ತಮಿಳುನಾಡಿನ ಓಂ ಶಕ್ತಿ ದೇಗುಲದ ಪೀಠಾಧಿಪತಿ ಬಂಗಾರು ಅಡಿಗಳಾರ್ ಹೃದಯಾಘಾತದಿಂದ ವಿಧಿವಶ
ಕರ್ನಾಟಕ ಸೇರಿದಂತೆ ಸುಮಾರು 15 ದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ತಮಿಳುನಾಡಿನ ಚೆಗಲ್ಪಟ್ಟು ಜಿಲ್ಲೆಯಲ್ಲಿರುವ ಓಂ ಶಕ್ತಿ ದೇಗುಲದ ಪೀಠಾಧಿಪತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಂಗಾರು ಅಡಿಗಳಾರ್(82) ಇಂದು ಸಂಜೆ 6.30ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಈ ಕುರಿತಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು, ಅಕ್ಟೋಬರ್ 19: ತಮಿಳುನಾಡಿನ ಚೆಗಲ್ಪಟ್ಟು ಜಿಲ್ಲೆಯಲ್ಲಿರುವ ಓಂ ಶಕ್ತಿ ದೇಗುಲದ ಪೀಠಾಧಿಪತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಂಗಾರು ಅಡಿಗಳಾರ್ (Bangaru Adigalar) (82) ಇಂದು ಸಂಜೆ 6.30ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬಂಗಾರು ಅಡಿಗಳಾರನ್ನು ಭಕ್ತರು ಓಂ ಶಕ್ತಿ ಅಮ್ಮ ಎಂದು ಕರೆಯುತ್ತಿದ್ದರು. ಪ್ರತಿದಿನವೂ ಮಹಿಳೆಯರು ಪೂಜೆ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರುವ ಮೂಲಕ ದೊಡ್ಡ ಕ್ರಾಂತಿ ಮಾಡಿದವರು. ಅಡಿಗಳಾರು ಆಧ್ಯಾತ್ಮಿಕ ಸೇವೆಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿತ್ತು.
ಕರ್ನಾಟಕ ಸೇರಿದಂತೆ ಸುಮಾರು 15 ದೇಶಗಳಲ್ಲಿ ಅಡಿಗಳಾರಿಗೆ ಲಕ್ಷಾಂತರ ಭಕ್ತರಿದ್ದಾರೆ. ಬಂಗಾರು ಅಡಿಗಳಾರ್ ಮೇಲ್ಮರುವತ್ತೂರಿನ ಆದಿ ಪರಾಶಕ್ತಿ ಸಿದ್ಧರ ಪೀಠದ ಸ್ಥಾಪಕರು ಮತ್ತು ಗುರುಗಳು. ಬಂಗಾರು ಅಡಿಗರು ಸಿದ್ದರ ಪೀಡಂ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಸಾಕಷ್ಟು ಸಮಾಜ ಸೇವೆಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ ಎಂದಿದ್ದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯೂಟರ್ನ್
ಬಂಗಾರು ಅಡಿಗಳಾರು ವಿಧಿವಶರಾಗಿರುವ ಮಾಹಿತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಕ್ತರ ಪಾಲಿನ ‘ಅಮ್ಮ’ ಇನ್ನಿಲ್ಲ. ತಮಿಳುನಾಡಿನಲ್ಲಿರುವ ಮೇಲ್ಮರವತ್ತೂರಿನ ಓಂ ಶಕ್ತಿ /ಆದಿಪರಾಶಕ್ತಿ ದೇವಸ್ಥಾನದ ಸಂಸ್ಥಾಪಕರು ಹಾಗೂ ಮುಖ್ಯಸ್ಥರಾದ ಶ್ರೀ ಬಂಗಾರು ಅಡಿಗಳಾರ್ ರವರು ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರಿಗೆ ಶಕ್ತಿ ದೇವತೆಯರ ದೇವಾಲಯಗಳ ಗರ್ಭಗುಡಿಯೊಳಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದ ಮಾತೃಹೃದಯಿ ಸ್ವಾಮೀಜಿಯವರು ಲಕ್ಷಾಂತರ ಭಕ್ತರ ಪಾಲಿಗೆ ‘ಅಮ್ಮ’ನೇ ಆಗಿದ್ದರು.
ಸಂಸದ ಬಿ.ವೈ.ರಾಘವೇಂದ್ರ ಪೋಸ್ಟ್
ಅವರ ನಿರ್ಗಮನದಿಂದ ಜಗತ್ತು ಒಂದು ಅಧ್ಯಾತ್ಮಿಕ ಚೇತನವನ್ನೇ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಓಂ ಶಕ್ತಿ ತಾಯಿ ಶಾಂತಿ ನೀಡಲೆಂದು ಮತ್ತು ಅವರ ಕುಟುಂಬಸ್ಥರಿಗೆ ಹಾಗೂ ಕೋಟಿ ಕೋಟಿ ಭಕ್ತಾದಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:58 pm, Thu, 19 October 23