
ಬೆಂಗಳೂರು, ನವೆಂಬರ್ 20: ನಗರದಲ್ಲಿ ಕಳೆದ 15 ದಿನಗಳ ಹಿಂದೆ ಪತ್ತೆಯಾಗಿದ್ದ ಒಂದು ಅಸ್ಥಿಪಂಜರದ ಹಿಂದಿನ ಕೊಲೆಯ ರಹಸ್ಯವನ್ನು ಕೊಡಿಗೆಹಳ್ಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಪತ್ನಿಯ ಅಕ್ರಮ ಸಂಬಂಧದ ಕಾರಾಣಕ್ಕೆ ಎರಡನೇ ಪತಿಯಿಂದ ಹತ್ಯೆ ನಡೆದಿದೆ ಎಂಬ ಆಘಾತಕಾರಿ ವಿಚಾರವೊಂದು ಗೊತ್ತಾಗಿದೆ. ಪತಿ ಫಯಾಜ್ ಪಾಷಾ ಪತ್ನಿ ಸುಜಾತಾಳನ್ನು ಹತ್ಯೆ ಮಾಡಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ನವೆಂಬರ್ 6ರಂದು ಬೆಂಗಳೂರಿನಲ್ಲಿ ಏಳು ಜನರ ಸರಣಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಅದೇ ದಿನ ಮಧ್ಯಾಹ್ನದ ಸುಮಾರಿಗೆ ಕೊಡಿಗೆಹಳ್ಳಿ ಬಳಿಯ ಬಿಬಿಎಂಪಿ ಶಾಲೆಯೊಂದರ ಬಳಿಯೂ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕಾರಣ ಶಾಲೆ ಬಳಿ ಪತ್ತೆಯಾದ ಒಂದು ಅಸ್ಥಿಪಂಜರ.
ಇದನ್ನೂ ಓದಿ: ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ಲವ್: ಪೋಷಕರಿಂದಲೇ ವಿದ್ಯಾರ್ಥಿನಿ ಅಪಹರಣ
ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದದಲ್ಲಿ ಅಸ್ಥಿಪಂಜರ ಮಾತ್ರ ಉಳಿದಿತ್ತು. ಕೂದಲೆಲ್ಲಾ ಹಾಗೆ ಇದ್ದ ಕಾರಣ ಮೇಲ್ನೋಟಕ್ಕೆ ಮಹಿಳೆ ಅಸ್ಥಿಪಂಜರ ಎಂದು ಗೊತ್ತಾಗಿತ್ತು. ಆದರೆ ಆ ಅಸ್ಥಿಪಂಜರ ಯಾರದ್ದು, ಕೊಲೆಯೋ, ಆತ್ಮಹತ್ಯೆಯೋ ಅಥವಾ ಸ್ಮಶಾನದಿಂದ ನಾಯಿಗಳು ಎಳೆದು ತಂದಿವೆಯೋ ಎಲ್ಲಾ ಅನುಮಾನಗಳ ನಡುವೆ, ಸ್ಥಳಕ್ಕೆ ಬಂದಿದ್ದ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ತನಿಖೆ ವೇಳೆ ಮಹಿಳೆಯ ಮೃತದೇಹ ಎಂದು ಖಾತ್ರಿಯಾಗ್ತಿದ್ದು, ಸುತ್ತಮುತ್ತಲಿನ ಚಲನವಲನ ಸಿಸಿಟಿವಿ ದೃಶ್ಯ ಎಲ್ಲವನ್ನ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ವೇಳೆ ಆ ಮೃತದೇಹ ಸುಜಾತಾ ಎಂಬ 34 ವರ್ಷದ ಮಹಿಳೆಯದ್ದು ಎಂದು ಗೊತ್ತಾಗಿದೆ. ಅಲ್ಲದೇ ಫಯಾಜ್ ಪಾಷಾ ಎಂಬ ಆಕೆಯ ಪತಿಯಿಂದಲೇ ಆಕೆಯ ಹತ್ಯೆಯಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಪಾರ್ಕ್ ಬಳಿ ಯಾರು ಇಲ್ಲದ ಸಮಯದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಮೃತದೇಹವನ್ನ ಯಾರಿಗೂ ಕಾಣದಂತೆ ಚೀಲಕ್ಕೆ ತುಂಬಿ ಮುಚ್ಚಿಟ್ಟು ಹೋಗಿದ್ದ ಎಂಬುದು ಗೊತ್ತಾಗಿದೆ.
ಸುಜಾತಾರ ಮೊದಲ ಗಂಡ ಮೃತಪಟ್ಟು ಐದು ವರ್ಷವಾಗಿದೆ. ಇತ್ತೀಚೆಗೆ 24 ವರ್ಷದ ಫಯಾಜ್ ಪಾಷಾ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಸುಜಾತಾ, ಐದು ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ ಸುಜಾತಾ ನಡತೆ ಸರಿ ಇಲ್ಲಾ ಎಂದು ಫಯಾಜ್ ಜಗಳ ಮಾಡಿ ಬಿಟ್ಟು ಹೋಗಿದ್ದ.
ಇಬ್ಬರ ನಡುವಿನ ಜಗಳದ ಬಳಿಕ ಮತ್ತೆ ಒಟ್ಟಿಗಿರೋಣ ಎಂದು ಸುಜಾತಾ ತಾನೇ ಹೋಗಿ ಪತಿಯನ್ನ ಕರೆದುಕೊಂಡು ಬಂದಿದ್ದಳು. ಫಯಾಜ್ ಮರಳಿ ಬಂದ ನಂತರ ಮತ್ತೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಇದೇ ಜಗಳ ಮುಂದುವರೆದು ಪಾರ್ಕ್ ಬಳಿ ಸುಜಾತಳಿಗೆ ಚಾಕು ಇರಿದು ಕೊಲೆ ಮಾಡಿದ್ದ. ಬಳಿಕ ಯಾರಿಗೂ ಕಾಣದ ಹಾಗೆ ಮೃತದೇಹ ಬಚ್ಚಿಟ್ಟು ಹೋಗಿದ್ದ. ನವೆಂಬರ್ 6ರಂದು ಮೃತದೇಹ ಪತ್ತೆ ಆಗಿದ್ದು, ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪತಿ ನೇಣು ಹಾಕಿಕೊಂಡಿದ್ದನ್ನು ಕಂಡು ಪತ್ನಿಯೂ ಆತ್ಮಹತ್ಯೆ: ಸಂಸಾರದಲ್ಲಿ ಆಗಿದ್ದೇನು?
ಅಸ್ಥಿಪಂಜರ ಪತ್ತೆಯಾದ ಕಾರಣಕ್ಕೆ ಎರಡು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಆರೋಪಿಯನ್ನ ಬಂಧಿಸಿರುವ ಪೊಲೀಸರು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.