಟ ವಸ್ತುಗಳ ಮೇಲೆ ಐಜಿಎಸ್ಟಿಯನ್ನು ವಿನಾಯಿತಿ ನೀಡಲಾಗಿದೆ.
Published On - 7:39 am, Sun, 17 July 22